ಮಂತ್ರವಾದಿಯೊಬ್ಬ ಮಹಿಳೆಯ ಕನಸಿನಲ್ಲಿ ಬಂದು ಮಾಡುತ್ತಿದ್ದ ರೇಪ್: ದೂರು ನೋಡಿ ಬೆಚ್ಚಿಬಿದ್ದ ಪೊಲೀಸರು
Thursday, June 24, 2021
ಔರಂಗಾಬಾದ್ (ಬಿಹಾರ): ಬಿಹಾರ ಔರಂಗಾಬಾದ್ ಜಿಲ್ಲೆಯ ಕುದ್ವಾ ಪೊಲೀಸ್ ಠಾಣೆಗೆ ಬಂದು ಮಹಿಳೆಯೊಬ್ಬರು ನೀಡಿರುವ ದೂರನ್ನು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದು, ಇದರ ತನಿಖೆ ಹೇಗೆ ಮಾಡುವುದೆಂದು ತಕೆಕೆಡಿಸಿಕೊಳ್ಳುತ್ತಿದ್ದಾರೆ.
ಔರಂಗಾಬಾದ್ ಜಿಲ್ಲೆಯ ಗಾಂಧಿ ಮೈದಾನದ ನಿವಾಸಿಯಾದ ಮಹಿಳೆಯು "ದಿನವೂ ಮಂತ್ರವಾದಿಯೊಬ್ಬ ಕನಸಿನಲ್ಲಿ ಬಂದು ತನ್ನನ್ನು ಅತ್ಯಾಚಾರ ಮಾಡುತ್ತಿದ್ದಾನೆ" ಎಂದು ದೂರು ನೀಡಿದ್ದಾಳೆ. ಪೊಲೀಸರು ಇಂಥದ್ದೊಂದು ದೂರು ದಾಖಲು ಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಮಹಿಳೆಯ ಮಗುವಿಗೆ ತೀವ್ರ ಅನಾರೋಗ್ಯ ಬಾಧಿಸಿದ್ದು, ಯಾರೋ ನೀಡಿದ ಸಲಹೆಯಂತೆ ಈಕೆ ಪ್ರಶಾಂತ್ ಚತುರ್ವೇದಿ ಎಂಬ ಮಾಟಗಾರರನ್ನು ಸಂಪರ್ಕಿಸಿದ್ದಾರೆ. ಆ ವೇಳೆ ಮಂತ್ರವೊಂದನ್ನು ಹೇಳಿಕೊಟ್ಟು ದಿನವೂ ಜಪಿಸಲು ತಿಳಿಸಿದ್ದಾನೆ. 15 ದಿನ ಸತತವಾಗಿ ಇದೇ ಮಂತ್ರ ಹೇಳುತ್ತಾ ಬಂದ ನಂತರ ಆಕೆಯ ಮಗ ಪ್ರಾಣ ಕಳೆದುಕೊಂಡಿದ್ದಾನೆ. ಇದನ್ನು ಮಂತ್ರವಾದಿಗೆ ಹೇಳಿದಾಗ ತನ್ನನ್ನು ಕಾಳಿ ದೇವಸ್ಥಾನಕ್ಕೆ ಬಂದು ಭೇಟಿಯಾಗಲು ಹೇಳಿದ್ದಾನೆ. ಅಲ್ಲಿಗೆ ಹೋಗಿದ್ದ ಮಹಿಳೆಯನ್ನು ಮಂತ್ರವಾದಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ಇದರಿಂದ ಮಹಿಳೆ ಹೇಗೋ ಪಾರಾಗಿದ್ದಾಳೆ. ಈ ಬಗ್ಗೆ ದೂರು ನೋಡಿರುವ ಮಹಿಳೆ "ಆ ದಿನದಿಂದ ನಿತ್ಯವೂ ತನ್ನ ಕನಸಿನಲ್ಲಿ ಬಂದು ಅತ್ಯಾಚಾರ ಮಾಡುತ್ತಿದ್ದಾನೆ. ಜೀವನವೇ ಬೇಸರವಾಗಿ ಹೋಗಿದೆ. ಮಲಗಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ" ಎಂದು ಮಹಿಳೆ ದೂರಿದ್ದಾರೆ.
ಈ ದೂರಿನ ಆಧಾರದ ಮೇಲೆ ಮಂತ್ರವಾದಿಯನ್ನು ಪೊಲೀಸರು ಕರೆಸಿದ್ದಾರೆ. ಆದರೆ ಈಕೆಯನ್ನು ಭೇಟಿಯಾಗಿರುವ ಬಗ್ಗೆ ಯಾವುದೇ ದಾಖಲೆಗಳು ಸಿಗಲಿಲ್ಲ. ಮಾತ್ರವಲ್ಲದೇ ಕನಸಿನಲ್ಲಿ ಬಂದು ರೇಪ್ ಮಾಡುತ್ತಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರವಿಲ್ಲದ ಕಾರಣ ಆತನನ್ನು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಆದರೆ ಮಹಿಳೆ ಮಾತ್ರ ಏನೂ ಮಾಡಲಾಗದೇ ಅಸಹಾಯಕಳಾಗಿದ್ದಾಳೆ.