
ಪತಿಯಲ್ಲಿ ಈ ಲಕ್ಷಣಗಳು ಇದ್ದಾಗ ವಿಚ್ಛೇದನ ಸಿಗುತ್ತಾ?
ಪ್ರಶ್ನೆ: ಅಪ್ಪ ಅಮ್ಮ ನೋಡಿ ಮಾಡಿದ ಮದುವೆ. ಗಂಡ ಹೊಡೆಯಲ್ಲ, ಬಡಿಯಲ್ಲ, ಗುಣ ಒಳ್ಳೆಯದು. ಆದರೆ ಅವರ ಸಮಸ್ಯೆ ಏನೋ ಗೊತ್ತಿಲ್ಲ . ನಾನು ಮದುವೆಯಾಗಿ ವರ್ಷವಾಗುತ್ತಾ ಬಂದಿದೆ. ಇದುವರೆಗೆ ಒಂದು ದಿನವೂ ನನ್ನನ್ನು ಮುಟ್ಟೇ ಇಲ್ಲ. ಒಂದೇ ಹಾಸಿಗೆಯಲ್ಲಿ ಮಲಗಿದರೂ ನನ್ನಿಂದ ದೂರವೇ ಮಲಗುತ್ತಾರೆ. ಡಾಕ್ಟರ್ ಹತ್ತಿರ ಹೋಗೋಣ, ಮ್ಯಾರೇಜ್ ಕೌನ್ಸೆಲರ್ ಹತ್ತಿರ ಹೋಗೋಣ ಎಂದರೆ ಒಪ್ಪುವುದಿಲ್ಲ. ಇನ್ನೆರಡು ದಿನ ಆಗಲಿ, ನಾನು ನಿನ್ನ ಹತ್ತಿರ ಬರುತ್ತೇನೆ ಎನ್ನುತ್ತಲೇ ಇದ್ದಾರೆ. ಆ ದಿನ ಬರುತ್ತಲೇ ಇಲ್ಲ. ಅವರ ತಂದೆ ತಾಯಿಯರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ನನಗೆ ಏನು ಮಾಡಬೇಕೋ ತಿಳಿಯುತ್ತಿಲ್ಲ. ಹೊಡೆತ ಬಡೆತ ಏನೂ ಇಲ್ಲದಾಗ ನನಗೆ ವಿಚ್ಛೇದನ ಸಿಗುತ್ತದೆಯೇ? ಅವರು ನಪುಂಸಕನಾಗಿರುವ ಬಗ್ಗೆ ಸಂದೇಹವೂ ಶುರುವಾಗಿದೆ. ಆದರೆ ಏನು ಮಾಡುವುದೋ ತಿಳಿಯುತ್ತಿಲ್ಲ. ನಾನು ನ್ಯಾಯಾಲಯದಿಂದ ಯಾವ ರೀತಿಯ ಪರಿಹಾರ ಪಡೆಯಬಹುದು ದಯವಿಟ್ಟು ತಿಳಿಸಿ.
ಉತ್ತರ: ದೈಹಿಕ ಸಂಬಂಧ ವಿವಾಹದ ಒಂದು ಮುಖ್ಯವಾದ ಅಂಶ. ನಿಮ್ಮ ಪತಿ ತನ್ನ ನಪುಂಸಕತೆಯ ಕಾರಣದಿಂದ ನಿಮ್ಮ ಹತ್ತಿರ ಬರದೇ ಇದ್ದರೆ ನೀವು ನ್ಯಾಯಾಲಯದಲ್ಲಿ ನಿಮ್ಮ ವಿವಾಹವನ್ನೇ ರದ್ದುಗೊಳಿಸಬೇಕು ಎಂದು `ನಲ್ಲಿಟೀ ಆಫ್ ಮ್ಯಾರೇಜ್’ ಆದೇಶ ಕೋರಿ ಅರ್ಜಿ ಹಾಕಬಹುದು. ಒಂದು ವೇಳೆ ಆತ ನಪುಂಸಕನಲ್ಲದೇ ಇದ್ದು ನಿಮ್ಮ ಹತ್ತಿರ ದೈಹಿಕ ಸಂಬಂಧವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತಿದ್ದರೆ ಆಗ ಅದು ಕ್ರೂರತೆ ಆಗುತ್ತದೆ. ಆ ಆಧಾರದ ಮೇಲೆಯೂ ನೀವು ವಿಚ್ಛೇದನ ಪಡೆಯಬಹುದು. ಹೊಡೆತ ಬಡೆತ ಮಾಡಿದಾಗಲಷ್ಟೇ ಕ್ರೂರತೆ ಎಂದು ಹೇಳಲಾಗುವುದಿಲ್ಲ. ದೈಹಿಕ ಸಂಪರ್ಕವನ್ನು ನಿರಾಕರಿಸುವುದೂ ಕ್ರೂರತೆಯೇ. ಒಂದು ವೇಳೆ ನಿಮ್ಮ ಪತಿ ನಪುಂಸಕನಾಗಿದ್ದು ಅದನ್ನು ಮುಚ್ಚಿಟ್ಟು ನಿಮ್ಮನ್ನು ವಿವಾಹವಾಗಿದ್ದರೆ ನಿಮಗೆ ಮೋಸ ಮಾಡಿದಂತೆ ಆಗುತ್ತದೆ, ನೀವು ಈ ಆಧಾರದ ಮೇಲೆ ಅವರಿಂದ ಪರಿಹಾರ ಪಡೆಯಲೂ ದಾವೆಯ ಕ್ರಮ ಜರುಗಿಸಬಹುದು.