ಪುಟ್ಟ ಕಂದಮ್ಮನನ್ನು ಚಿತ್ರಹಿಂಸೆ ಕೊಟ್ಟು ಕೊಂದ ತಾಯಿ
Monday, June 14, 2021
ವಾಷಿಂಗ್ಟನ್: ತನ್ನದೇ ಪುಟ್ಟ ಕಂದಮ್ಮ. ಒಂದು ಸಣ್ಣ ತಪ್ಪು ಮಾಡಿತು ಎಂಬ ಕಾರಣಕ್ಕೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಮಜೇಲಿಕ್ ಎಂಬ ಹೆಸರಿನ ನಾಲ್ಕು ವರ್ಷದ ಕಂದಮ್ಮ ಆಟವಾಡಿಕೊಂಡಿತ್ತು. ಆದರೆ ಆ ಮಗು ಒಂದೇ ಒಂದು ಸಣ್ಣ ತಪ್ಪು ಮಾಡಿತೆಂಬ ಸಿಟ್ಟಿಗೆ ಆಕೆಯ ತಾಯಿ ಮನೆಯ ಲಾಡ್ರಿ ಬಳಿ ಮಜೇಲಿಕ್ಳನ್ನು ನಿಂತೇ ಇರುವಂತೆ ಶಿಕ್ಷೆ ನೀಡಿದ್ದಾಳೆ. ಮೂರು ದಿನಗಳ ಕಾಲ ಆ ಮಗುವಿಗೆ ಕೂರಲೂ ಬಿಡದೆ ನಿಂತೇ ಇರುವಂತೆ ನೋಡಿಕೊಂಡಿದ್ದಾಳೆ. ಊಟ ತಿಂಡಿ ಇಲ್ಲದೆ ಮೂರು ದಿನ ನಿಂತಿದ್ದ ಮಗು ಅಲ್ಲೇ ಪ್ರಾಣ ಬಿಟ್ಟಿದೆ.
ಮಜೇಲಿಕ್ ಕಾಣೆಯಾಗಿದ್ದಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆಕೆಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಆದರೆ ಆಕೆ ಸಿಕ್ಕಿಲ್ಲ. ಅದಾದ ನಂತರ ಮನೆಗೆ ಬಂದ ಪೊಲೀಸರು ಸರಿಯಾಗಿ ತನಿಖೆ ನಡೆಸಿದಾಗ ಮೃತಳ ಅಕ್ಕ ಬಾಯಿ ಬಿಟ್ಟಿದ್ದಾಳೆ. ತಂಗಿಯನ್ನು ದಿನಗಟ್ಟಲೆ ನಿಲ್ಲಿಸಿ ಸಾಯುವಂತೆ ಅಮ್ಮ ಮಾಡಿದಳು. ಅದಾದ ಮೇಲೆ ಅವಳ ಹೆಣವನ್ನು ತೊಳೆದು, ಅದನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ಹಾಕಿ ಕಾರಿನಲ್ಲಿಟ್ಟಿದ್ದಳು. ಆ ಹೆಣ ಐದು ದಿನಗಳ ಕಾಲ ಕಾರಿನಲ್ಲೇ ಇತ್ತು. ಅದಾದ ಮೇಲೆ ಅದನ್ನು ಮನೆಯ ಹಿಂದೆಯೇ ಹೂತು ಹಾಕಿದ್ದಾಳೆ ಎಂದು 13 ವರ್ಷದ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಇದೀಗ ಆಕೆಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.