ಮದುವೆಯಾಗಲು ಒಲ್ಲೆ ಎಂದಿರುವುದಕ್ಕೆ ಗಾಂಜಾ ಕೇಸ್ ನಲ್ಲಿ ಸಿಲುಕಿಸಿದ ಸ್ನೇಹಿತ: ಮಹಿಳೆಗೆ ಶಾಕ್
Sunday, June 27, 2021
ತಿರುವನಂತಪುರಂ: ಮದುವೆಯಾಗಲು ಒಲ್ಲೆ ಎಂದ ಉದ್ಯಮಿ ಮಹಿಳೆಯೋರ್ವರನ್ನು ಗಾಂಜಾ ಪ್ರಕರಣದಲ್ಲಿ ಸ್ನೇಹಿತನೇ ಸಿಲುಕಿಹಾಕಿದ್ದಾನೆ. ಈ ಪ್ರಕರಣದಿಂದ ಹೊರಬರಲು ಆಕೆ ಒಂದು ತಿಂಗಳ ಕಾಲ ಕಾನೂನು ಹೋರಾಟ ನಡೆಸಿ, ಕೊನೆಗೂ ತಾನೊಬ್ಬ ಅಮಾಯಕಿ ಎಂಬುದನ್ನು ಸಾಬೀತು ಮಾಡಿದ್ದಾರೆ.
ವಜಯಿಲಾ ನಿವಾಸಿ ಶೋಭಾ ವಿಶ್ವನಾಥನ್ ಎಂಬ ಕೈಮಗ್ಗದ ಅಂಗಡಿಯ ವೀವರ್ ವಿಲ್ಲಾ ಮಾಲಕರಾಗಿದ್ದಾರೆ. ವ್ಯಕ್ತಿಯೊಬ್ಬನ ದ್ವೇಷದ ಸಂಚಿನಿಂದ ಗಾಂಜಾ ಕೇಸ್ನಲ್ಲಿ ಸಿಲುಕಿಕೊಂಡಿದ್ದರು.
ಶೋಭಾ ವಿಶ್ವನಾಥನ್ ಅವರ ಸಂಸ್ಥೆಯಿಂದ ಸುಮಾರು ಅರ್ಧ ಕೆಜಿ ಗಾಂಜಾ ವಶಪಡಿಸಿಕೊಂಡ ಮ್ಯೂಸಿಯಂ ಪೊಲೀಸ್ ಮತ್ತು ನಾರ್ಕೊಟಿಕ್ ಸೆಲ್ ಶೋಭಾರನ್ನು ಬಂಧಿಸಿತ್ತು. ಆ ಬಳಿಕ ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದರೂ, ಈ ಅನಿರೀಕ್ಷಿತ ಬಂಧನದಿಂದ ಶೋಭಾ ತುಂಬಾ ಅವಮಾನಗಳನ್ನು ಅನುಭವಿಸಬೇಕಾಯಿತು. ತಮ್ಮ ಕಂಪನಿಯಲ್ಲಿ ಗಾಂಜಾ ಹೇಗೆ ಬಂತು ಎಂಬ ಗೊಂದಲದಲ್ಲಿದ್ದ ಶೋಭಾ, ತಾನು ಅಮಾಯಕಿ ಎಂದು ಸಾಬೀತು ಮಾಡಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದರು. ಇದಾದ ಬಳಿಕ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಹಾಗೂ ಡಿಜಿಪಿಗೆ ಶೋಭಾ ದೂರು ನೀಡಿದ್ದರು.
ಈ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗ ಕೈಗೆತ್ತಿಕೊಂಡಿತ್ತು. ತನಿಖೆ ನಡೆಸಿದ ತಂಡ ಇದರಲ್ಲಿ ಶೋಭಾ ಸ್ನೇಹಿತ ಹರೀಶ್ ಹರಿದಾಸ್ ಕೈವಾಡ ಇರುವುದಾಗಿ ಬಯಲು ಮಾಡಿದೆ. ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಆಕೆಯನ್ನು ಗಾಂಜಾ ಪ್ರಕರಣದಲ್ಲಿ ಸಿಲುಕಿಸಿರುವುದಾಗಿ ಬಯಲಾಗಿದೆ. ವಿವೇಕ್ ಎಂಬಾತನಲ್ಲಿ ಶೋಭಾ ಕಂಪನಿಯಲ್ಲಿ ಹರೀಶ್ ಗಾಂಜಾ ಇರಿಸಿರುವುದು ತನಿಖೆಯ ವೇಳೆ ಬಯಲಾಗಿದೆ. ಅಲ್ಲದೆ, ಕಂಪನಿ ಮೇಲೆ ದಾಳಿ ಮಾಡುವಂತೆ ಕರೆ ಮಾಡಿದ್ದ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ನಿಜಾಂಶ ತಿಳಿದು ಶೋಭಾ ಶಾಕ್ ಆಗಿದ್ದಾರೆ.
ಹರೀಶ್ ಈ ರೀತಿ ಮಾಡುತ್ತಾರೆ ಎಂದು ನಾನು ನಿರೀಕ್ಷೆಯನ್ನು ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ. ಶೋಭಾ ಮೇಲಿದ್ದ ಕೇಸ್ ಅನ್ನು ವಜಾಗೊಳಿಸಲಾಗಿದ್ದು, ಹರೀಶ್ ಮತ್ತು ವಿವೇಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.