
ವರದಕ್ಷಿಣೆ ತಂದಿಲ್ಲವೆಂದು ಗುಪ್ತಾಂಗಕ್ಕೆ ಕೋಲು ತುರುಕಿ ಭಾವಂದಿರಿಂದಲೇ ಗ್ಯಾಂಗ್ ರೇಪ್: ಉತ್ತರ ಪ್ರದೇಶದಲ್ಲೊಂದು ಹೇಯಕೃತ್ಯ
Sunday, June 27, 2021
ಲಖನೌ: ವರದಕ್ಷಿಣೆ ತಂದಿಲ್ಲವೆಂದು ಮದುವೆಯಾಗಿ ಮೂರೇ ದಿನದಲ್ಲಿ ನವವಿವಾಹಿತೆಯ ಮೇಲೆ ಭಾವಂದಿರೇ ಗ್ಯಾಂಗ್ ರೇಪ್ ನಡೆಸಿ, ಸಂತ್ರಸ್ತೆಯ ಗುಪ್ತಾಂಗಕ್ಕೆ ಕೋಲು ಹಾಕಿ ಬೆಂಕಿ ಹಚ್ಚಿರುವ ಹೇಯಕೃತ್ಯವೊಂದು ಉತ್ತರ ಪ್ರದೇಶದ ಬಾದಾನ್ ಜಿಲ್ಲೆಯಲ್ಲಿ ನಡೆದಿದೆ.
ಸಂತ್ರಸ್ತ ಯುವತಿಯನ್ನು ಬಾದನ್ ಜಿಲ್ಲೆಯ ಜರಿಫ್‌ನಗರದ ಉಸ್ಮಾನ್‌ಪುರದ ಯುವಕನಿಗೆ ಜೂನ್ 22ರಂದು ಮದುವೆ ಮಾಡಿಕೊಡಲಾಗಿತ್ತು. ಆದರೆ ಆಕೆ ವರದಕ್ಷಿಣೆ ತಂದಿಲ್ಲವೆನ್ನುವ ಕಾರಣಕ್ಕೆ ಪತಿಯ ಮನೆಯವರಿಗೆ ಕೋಪ ಇತ್ತಂತೆ. ಈ ಕಾರಣಕ್ಕೆ ಮದುವೆಯಾಗಿ ಮೂರು ದಿನ ಕಳೆದ ಬಳಿಕೆ ಆಕೆಯ ಭಾವಂದಿರು ಸೇರಿ ಒಟ್ಟು ಆರೇಳು ಮಂದಿ ಆಕೆಯ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಾರೆ. ಇದಕ್ಕೆ ಅತ್ತಿಗೆಯಂದಿರೂ ಸಹಕರಿಸಿದ್ದಾರೆ. ಅದಾದ ಮೇಲೆ ಆಕೆಯ ಗುಪ್ತಾಂಗಕ್ಕೆ ಕೋಲನ್ನು ಹಾಕಿ ಅದಕ್ಕೆ ಬೆಂಕಿ ಹಚ್ಚಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.
ಇವರ ಹೇಯಕೃತ್ಯ ಇಷ್ಟಕ್ಕೆ ನಿಲ್ಲದೆ ಸಂತ್ರಸ್ತೆಗೆ ವಿಷ ಕುಡಿಸುವ ಪ್ರಯತ್ನವನ್ನೂ ಗಂಡನ ಮನೆಯವರು ಮಾಡಿದ್ದಾರೆ ಎಂದು ದೂರಲಾಗಿದೆ. ಈ ವಿಚಾರವನ್ನು ಆಕೆ ತನ್ನ ತಂದೆಗೆ ತಿಳಿಸಿದ್ದಾಳೆ. ತಕ್ಷಣ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿ, ಪೊಲೀಸರೊಂದಿಗೆ ಆಕೆಯ ಪತಿಯ ಮನೆಗೆ ತೆರಳಿ ಮಗಳನ್ನು ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಕರಣದ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು, ಸಂತ್ರಸ್ತೆಯ ಗಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.