ಮುಳುವಾದ "ಕುರಿ"- ಮಂಗಳೂರಿನಲ್ಲಿ ದಂಪತಿಗಳ ಆತ್ಮಹತ್ಯೆ!
Wednesday, June 9, 2021
ಮಂಗಳೂರು: ಚೀಟಿ ವ್ಯವಹಾರ ನಡೆಸಿ, ಆರ್ಥಿಕ ಸಂಕಷ್ಟದಲ್ಲಿದ್ದ ದಂಪತಿ ಆತ್ಮಹತ್ಯೆ ಮಾಡಿಕೊಂಡು ಮನಕಲಕುವ ಘಟನೆ ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಂಟೋಸ್ ಲೇನ್ ಚೌಟಾಸ್ ಕಂಪೌಂಡ್ ನಲ್ಲಿ ನಡೆದಿದೆ.
ಸುರೇಶ್ ಶೆಟ್ಟಿ (62) ಹಾಗೂ
ವಾಣಿ ಶೆಟ್ಟಿ(52) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಸುರೇಶ್ ಶೆಟ್ಟಿಯವರು ಸ್ಥಳೀಯ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದು, ತಬಲ ವಾದಕರೂ ಆಗಿದ್ದರು. ವಾಣಿ ಶೆಟ್ಟಿಯವರು ದಾದಿಯಾಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಇವರು ಚೀಟಿ ವ್ಯವಹಾರ(ಕುರಿ) ವನ್ನೂ ನಡೆಸುತ್ತಿದ್ದರು. ಆದರೆ ಲಾಕ್ ಡೌನ್ ಬಳಿಕ ಚೀಟಿ ತೆಗೆದುಕೊಂಡವರು ಸರಿಯಾಗಿ ಹಣ ಪಾವತಿಸದೆ ಸತಾಯಿಸುತ್ತಿದ್ದರು. ಅದೇ ರೀತಿ ಇವರು ಹಣ ಕೊಡಬೇಕಾದರು ಬಂದು ಪದೇ ಪದೇ ಹಣ ಕೇಳುತ್ತಿದ್ದರು. ಬೆದರಿಕೆಯನ್ನೂ ಹಾಕುತ್ತಿದ್ದರು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
ಇದೇ ನೋವಿನಲ್ಲಿ ಪತ್ನಿ ವಾಣಿ ಶೆಟ್ಟಿಯವರು ತಮ್ಮದೇ ಮನೆಯ ಟೆರೇಸ್ ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೆಳ್ಳಂಬೆಳಗ್ಗೆ ಪತಿ ಸುರೇಶ್ ಶೆಟ್ಟಿಯವರು ವಾಣಿ ಶೆಟ್ಟಿಯವರ ಸಹೋದರಿಯರಿಗೆ ವಿಚಾರ ತಿಳಿಸಿದ್ದಾರೆ. ಬಳಿಕ ಎಲ್ಲರೂ ಮನೆಗೆ ಬಂದಾಗ ಸುರೇಶ್ ಶೆಟ್ಟಿಯವರು ಮನೆಯಲ್ಲಿ ಇರಲಿಲ್ಲ. ಹುಡುಕಾಡಿದಾಗ ಡೆತ್ ನೋಟ್ ಸಿಕ್ಕಿದ್ದು, ಅವರು ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡುವುದಾಗಿ ತಿಳಿಸಿದ್ದಾರೆ. ಅದರಂತೆ ಬಾವಿಯಲ್ಲಿ ನೋಡಿದಾಗ ಸುರೇಶ್ ಶೆಟ್ಟಿ ಮೃತದೇಹ ದೊರಕಿದೆ. ಇಬ್ಬರ ಮೃತದೇಹ ಮಹಜರು ಮಾಡಲು ವೆನ್ಲಾಕ್ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.
ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.