ಗರ್ಭಿಣಿಯರಿಗೆ ಗುಡ್ ನ್ಯೂಸ್- ಲಸಿಕೆ ಪಡೆಯಲು ಮಾರ್ಗಸೂಚಿ ಬಿಡುಗಡೆ
Wednesday, June 30, 2021
ಹೊಸದಿಲ್ಲಿ: ದೇಶಾದ್ಯಂತ ಇನ್ನು ಮುಂದೆ ಗರ್ಭಿಣಿಯರಿಗೂ ಲಸಿಕೆ ನೀಡುವ ಕಾರ್ಯ ಆರಂಭವಾಗಲಿದೆ.
ಕೇಂದ್ರ ಸರಕಾರ ಮಂಗಳವಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾರ್ಗಸೂಚಿಯಲ್ಲಿ ಈ ರೀತಿಯಾಗಿ ಇದೆ:
ಗರ್ಭಿಣಿಯರಿಗೆ ಸೋಂಕು ತಗಲಿದರೂ ಶೇ.90ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲದೇ ಗುಣಮುಖರಾಗಿದ್ದಾರೆ. ಆದರೆ ಗಂಭೀರ ರೋಗ ಲಕ್ಷಣ ಇರುವವರಿಗೆ ಅಪಾಯ ಹೆಚ್ಚಿರುವ ಕಾರಣ, ಅಂಥವರು ಆಸ್ಪತ್ರೆಗೆ ದಾಖಲಾಗಲೇಬೇಕು. ಅತ್ಯಧಿಕ ರಕ್ತದೊತ್ತಡ, ಮಧುಮೇಹ, ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ, ಅತಿಕಾಯ, 35 ವರ್ಷ ಮೇಲ್ಪಟ್ಟವರು ಹೆಚ್ಚಿನ ನಿಗಾ ವಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖೀಸಲಾಗಿದೆ. ಜತೆಗೆ ಕೊರೊನಾ ಸೋಂಕಿತ ತಾಯಿಗೆ ಜನಿಸಿದ ಶೇ.95ರಷ್ಟು ಮಕ್ಕಳು ಆರೋಗ್ಯವಂತರಾಗಿದ್ದಾರೆ. ಕೆಲವೇ ಕೆಲವು ಪ್ರಕರಣಗಳಲ್ಲಿ ಮಾತ್ರ ಅವಧಿ ಪೂರ್ವ ಹೆರಿಗೆ, ಮಗುವಿನ ತೂಕ ಇಳಿಕೆಯಂಥ ಘಟನೆಗಳು ನಡೆದಿವೆ ಎಂದೂ ತಿಳಿಸಲಾಗಿದೆ.
ಎಲ್ಲ ಗರ್ಭಿಣಿಯರೂ ಕೋವಿನ್ ಆ್ಯಪ್ ನಲ್ಲಿ ನೋಂದಣಿ ಮಾಡಿಕೊಂಡು ಅಥವಾ ಲಸಿಕಾ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ಲಸಿಕೆ ಪಡೆಯಬಹುದು ಎಂದು ಸರಕಾರ ತಿಳಿಸಿದೆ. ಜತೆಗೆ, ಅವರಿಗೆ ಲಸಿಕೆ ನೀಡುವ ಮುನ್ನ ಆ ಕುರಿತು ಆಪ್ತ ಸಮಾಲೋಚನೆ, ಸೂಕ್ತ ಮಾರ್ಗದರ್ಶನ ನೀಡುವಂತೆ ಮುಂಚೂಣಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ.