
300 ರೂ. ಪಡೆಯಲು ಹೋಗಿ 1.90 ಲಕ್ಷ ರೂ. ಕಳೆದುಕೊಂಡ ಯುವತಿ!
Monday, June 7, 2021
ಆನ್ಲೈನ್ ಶಾಪಿಂಗ್ ನಡೆಸಿರುವ ಯುವತಿಯೊಬ್ಬಳು ಕೋರಿಯರ್ ಸಂಸ್ಥೆಯಿಂದ ಬಾಕಿ ಉಳಿದ 300 ರೂ. ಪಡೆಯಲು ಹೋಗಿ ಬರೋಬ್ಬರಿ 1.90 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಉಷಾರಾಣಿ ಎಂಬಾಕೆ ಆನ್ ಲೈನ್ ಮೂಲಕ ಕೆಲವು ವಸ್ತುಗಳನ್ನು ಖರೀದಿಸಿದ್ದರು. ಅವುಗಳನ್ನು ಮನೆಗೆ ತಲುಪಿಸಿರುವ ಕೊರಿಯರ್ ಸಂಸ್ಥೆಯ ಡೆಲಿವರಿ ಬಾಯ್ ಬಾಕಿ 300 ರೂ. ಕೊಡದೇ ಹೋಗಿದ್ದಾನೆ. ಈ ಕುರಿತು ಉಷಾರಾಣಿ ಕಸ್ಟಮರ್ ಕೇರ್ಗೆ ಕರೆ ಮಾಡಿ ದೂರು ನೀಡಿದ್ದಾಳೆ. ಬಳಿಕ ಕಂಪೆನಿಯ ವ್ಯಕ್ತಿ ಹಣ ಹಿಂದಿರುಗಿಸುವ ಭರವಸೆ ನೀಡಿ ಅರ್ಜಿಯನ್ನು ಕಳುಹಿಸಿ, ಇದನ್ನು ಭರ್ತಿ ಮಾಡುವಂತೆ ಉಷಾರಿಗೆ ಹೇಳಿದ್ದಾನೆ.
ನಂಬಿದ ಉಷಾ ಆತ ಹೇಳಿದಂತೆಯೇ ಮಾಡಿದ್ದಾಳೆ. ಆದರೆ ಹಣ ಬರುವ ಬದಲು ಆಕೆಯ ಖಾತೆಯಲ್ಲಿದ್ದ 91 ಸಾವಿರ ಎಗರಿಸಲಾಗಿತ್ತು. ನಂತರ ಉಷಾ ಈ ಬಗ್ಗೆ ಆತನಿಗೆ ಕೇಳಿದಾಗ ತಪ್ಪಾಗಿದೆ ಮತ್ತೊಂದು ಅರ್ಜಿ ಕಳುಹಿಸುತ್ತೇನೆ, ಭರ್ತಿ ಮಾಡಿ ಕಳುಹಿಸಿ ಎಂದಿದ್ದಾನೆ.
ಉಷಾ ಮತ್ತೆ ಭರ್ತಿ ಮಾಡಿ ಕಳುಹಿಸಿ, ಎರಡನೇ ಭಾರಿ 99 ಸಾವಿರ ಹಣ ಕಳೆದುಕೊಂಡಿದ್ದಾಳೆ. ಆಮೇಲೆ ಆಕೆಗೆ ತಾನು ಮೋಸ ಹೋಗಿರುವುದು ತಿಳಿದಿದ್ದು, ಇದೀಗ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ.