ತಂಗಿ ಸತ್ತ 17 ನೇ ದಿನಕ್ಕೆ ಅಕ್ಕನ ಸಾವು..!! ಮನಕಲಕುವಂತಿದೆ ಇವರಿಬ್ಬರ ದುರಂತ ಕಥೆ..
Sunday, June 27, 2021
ಬೆಂಗಳೂರು: ತಂಗಿ ತನ್ನ ಗಂಡನ ಮನೆಯಲ್ಲಿ ನೇಣುಬಿಗಿದುಕೊಂಡು ಸತ್ತ 17ನೇ ದಿನಕ್ಕೆ ಅಕ್ಕ ಕೂಡ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬೆಳಗೊಂಡ್ಲು ಗ್ರಾಮದಲ್ಲಿ ನಡೆದಿದೆ.
ಉದಯ್ ಮತ್ತು ಅನಿತಾ ದಂಪತಿಗೆ ನಾಲ್ಕು ಮಕ್ಕಳಿದ್ದು ಇದರಲ್ಲಿ ಎರಡು ಮಕ್ಕಳು ದುರಂತ ಸಾವು ಕಂಡಿದ್ದಾರೆ. ಸೌಂದರ್ಯ(21) ಮತ್ತು ಐಶ್ವರ್ಯ (19) ಮೃತ ದುರ್ದೈವಿಗಳು. ಸೌಂದರ್ಯ ಮೊದಲ ಮಗಳು. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದ ಈಕೆ ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂದು ಮದವೆಯಾಗಲು ನಿರಾಕರಿಸಿದ್ದಳು. ಬಳಿಕ ತಂಗಿ ಐಶ್ವರ್ಯಾಗೆ ಕಳೆದ ವರ್ಷ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಾವೇರಿಪುರದ ನಿವಾಸಿ ನಾಗರಾಜು ಜತೆ ಮದುವೆ ಮಾಡಲಾಗಿತ್ತು. ನಾಗರಾಜು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ದಂಪತಿ ಇಬ್ಬರೂ ತುಮಕೂರು ನಗರದ ಸರಸ್ವತಿಪುರಂನಲ್ಲಿ ವಾಸಿಸುತ್ತಿದ್ದರು. ಇನ್ನಿಬ್ಬರು ಮಕ್ಕಳು ಪಿಯುಸಿ, ಎಸ್ಎಸ್ಎಲ್ಸಿ ಓದುತ್ತಿದ್ದಾರೆ.
ಮೊದಲು ಮದುವೆ ನಿರಾಕರಿಸಿದ ಸೌಂದರ್ಯಗೆ ಉಮೇಶ್ ಎಂಬಾತನ ಜತೆ ಫೇಸ್ಬುಕ್ನಿಂದ ಗೆಳೆತನ ಶುರುವಾಗಿ ಕ್ರಮೇಣ ಪ್ರೇಮಾಂಕುರವಾಗಿತ್ತು.ನಂತರ ಇವರಿಬ್ಬರ ಮನೆಯಲ್ಲಿ ಬೇರೆ ಜಾತಿ ಎಂಬ ಕಾರಣಕ್ಕೆ ಒಪ್ಪದಿದ್ದರೂ ಕೂಡ ಇವರಿಬ್ಬರು 2020ರ ನವೆಂಬರ್ನಲ್ಲಿ ಮದುವೆ ಆಗಿ ಆಕೆ ತನ್ನ ಗಂಡನ ಜೊತೆ ಕಾಡಿಗ್ಗೇರಿಯಲ್ಲೇ ವಾಸವಿದ್ದಳು.
ಸೌಂದರ್ಯಳ ತಂಗಿ ಐಶ್ವರ್ಯ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದ್ದು ಅಂತ್ಯಕ್ರಿಯೆಗೆ ಸೌಂದರ್ಯ ತನ್ನ ಗಂಡನ ಜೊತೆ ಬದು ಹೋಗಿದ್ದಳು. ಇದಾದ ಬಳಿಕ 17 ನೇ ದಿನಕ್ಕೆ ಸೌಂದರ್ಯ ಕೂಡ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
ಐಶ್ವರ್ಯಳನ್ನು ಆಕೆಯ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇನ್ನು ಸೌಂದರ್ಯನ ಗಂಡನ ಮನೆಯಲ್ಲಿ ಎಲ್ಲರೂ ಬೇರೆ ಜಾತಿ ಎಂಬ ಕಾರಣಕ್ಕೆ ಆಕೆಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಪೋಷಕರು ಠಾಣೆಯಲ್ಲಿ ದೂರು ನೀಡಿದ್ದಾರೆ.
ತನ್ನ ಇಬ್ಬರು ಮುದ್ದಿನ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.