ಅತ್ಯಾಚಾರ ಮಾಡಿ ಜೈಲು ಸೇರಿದ್ದವ ಜಾಮೀನಿನ ಮೇಲೆ ಹೊರಬಂದು ಆಕೆಯನ್ನೇ ಕೊಂದ!
Monday, June 14, 2021
ಜೈಪುರ: ಯುವತಿಯನ್ನು ಅತ್ಯಾಚಾರ ಮಾಡಿ ಜೈಲು ಸೇರಿದ್ದ ಆರೋಪಿ, ಜಾಮೀನು ಪಡೆದು ಜೈಲಿನಿಂದ ಹೊರಬಂದು ಯುವತಿಯನ್ನು ಕೊಲೆ ಮಾಡಿರುವ ಘಟನೆ ರಾಜಸ್ಥಾದನ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ.
ಅಂಗವಾಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.ಯುವತಿ ಮದುವೆಯಾಗಿ ಎರಡು ಮಕ್ಕಳಿದ್ದು ಗಂಡನಿಂದ ದೂರಾಗಿದ್ದಳು. ಅದೇ ಊರಿನ ಕಾಮುಕನೊಬ್ಬ ಆಕೆಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದ. ಆಗ ತಪ್ಪಿಸಿಕೊಂಡಿದ್ದ ಮಹಿಳೆ ಪೊಲೀಸ್ ದೂರು ದಾಖಲಿಸಿದ್ದಳು. ಅದಾದ ಮೇಲೆ ಸುಮ್ಮನಾಗಿದ್ದ ಆತ 2020ರಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರದಲ್ಲಿ ಮತ್ತೊಮ್ಮೆ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು.
ಆರೋಪಿಗೆ ಇತ್ತೀಚೆಗೆ ಜಾಮೀನು ಸಿಕ್ಕಿದ್ದು, ಹೊರಬಂದ ಆತ ಮಹಿಳೆಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ. ಭಾನುವಾರ ರಾತ್ರಿ ಮಾರುವೇಷದಲ್ಲಿ ಸಂತ್ರಸ್ತೆಯ ಮನೆಗೆ ನುಗ್ಗಿದ ಆತ ಮಲಗಿದ್ದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲೇ ಆಕೆಯ ಸಹೋದರಿಯೂ ಇದ್ದು, ಇಬ್ಬರನ್ನೂ ಚಾಕುವಿನಿಂದ ಇರಿದಿದ್ದಾನೆ. ಮಹಿಳೆಯರು ಕೂಗಾಡುವುದನ್ನು ಕೇಳಿ ಓಡಿಬಂದ ಗ್ರಾಮಸ್ಥರು ತಕ್ಷಣ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆಯಾಗಿದ್ದ ಮಹಿಳೆಗೆ ಹೆಚ್ಚಿನ ಗಾಯವಾಗಿದ್ದರಿಂದಾಗಿ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಆಕೆಯ ಸಹೋದರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.