ಅಪ್ರಾಪ್ತೆಯನ್ನು ಅತ್ಯಾಚಾರಗೈದು ಗರ್ಭಿಣಿಯಾಗಿಸಿದ ಟಿಕ್ ಸ್ಟಾರ್ ಬಂಧನ!
Sunday, June 13, 2021
ಕೊಚ್ಚಿ: ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ, ವಂಚನೆಗೈದಿರುವ ಕೇರಳದ ಟಿಕ್ ಟಾಕ್ ಸ್ಟಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಅಂಬಿ ಯಾನೆ ವಿಘ್ನೇಶ್ ಕೃಷ್ಣ(19) ಬಂಧಿತ ಆರೋಪಿ.
ವಿಘ್ನೇಶ್ ಕೃಷ್ಣ ಟಿಕ್ ಟಾಕ್ ವೀಡಿಯೋಗಳನ್ನು ಮಾಡುವ ಮೂಲಕ ಪ್ರಸಿದ್ಧಿ ಪಡೆದಿದ್ದ. ಕಳೆದ ವರ್ಷ ಈತನಿಗೆ ಸಾಮಾಜಿಕ ಜಾಲತಾಣದ ಅಪ್ರಾಪ್ತೆಯೋರ್ವಳ ಪರಿಚಯವಾಗಿದೆ. ಬಳಿಕ ಆಕೆಯನ್ನು ಭೇಟಿಯಾಗಿತ್ತಿದ್ದ ಆರೋಪಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಈ ನಡುವೆ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅಪ್ರಾಪ್ತೆ ತಿಳಿಸಿದ್ದಾಳೆ.
ಪರಿಣಾಮ ಇದೀಗ ಅಪ್ರಾಪ್ತೆಯು ಗರ್ಭಿಣಿಯಾಗಿದ್ದು, ಆಕೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸುಳಿವು ದೊರಕುತ್ತಿದ್ದಂತೆ ವಿಘ್ನೇಶ್ ಕೃಷ್ಣ ಪರಾರಿಯಾಗಿದ್ದಾನೆ. ಪೊಲೀಸರು ಈತನನ್ನು ಹುಡುಕಾಟ ನಡೆಸುತ್ತಿದ್ದಂತೆ, ವಿದೇಶಕ್ಕೆ ಪರಾರಿಯಾಗುವ ಉದ್ದೇಶದಿಂದ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಪಾಸ್ ಪೋರ್ಟ್ ಸಿದ್ಧವಾಗಿದೆಯೆಂದು ವಿಘ್ನೇಶ್ ಕೃಷ್ಣನ ಮನೆಯವರಿಗೆ ತಿಳಿಸಿದ್ದಾರೆ. ಇದನ್ನು ನಂಬಿದ ಆತನನ್ನು ಭೇಟಿಯಾಗಲು ಹೋದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.