ಅಟ್ಲೀ ಸಿನಿಮಾದಲ್ಲಿ ಒಂದಾಗಲಿದೆಯೇ ಶಾರುಖ್-ನಯನತಾರ ಜೋಡಿ ?
Sunday, June 27, 2021
ಮುಂಬೈ: ಬಾಲಿವುಡ್ ಕಿಂಗ್ ಶಾರುಖ್ ಖಾನ್ ಹೊಸ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀಯವರು ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವುದು ಎಲ್ಲರಿಗೆ ತಿಳಿದೇ ಇದೆ. ಈ ಹೊಸ ಚಿತ್ರದಲ್ಲಿ ಅಭಿನಯಿಸೋದಕ್ಕೆ ದಕ್ಷಿಣದ ಬಹುಬೇಡಿಕೆಯ ನಟಿಯೋರ್ವರಿಗೆ ಆಫರ್ ಮಾಡಲಾಗಿದೆಯಂತೆ.
ಸತತ ಸೋಲುಗಳ ನಡುವೆ ಗೆಲುವಿಗಾಗಿ ಕಾಯುತ್ತಿರುವ ಕಿಂಗ್ ಖಾನ್ ಶಾರುಖ್, ಆಟ್ಲೀಯವರ ಚಿತ್ರದಲ್ಲಿ ಅಭಿನಯಿಸಲು ಉತ್ಸುಕರಾಗಿದ್ದಾರೆ. ಕಳೆದ ವರ್ಷದಿಂದ ಈ ಸಿನಿಮಾದ ಬಗ್ಗೆ ಸಿನಿ ರಂಗದಲ್ಲಿ ಸಾಕಷ್ಟು ಮಾತುಕತೆಗಳು ಕೇಳಿ ಬರುತ್ತಿವೆ. ಬರುವ ಆಗಸ್ಟ್ ನಲ್ಲಿ ಚಿತ್ರೀಕರಣ ಶುರುವಾಗಲಿದೆ. ಸದ್ಯ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಬ್ಯುಝಿಯಾಗಿರುವ ನಿರ್ದೇಶಕರು, ತಾರಾಗಣದ ಆಯ್ಕೆಯಲ್ಲಿ ತೊಡಗಿಕೊಂಡಿದ್ದಾರೆ.
ಈ ಸಿನಿಮಾಕ್ಕೆ ದಕ್ಷಿಣದ ಪ್ರಖ್ಯಾತ ತಾರೆ ನಯನತಾರಾ ಅವರಿಗೆ ಆಫರ್ ಮಾಡಲಾಗಿದೆಯಂತೆ. ದಕ್ಷಿಣ ಭಾರತೀಯ ಸಿನಿಮಾರಂಗದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಮೊದಲಿಗರಾಗಿರುವ ನಯನತಾರಾ, ಮೊದಲ ಬಾರಿಗೆ ಶಾರುಖ್ ಚಿತ್ರಕ್ಕೆ ನಾಯಕಿಯಾಗಿ ಮಿಂಚಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ನಯನತಾರಾ ಈಗಾಗಲೇ ಅಟ್ಲೀ ಜೊತೆ ‘ರಾಜ ರಾಣಿ’ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಅವರು ಅಟ್ಲೀ ಜೊತೆ ‘ಬಿಗಿಲ್’ ಸಿನಿಮಾದಲ್ಲೂ ಕೆಲಸ ಮಾಡಿದ್ದರು.
ನಯನತಾರಾಗೆ ಶಾರುಖ್ ಖಾನ್ ನಟನೆಯ ‘ಚೆನ್ನೈ ಎಕ್ಸ್ ಪ್ರೆಸ್’ ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಳ್ಳಲು ಆಫರ್ ಮಾಡಲಾಗಿತ್ತು. ಆದರೆ ನಯನತಾರಾ ಅಂದು ಆ ಆಫರ್ ಅನ್ನು ತಿರಸ್ಕರಿಸಿದ್ದರು ಎಂಬ ಮಾತು ಕೇಳಿಬಂದಿತ್ತು. ಬಳಿಕ ಆ ಹಾಡಿಗೆ ದಕ್ಷಿಣದ ಮತ್ತೋರ್ವ ಖ್ಯಾತ ನಟಿ ಪ್ರಿಯಾಮಣಿ ಹೆಜ್ಜೆಹಾಕಿದ್ದರು. ಆದರೆ ಇದೀಗ ಅವರು ಶಾರುಖ್ ಖಾನ್ ಜೊತೆ ನಟಿಸಲು ಗ್ರೀನ್ ಸಿಗ್ನಲ್ ಕೊಡುತ್ತಾರಾ ಎಂದು ಕಾದುನೋಡಬೇಕು. ಒಂದುವೇಳೆ ಶಾರುಖ್ ಮತ್ತು ನಯನತಾರಾ ಒಟ್ಟಿಗೆ ತೆರೆಮೇಲೆ ಬಂದಲ್ಲಿ ಖಂಡಿತಾ ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಲಿದೆ.