'ರಾಸ್ಕಲ್, ಅವ ಕಮ್ಯೂನಿಸ್ಟ್.... ' ಆಡಿಯೋ, ವೀಡಿಯೋ ವಿರುದ್ಧ ಡಾ. ಕಕ್ಕಿಲ್ಲಾಯ ದೂರು
Saturday, May 22, 2021
ಮಂಗಳೂರು: ಇತ್ತೀಚೆಗೆ ಮಾಸ್ಕ್ ಹಾಕದೇ ಸುಪರ್ ಮಾರ್ಕೆಟ್‌ನಲ್ಲಿ ಶಾಪಿಂಗ್ ನಡೆಸಿದ್ದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ವಿರುದ್ಧ ಪ್ರಕರಣ ದಾಖಲಾದ ಬಳಿಕ ಅವರ ಮತ್ತು ಅವರ ಕುಟುಂಬದ ವಿರುದ್ಧ ಮಾನಹಾನಿಕರ ಆಡಿಯೋ ವೈರಲ್ ಆಗಿದ್ದು, ಜೊತೆ ಅಂದಿನ ಘಟನೆಯ ಸಿಸಿಟಿವಿ ದೃಶ್ಯಗಳನ್ನು ಜಿಮ್ಮೀಸ್ ಸುಪರ್ ಮಾರ್ಕೆಟ್ ನವರು ಹೊರಬಿಟ್ಟಿದ್ದು, ಈ ಬಗ್ಗೆ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಪೊಲೀಸರಿಗೆ ದೂರು ನೀಡಿದ್ದಾರೆ.
ನಾನು ಕಳೆದ 30 ವರ್ಷಗಳಿಂದ ವೈದ್ಯನಾಗಿ ದುಡಿಯುತ್ತಿದ್ದು, ಕೊರೋನಾ ಸಂದರ್ಭದಲ್ಲಿಯೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ. ಅಲ್ಲದೇ ಈ ಸಾಂಕ್ರಾಮಿಕ ರೋಗದ ಕುರಿತಂತೆ ಅಧ್ಯಯನ ನಡೆಸಿದ್ದು, ಸರಕಾರಕ್ಕೂ ಸಲಹೆ ಸಹಕಾರಗಳನ್ನು ನೀಡಿದ್ದೇನೆ.
ಮೇ. 19 ರಂದು ನಡೆದ ಘಟನೆ ಕುರಿತಂತೆ ನನ್ನ ವಿರುದ್ಧ ಸುಳ್ಳು ದೂರು ದಾಖಲಾಗಿದ್ದು, ಜಿಮ್ಮೀಸ್ ಸೂಪರ್ ಮಾರ್ಕೆಟ್ ನವರು ಕಾನೂನು ವಿರುದ್ಧವಾಗಿ ನಾನಿರುವ ಸಿಸಿಟಿವಿ ದೃಶ್ಯಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಮಾಡಿದ್ದಾರೆ. ಇದು ನನ್ನ ವೈಯಕ್ತಿಕ ಮತ್ತು ವೃತ್ತಿ ಬದುಕಿನ ತೇಜೋವಧೆಯ ಪ್ರಯತ್ನವಾಗಿದೆ. ಅಲ್ಲದೆ ಜಿಮ್ಮೀಸ್ ಸೂಪರ್ ಮಾರ್ಕೆಟ್ ನ ಮಾಲಕ ಮತ್ತು ಪೈ ಎಂಬ ವ್ಯಕ್ತಿಗಳು ಎನ್ನಲಾದವರು ನಡೆಸುತ್ತಿರುವ ಸಂಭಾಷಣೆಯ ಕ್ಲಿಪ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದ್ದು, ಇಲ್ಲಿ ನನ್ನ ಸಿದ್ಧಾಂತ, ಕುಟುಂಬ ಮತ್ತು ಈ ಹಿಂದೆ ಶಾಸಕರು, ರಾಜ್ಯಸಭಾ ಸದಸ್ಯರಾಗಿದ್ದ ನನ್ನ ಮೃತ ತಂದೆಯ ಬಗ್ಗೆಯೂ ಅತ್ಯಂತ ಕೀಳು ಮಟ್ಟದಲ್ಲಿ ಸಂಬೋಧಿಸಿ ಸಂಭಾಷಣೆ ನಡೆಸಿದ್ದಾರೆ. ಅಲ್ಲದೇ ಆಡಿಯೋದಲ್ಲಿ ಮಾತನಾಡಿರು ವ್ಯಕ್ತಿ ನನ್ನ ಮೇಲೆ ಹಲ್ಲೆ ಮಾಡುವಂತೆಯೂ ಪ್ರೇರೇಪಿಸಿದ್ದಾರೆ.
ಇದೆಲ್ಲವೂ ನನ್ನ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಮೇಲಿನ ಪ್ರಹಾರವಾಗಿದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.