ಫಾದರ್ಸ್ ಡೇ ಯಂದೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ತಂದೆ-ಮಕ್ಕಳು
Sunday, June 20, 2021
ಬೆಳಗಾವಿ: ಫಾದರ್ಸ್ ಡೇ ಯಂದೇ ತಂದೆಯೋರ್ವನು ತನ್ನ ಇಬ್ಬರು ಪುತ್ರಿಯರೊಂದಿಗೆ ನೇಣಿಗೆ ಶರಣಾದ ಘಟನೆ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿಯಲ್ಲಿ ಭಾನುವಾರ ಸಂಭವಿಸಿದೆ.
ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದ ನಿವಾಸಿ ಕಾಡಪ್ಪ ರಂಗಾಪುರೆ(48), ಕೀರ್ತಿ(20) ಮತ್ತು ಸ್ಪೂರ್ತಿ(18) ಆತ್ಮಹತ್ಯೆಗೆ ಶರಣಾದ ತಂದೆ-ಮಕ್ಕಳು.
ಕಾಡಪ್ಪ ರಂಗಾಪುರೆಯವರ ಪತ್ನಿ ಚನ್ನವ್ವ ರಂಗಾಪುರೆ(40) ಜೂ.11ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಚನ್ನವ್ವ ಅವರಿಗೆ ಇದಕ್ಕೂ ಮುನ್ನ ಮೂರು ಬಾರಿ ಹೃದಯಾಘಾತವಾಗಿತ್ತು, ಚಿಕಿತ್ಸೆ ಪಡೆದ ಬಳಿಕ ಗುಣಮುಖರಾಗಿದ್ದರು. ಆದರೆ, ಜೂ.11ರಂದು ಮತ್ತೆ ಹೃದಯಾಘಾತ ಸಂಭವಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿದ ನೋವಿನಿಂದ ಹೊರಬರಲಾಗದ ಪತಿ ಕಾಡಪ್ಪ ರಂಗಾಪುರೆ ತನ್ನ ಇಬ್ಬರು ಪುತ್ರಿಯರೊಂದಿಗೆ ಇಂದು ಬೆಳಗಿನ ಜಾವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್‌ಐ ರಾಕೇಶ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ಪತಿ ಹಾಗೂ ಇಬ್ಬರೂ ಪುತ್ರಿಯರು ತೀವ್ರ ಮನನೊಂದಿದ್ದರು ಹೀಗಾಗಿಯೇ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಚಿಕ್ಕೋಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.