ಆಫ್ರಿಕನ್ ಮಹಿಳೆ ಹತ್ತು ಶಿಶುಗಳಿಗೆ ಜನ್ಮ ನೀಡಿರುವುದು ಸುಳ್ಸುದ್ದಿ: ತನಿಖೆ ಬಯಲಿಗೆಳೆದ ಸತ್ಯ
Sunday, June 27, 2021
ಜಿಂಬಾಬ್ವೆ: ಗೌಟೆಂಗ್ ಪ್ರಾಂತ್ಯದ ಯಾವುದೇ ಆಸ್ಪತ್ರೆಗಳಲ್ಲಿಯೂ ಮಹಿಳೆಯೋರ್ವರು ಹತ್ತು ಶಿಶುಗಳಿಗೆ ಜನ್ಮ ನೀಡಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಸ್ಥಳೀಯಾಡಳಿತ ಹೇಳಿದೆ ಎಂದು ಹೇಳಿರುವ reuters ಅಧಿಕೃತ ತನಿಖೆ ನಡೆಸಿ ಈ ಸುದ್ದಿ ನಿಜವಲ್ಲ ಎಂದು ವರದಿ ಮಾಡಿದೆ.
ಗೋಸಿಯಾಮೆ ಸಿತೋಲೆ ಎಂಬ 37 ವರ್ಷದ ಮಹಿಳೆ ಈ ತಿಂಗಳು ಹತ್ತು ಶಿಶುಗಳಿಗೆ ಜನ್ಮ ನೀಡಿದ್ದಾಳೆಂಬ ಸುದ್ದಿಯೊಂದು ಹರಡಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲ ಎಂದು ಹೇಳಿರುವ ಗೌಟೆಂಗ್ ಪ್ರಾಂತ್ಯದ ಜಿಲ್ಲಾಡಳಿತ ಗೋಸಿಯಾಮೆ ಸಿತೋಲೆ ಇತ್ತೀಚೆಗೆ ಗರ್ಭಿಣಿಯಾಗಿದ್ದರು ಎಂಬುದಕ್ಕೆ ಯಾವುದೇ ವೈದ್ಯಕೀಯ ಪರೀಕ್ಷೆಗಳ ದಾಖಲೆಗಳನ್ನು ತೋರಿಸಿಲ್ಲ. ಆದ್ದರಿಂದ ಈ ಮಹಿಳೆಯನ್ನು ಮಾನಸಿಕ ಆರೋಗ್ಯ ಕಾಯಿದೆಯನ್ವಯ ವಶಪಡಿಸಿಕೊಳ್ಳಲಾಗಿದ್ದು ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು reuters ವರದಿ ಮಾಡಿದೆ.
ಆದರೆ ಈ ಸುದ್ದಿಯನ್ನು ಮೊದಲು ಪ್ರಕಟಿಸಿದ್ದ ಪ್ರೆಟೋರಿಯಾ ನ್ಯೂಸ್ ಒಡೆತನ ಹೊಂದಿರುವ 'ಇಂಡಿಪೆಂಡೆಂಟ್ ಆನ್‍ಲೈನ್' ತನ್ನ ವರದಿಯನ್ನು ಸಮರ್ಥಿಸಿದೆ. ಮಹಿಳೆ 10 ಶಿಶುಗಳನ್ನು ಪ್ರೆಟೋರಿಯಾದ ಸ್ಟೀವ್ ಬಿಕೊ ಅಕಾಡೆಮಿಕ್ ಆಸ್ಪತ್ರೆಯಲ್ಲಿ ಜೂನ್ 7ರಂದು ಜನ್ಮ ನೀಡಿದ್ದರು. ಆದರೆ ಈ ಹೆರಿಗೆ ನಡೆಸಲು ಅಲ್ಲಿನ ವೈದ್ಯಕೀಯ ಸಿಬ್ಬಂದಿ ಸಿದ್ಧವಾಗಿರಲಿಲ್ಲ. ಜೊತೆಗೆ ವೈದ್ಯಕೀಯ ನಿರ್ಲಕ್ಷ್ಯವನ್ನು ಮುಚ್ಚಿಹಾಕಲು ಸ್ಥಳೀಯಾಡಳಿತ ಹಾಗೂ ಆಸ್ಪತ್ರೆ ಆಡಳಿತ ಯತ್ನಿಸುತ್ತಿದೆ ಎಂದು ವರದಿಯಲ್ಲಿ ಹೇಳಿದೆ. ಆದರೆ ಈ ಹೇಳಿಕೆಯನ್ನು ನಿರಾಕರಿಸಿರುವ ಸ್ಥಳೀಯಾಡಳಿತ ಸುದ್ದಿ ಪ್ರಕಟಿಸಿದ ಮಾಧ್ಯಮದ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
ಗೋಸಿಯಾಮೆ ಸಿತೋಲೆಗೆ ಆರು ವರ್ಷದ ಅವಳಿ ಮಕ್ಕಳಿದ್ದು ಆಕೆ ಮತ್ತು ಆಕೆಯ ಸಂಗಾತಿ ತೆಬೊಹೊ ತ್ಸೊತೆಟ್ಸಿ ಎಂಬವರು ಜೊಹಾನೆಸ್‍ಬರ್ಗ್ ಸಮೀಪದ ಗೌಟೆಂಗ್ ಪ್ರಾಂತ್ಯದ ತೆಂಬಿಸಿಯಾದಲ್ಲಿ ವಾಸವಾಗಿದ್ದಾರೆ. ಇಂಡಿಪೆಂಡೆಂಟ್ ಆನ್‍ಲೈನ್ ವರದಿಗಾರರು ಮೇ ತಿಂಗಳಲ್ಲಿ ಈ ದಂಪತಿಯನ್ನು ಸಂದರ್ಶನ ಮಾಡಿದ್ದು ಅವರು ಎಂಟು ಶಿಶುಗಳನ್ನು ನಿರೀಕ್ಷಿಸುತ್ತಿರುವುದಾಗಿ ತಿಳಿಸಿದ್ದರೆನ್ನಲಾಗಿದೆ. ಆಗ ತೆಗೆಯಲಾದ ಫೋಟೋವೊಂದು ಸಿತೋಲೆ ತುಂಬು ಗರ್ಭಿಣಿ ಎಂದು ತೋರಿಸುತ್ತಿತ್ತು. ಬಳಿಕ ಈಕೆ 10 ಶಿಶುಗಳಿಗೆ ಜನ್ಮ ನೀಡಿದ್ದಾಳೆಂದು ಪ್ರೆಟೋರಿಯಾ ನ್ಯೂಸ್ ಜೂನ್ 8ರಂದು ಪ್ರಕಟಿಸಿತ್ತಲ್ಲದೆ ಸಿತೋಲೆಯ ಸಂಗಾತಿ ತ್ಸೊತೆಟ್ಸಿ ಮಾಹಿತಿ ನೀಡಿದ್ದಾಗಿಯೂ ತಿಳಿಸಿತ್ತು. ತನ್ನ ಸಂಗಾತಿ ಆಸ್ಪತ್ರೆಯೊಳಗಿನಿಂದ ತನಗೆ ಸಂದೇಶ ಕಳುಹಿಸಿದ್ದರು ಹಾಗೂ ಕೋವಿಡ್ ನಿರ್ಬಂಧಗಳಿಂದಾಗಿ ಆಸ್ಪತ್ರೆಗೆ ಪ್ರವೇಶಿಸಲು ಸಾಧ್ಯವಿಲ್ಲವೆಂದೂ ಆತ ತಿಳಿಸಿದ್ದಾನೆಂದು ವರದಿಯಾಗಿತ್ತು. ಹತ್ತು ಶಿಶುಗಳ ಜನ್ಮ ಕುರಿತು ಸ್ಥಳೀಯ ಮೇಯರ್ ದೃಢಪಡಿಸಿದ್ದರಿಂದ ಸುದ್ದಿ ಎಲ್ಲೆಡೆ ಪ್ರಕಟಗೊಂಡಿತ್ತಲ್ಲದೆ `ತೆಂಬೀಸಿಯ 10' ಎಂದು ಬಣ್ಣಿಸಲ್ಪಟ್ಟ ಶಿಶುಗಳಿಗೆ ದೇಣಿಗೆ ಸಂಗ್ರಹ ಕೂಡ ಆರಂಭಗೊಂಡಿತ್ತು.
ಈ ನಡುವೆ ಸಿತೋಲೆ ನಾಪತ್ತೆಯಾಗಿದ್ದಾಳೆಂದು ಆಕೆಯ ಸಂಗಾತಿ ಆರೋಪಿಸಿದರೆ ಆತ ಶಿಶುಗಳನ್ನು ಬಳಸಿ ಹಣ ಮಾಡಲು ಹೊರಟಿದ್ದಾನೆಂದು ಆಕೆ ಆರೋಪಿಸಿದ್ದಳು. ಇನ್ನೊಂದೆಡೆ ತ್ಸೊತೆಟ್ಟಿ ದೇಣಿಗೆ ಸಂಗ್ರಹಣೆ ನಿಲ್ಲಿಸುವಂತೆಯೂ ಮನವಿ ಮಾಡಿದ್ದ. ಇತ್ತೀಚಿಗಿನ ಬೆಳವಣಿಗೆಯಲ್ಲಿ ಸಾಮಾಜಿಕ ಕಾರ್ಯಕರ್ತರು ಮಹಿಳೆಯನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲಿಸಿದ್ದಾರೆ.