
ಬಿಗಿಯಾದ ಪ್ಯಾಂಟ್ ಧರಿಸಿರುವ ಸಂಸದೆಯನ್ನು ಸಂಸತ್ತಿನಿಂದಲೇ ಹೊರಹಾಕಿದ ಸ್ಪೀಕರ್... ಘಟನೆ ನಡೆದಿರುದೆಲ್ಲಿ ಗೊತ್ತೇ..?
Sunday, June 6, 2021
ಡೋಡೋಮಾ (ತಾಂಜೇನಿಯಾ): ಸಂಸದೆಯೋರ್ವರನ್ನು ಬಿಗಿಯಾದ ಪ್ಯಾಂಟ್ ಧರಿಸಿದ್ದಕ್ಕಾಗಿ ಸಂಸತ್ತಿನಿಂದ ಹೊರಗೆ ಕಳುಹಿಸಿ, ಸರಿಯಾಗಿ ವಸ್ತ್ರ ಧರಿಸಿ ಸಂಸತ್ತು ಪ್ರವೇಶಿಸಬೇಕೆಂದು ತಾಕೀತು ಮಾಡಿರುವ ಘಟನೆ ತಾಂಜೇನಿಯಾದಲ್ಲಿ ನಡೆದಿದೆ.
ಸಂಸದೆ ಕಂಡೆಸ್ಟರ್ ಸಿಚ್ವಾಲೆ ಟೈಟ್ ಪ್ಯಾಂಟ್ ಹಾಕಿ ಸಂಸತ್ತು ಪ್ರವೇಶಿಸಿದ್ದರು. ಇದಕ್ಕಾಗಿ ಅವರು ಕ್ಷಮೆ ಯಾಚಿಸಬೇಕೆಂದು ಮಹಿಳಾ ಸಂಸದೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಂಸದ ಹುಸೇನ್ ಅಮರ್, ಸಿಚ್ವಾಲೆಯ 'ವಿಚಿತ್ರ' ಉಡುಪನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ."ಸಂಸತ್ತು ಸಮಾಜದ ಪ್ರತಿಬಿಂಬವಾಗಿದೆ. ನಮ್ಮ ಸಂಸತ್ತಿನ ನಿಯಮದ ಪ್ರಕಾರ ಮಹಿಳಾ ಜನಪ್ರತಿನಿಧಿಗಳು ಬಿಗಿಯಾದ ಜೀನ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ. ನಮ್ಮ ಕೆಲವು ಸಹೋದರಿಯರು ವಿಚಿತ್ರವಾದ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಅವರು ಸಮಾಜಕ್ಕೆ ಏನು ತೋರಿಸುತ್ತಿದ್ದಾರೆ?" ಎಂದು ಹುಸೇನ್ ಅಮರ್ ಪ್ರಶ್ನಿಸಿದ್ದಾರೆ.
ಇಷ್ಟಾಗುವಾಗ ಸ್ಪೀಕರ್ ಜಾಬ್ ನ್ಡುಗೈ, "ಸರಿಯಾದ ಬಟ್ಟೆ ಧರಿಸಿದ ಬಳಿಕವೇ ಬಂದು ನಮ್ಮೊಂದಿಗೆ ಕಲಾಪಕ್ಕೆ ಮತ್ತೆ ಸೇರಿಕೊಳ್ಳಿ" ಎಂದು ಸಿಚ್ವಾಲೆಯನ್ನು ಹೊರ ಕಳುಹಿಸಿದ್ದಾರೆ. ಸಂಸದೆಯರ ಉಡುಪುಗಳ ಬಗ್ಗೆ ದೂರು ಸ್ವೀಕರಿಸಿದ್ದು ಇದೇ ಮೊದಲಲ್ಲ ಎಂದು ಹೇಳಿರುವ ಸ್ಪೀಕರ್, ಅನುಚಿತ ಬಟ್ಟೆ ಧರಿಸುವವರಿಗೆ ಪ್ರವೇಶ ನಿರಾಕರಿಸಲು ಸೂಚನೆ ನೀಡಿದ್ದಾರೆ.