ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ: ರಹಸ್ಯ ಬಿಚ್ಚಿಟ್ಟ ಗೂಗಲ್ ಸರ್ಚ್ ಹಿಸ್ಟರಿ!!
Monday, June 21, 2021
ಭೋಪಾಲ್: ಕೊಲೆ ಮಾಡುವುದು ಮತ್ತು ಮೃತದೇಹವನ್ನು ವಿಲೇವಾರಿ ಮಾಡುವುದು ಹೇಗೆ ಎಂದು ಇಂಟರ್ನೆಟ್ನಲ್ಲಿ ಸರ್ಚ್ ಮಾಡಿ, ಪ್ರಿಯಕರನ ಸಹಾಯದಿಂದ ಗಂಡನ ಕೊಲೆ ಮಾಡಿ ಪರಾರಿಯಾಗಿದ್ದ ಪತ್ನಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ನಡೆದಿದೆ.
ಹರ್ದಾ ಜಿಲ್ಲೆಯ ಖೇಡಿಪುರ್ ಏರಿಯಾದ ತಬಸ್ಸುಮ್ ಜೂನ್ 18ರಂದು ತನ್ನ ಗಂಡ ಅಮೀರ್ ಮೃತಪಟ್ಟಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಘಟನಾ ಸ್ಥಳಕ್ಕೆ ಬಂದಿದ್ದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರಂಭದಲ್ಲಿ ಕೊಲೆಯ ಹಿಂದೆ ದರೋಡೆ ಕಾರಣ ಇರಬಹುದು ಎಂದು ತನಿಖಾಗಾರರು ಸಂಶಯ ವ್ಯಕ್ತಪಡಿಸಿದ್ದರು. ಆದರೆ, ಸ್ಥಳದಲ್ಲಿ ಸಿಕ್ಕಂತಹ ಸಾಕ್ಷ್ಯಾಗಳನ್ನು ಪರೀಕ್ಷಿಸಿದಾಗ ಕೊಲೆಯಲ್ಲಿ ಪತ್ನಿಯ ಕೈವಾಡ ಇರುವ ಶಂಕೆ ವ್ಯಕ್ತವಾಗಿತ್ತು. ಇದಾದ ಬಳಿಕ ತನಿಖಾಗಾರರು ತಬಸ್ಸುಮ್ ಕಾಲ್ ಡಿಟೇಲ್ಸ್ ತೆಗೆದುಕೊಂಡು ಪರೀಕ್ಷಿಸಿದರು.
ಈ ವೇಳೆ ಆಕೆ ಇರ್ಫಾನ್ ಎಂಬಾತನ ಜತೆ ನಿರಂತರ ಸಂಪರ್ಕದಲ್ಲಿರುವುದು ತಿಳಿದಿದೆ.
ಇದಾದ ಬಳಿಕ ಪೊಲೀಸರು ತಬಸ್ಸುಮ್ ಇಂಟರ್ನೆಟ್ ಸರ್ಚ್ ಹಿಸ್ಟರಿಯನ್ನು ಪರಿಶೀಲಿಸಿದಾಗ ಕೊಲೆ ಮಾಡುವ ವಿಧಾನಗಳು, ಕಾಲ ಮತ್ತು ಕೈಗಳನ್ನು ಕಟ್ಟಿಹಾಕುವ ಬಗೆ ಮತ್ತು ಮೃತದೇಹವನ್ನು ಹೇಗೆ ವಿಲೇವಾರಿ ಮಾಡಬೇಕೆಂದು ಗೂಗಲ್ನಲ್ಲಿ ಸರ್ಚ್ ಮಾಡಿದ್ದಾಳೆ. ಈ ಎಲ್ಲ ಅಂಶಗಳ ಆಧಾರದ ಮೇಲೆ ತನಿಖಾಗಾರರ ತಬಸ್ಸುಮ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಿಯಕರ ಇರ್ಫಾನ್ ಜತೆಗೂಡಿ ಗಂಡ ಅಮೀರ್ನನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.