ಅನ್ ಲಾಕ್ ಬಳಿಕ ದುಬೈನಲ್ಲಿ ವಿಮಾನ ಸೇವೆಗೆ ಅವಕಾಶ: ಭಾರತದ ಪ್ರಯಾಣಿಕರಿಗೆ ಸಮಸ್ಯೆ?
Sunday, June 20, 2021
ದುಬೈ: ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ದುಬೈನಲ್ಲಿ ಅನ್ಲಾಕ್ ಪ್ರಕ್ರಿಯೆಗಳು ಪ್ರಾರಂಭಿಸಲಾಗುತ್ತಿದ್ದು, ಭಾರತ ಸೇರಿದಂತೆ ಕೆಲವು ದೇಶಗಳ ವಿಮಾನಗಳ ಸೇವೆಗೆ ಅನುಮತಿಸಲಾಗಿದೆ.
ದುಬೈ ಅನುಮೋದಿಸಿರುವ ಎರಡು ಡೋಸ್ ಲಸಿಕೆ ಪಡೆದ ಬಳಿಕ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ದೇಶದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ.
ಈ ಕುರಿತು ಗಲ್ಫ್ ನ್ಯೂಸ್ ವರದಿ ಮಾಡಿದ್ದು, ದುಬೈ ಸರ್ಕಾರ ಜಾರಿಗೊಳಿಸಿರುವ ಶೇಖ್ ಮನ್ಸೂರ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ನೇತೃತ್ವದ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣೆಯ ಸುಪ್ರೀಂ ಸಮಿತಿಯ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಜೂನ್ 23ರಿಂದ ಈ ನಿಯಮ ಜಾರಿ ಬರಲಿದೆ. ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾಗೆ ನಿರ್ಬಂಧಗಳು ಅನ್ವಯಿಸಲಿವೆ. ಸದ್ಯಕ್ಕೆ ವಾಸ್ತವ್ಯದ ವೀಸಾ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ದುಬೈಗೆ ಪ್ರಯಾಣಿಸಲು ಅನುಮತಿ ನೀಡಲಾಗುತ್ತಿದೆ. ಚೀನಾದ ಸಿನೋಫಾರ್ಮ್, ಬಯೋಎನ್ಟೆಕ್ ಫೈಜರ್, ರಷ್ಯಾದ ಸ್ಪುಟ್ನಿಕ್ ವಿ ಮತ್ತು ಆಕ್ಸ್ಫರ್ಡ್ನ ಆಸ್ಟ್ರಾಜೆನೆಕಾ ಲಸಿಕೆಗಳನ್ನು ಎರಡು ಡೋಸ್ ಪಡೆದಿದ್ದರೆ ಮಾತ್ರ ಅವರಿಗೆ ದುಬೈಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಇದು ಮಾತ್ರವಲ್ಲದೇ ದುಬೈಗೆ ಹೊರಡುವ ನಾಲ್ಕು ಗಂಟೆಗಳ ಮೀರದ ಕೋವಿಡ್ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ನೆಗೆಟಿವ್ ವರದಿ ಪ್ರಯಾಣಿಕರಿಗೆ ಕಡ್ಡಾಯವಾಗಿದೆ.
ದುಬೈಗೆ ಹೊರಟ ಬಳಿಕ ಮತ್ತೊಂದು ಆರ್ಟಿಪಿಸಿಆರ್ ಸೋಂಕು ಪರೀಕ್ಷೆ
ಮಾಡಿಸಿಕೊಳ್ಳಬೇಕು. ಸೋಂಕು ಪರೀಕ್ಷೆ ವರದಿ ಬರುವವರೆಗೆ ಕ್ವಾರಂಟೈನನಲ್ಲಿ ಇರಬೇಕು ಎಂದು ಆದೇಶಿಸಲಾಗಿದೆ. ಇನ್ನು ಭಾರತದಲ್ಲಿ ನೀಡಲಾಗುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗೆ ದುಬೈನಲ್ಲಿ ಅನುಮೋದನೆ ನೀಡದಿರುವುದು ದುಬೈಗೆ ತೆರಳುವ ಭಾರತೀಯರಿಗೆ ಸಮಸ್ಯೆಯಾಗಲಿದೆ. ಏಪ್ರಿಲ್ ತಿಂಗಳಿನ ಕೊನೆಯಲ್ಲಿ ಭಾರತದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇಲ್ಲಿಂದ ಹೊರಡುವ ಪ್ರಯಾಣಿಕರಿಗೆ ದುಬೈ ನಿರ್ಬಂಧ ವಿಧಿಸಲಾಗಿತ್ತು.