ಸುಂದರಿಯ ಬಲೆಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ಯುವಕ
ಬೆಳಗಾವಿ : ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಪರಿಚಯವಾದ ಮಹಿಳೆ ಮದುವೆಯಾಗುವ ಮಾತುಗಳನ್ನಾಡಿ ಯುವಕನಿಂದ 1.17 ಲಕ್ಷ ರೂ. ದೋಚಿರುವ ಘಟನೆ ಕುಂದಾನಗರಿಯಲ್ಲಿ ನಡೆದಿದೆ.
ನಗರದ ಮಾಳಮಾರುತಿ ಠಾಣಾ ವ್ಯಾಪ್ತಿಯ ಯುವಕ, ಗೆಳೆಯನ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಫೆಬ್ರವರಿಯಲ್ಲಿ ಪ್ರೋಫೈಲ್ ಕ್ರಿಯೇಟ್ ಮಾಡಿದ್ದ. ಮಾರ್ಚ್ ಮೊದಲನೇ ವಾರ ಯುವಕನಿಗೆ ರಿಕ್ವೆಸ್ಟ್ ಮೆಸೇಜ್ ಒಂದು ಬಂದಿತ್ತು. ನನ್ನ ಹೆಸರು ಮಾಯಾ ಅನ್ವೇಕರ್, ಇಂಗ್ಲೆಂಡ್ನಲ್ಲಿ ಕೆಲಸ ಮಾಡುತ್ತಿದ್ದು, ಒಳ್ಳೆಯ ಎಜುಕೇಟೆಡ್ ರಿಚ್ ಫ್ಯಾಮಿಲಿಯಲ್ಲಿ ಬೆಳೆದಿದ್ದೇನೆ. ಸದ್ಯ ಮದುವೆಯಾಗಲು ವರ ಹುಡುಕುತ್ತಿದ್ದು, ನಿಮ್ಮ ಪ್ರೊಫೈಲ್ ಇಷ್ಟವಾಯ್ತು. ಅದಕ್ಕೆ ಮೆಸೇಜ್ ಮಾಡಿದ್ದೇನೆ. ನನ್ ಈಮೇಲ್ ಐಡಿಗೆ ನಿಮ್ಮ ವಾಟ್ಸ್‌ಆ್ಯಪ್ ನಂಬರ್ ಕಳ್ಸಿ, ನಾನು ನನ್ನ ಫೋಟೋ ವಿವರ ಕಳುಹಿಸ್ತೇನಿ ಅಂತ ಮೆಸೇಜ್ ಹಾಕಿದ್ದಾಳೆ.
ಮಾರ್ಚ್ ಮೊದಲನೇ ವಾರದಲ್ಲಿ ನಾನೂ ಇಂಡಿಯಾಗೆ ಬರ್ತಿದ್ದು, ಭೇಟಿಯಾಗೋಣ ಅಂತ ತಿಳಿಸಿದ್ದಾಳೆ. ಮಾರ್ಚ್ 8ರಂದು ಈತನಿಗೆ ಗೋವಾಗೆ ಬರಲು ತಿಳಿಸಿದ್ದಾಳೆ. ಆಕೆಯ ಮಾತು ನಂಬಿ ಈತ ಗೋವಾಗೆ ಹೋಗಿದ್ದಾನೆ. ಆಕೆ ಈತನಿಗೆ ಕರೆ ಮಾಡಿ ತಾನೂ ಮುಂಬೈ ಏರ್ಪೋರ್ಟ್ ತಲುಪಿರುವುದಾಗಿ ತಿಳಿಸಿದ್ದಾಳೆ. ಇದಾದ ಕೆಲ ಹೊತ್ತಿನಲ್ಲಿ ಯುವಕನಿಕೆ ಕಸ್ಟಮರ್ ಕೇರ್ ಮಾದರಿಯ ನಂಬರ್‌ನಿಂದ ಕರೆ ಬಂದಿದೆ. ತಮಗೆ ಭೇಟಿಯಾಗಬೇಕು ಅಂತ ಮಾಯಾ ಅನ್ವೇಕರ್ ಎಂಬುವರು ಬಂದಿದ್ದು, ಅನುಮತಿ ಇಲ್ಲದೇ ಫಾರಿನ್ ಕರೆನ್ಸಿ ಇಟ್ಟುಕೊಂಡು ಬಂದಿದ್ದಾರೆ.ಅದಕ್ಕೆ ಟ್ಯಾಕ್ಸ್ ಕಟ್ಟಿದ್ರೇ ಮಾತ್ರ ಅವರನ್ನ ಬಿಡ್ತೇವಿ ಅಂತ ತಿಳಿಸಿದ್ದಾರೆ. ಇನ್ನೂ ಆ ಕರೆಯನ್ನ ನಂಬಿದ ಯುವಕ ಎಷ್ಟು ದುಡ್ಡು ಕಟ್ಟಬೇಕು ಅಂತ ಕೇಳಿದ್ದಾನೆ. ₹85 ಸಾವಿರ ಅಂತ ತಿಳಿಸಿದಾಗ ಕೂಡಲೇ ಅವರು ನೀಡಿದ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾನೆ. ಇದಾದ ಕೆಲವೇ ನಿಮಿಷಗಳಲ್ಲಿ ಅದೇ ನಂಬರ್‌ನಿಂದ ಮತ್ತೊಂದು ಕರೆ ಬಂದಿದೆ. ಈ ವೇಳೆ ಇನ್ನೂ ₹32 ಸಾವಿರ ಹಣ ಸೇರಿಸಬೇಕು ಅಂತ ಹೇಳಿದ್ದಾರೆ. ಆಗಲೂ ಕೂಡ ಹಿಂದೆ ಮುಂದೆ ವಿಚಾರ ಮಾಡದೇ ಈತ ಹಣ ವರ್ಗಾವಣೆ ಮಾಡಿದ್ದಾನೆ. ಇದಾದ ಒಂದು ಗಂಟೆ ಬಳಿಕ ಮತ್ತೆ ಕರೆ ಬಂದು ಮಾಯಾ ಬಳಿ ಎರಡು ಕೋಟಿ ರೂಪಾಯಿ ಚೆಕ್ ಇದ್ದು, ಅದನ್ನ ಕನ್ವರ್ಟ್ ಮಾಡೋಕೆ ಇನ್ನೂ ಒಂದು ಲಕ್ಷ ತೊಂಬತ್ತು ಸಾವಿರ ಹಣ ಹಾಕಿ ಅಂದಿದ್ದಾರೆ. ಇದರಿಂದ ಸಂಶಯಗೊಂಡ ಯುವಕ ಕೂಡಲೇ ತನ್ನ ಗೆಳೆಯನಿಗೆ ಕರೆ ಮಾಡಿ ವಿಚಾರ ಹೇಳಿದ್ದಾನೆ. ಆತ ಇದೆಲ್ಲವೂ ಫೇಕ್ ಇದೆ, ನೀನು ಬೆಳಗಾವಿಗೆ ಹೊರಟ ಬಿಡು ಅಂದಿದ್ದಾನೆ.
ಇನ್ನು, ಈತನಿಂದ ಹಣ ಸಿಗಲ್ಲ ಅಂತ ಗೊತ್ತಾದ ಬಳಿಕ ಆತನ ನಂಬರ್ ಬ್ಲಾಕ್ ಮಾಡಿದ್ದಾಳೆ. ಕೆಲ ದಿನಗಳ ಬಳಿಕ ಈತ ಬೆಳಗಾವಿಯ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.