-->

Mrpl ನೇಮಕಾತಿಯಲ್ಲಿ ಅಕ್ರಮ ನಡೆದಿದೆ, ಸಂಸದ, ಶಾಸಕರು ರಾಜಿನಾಮೆ ನೀಡಲಿ : ಡಿವೈಎಫ್ಐ (Video)

Mrpl ನೇಮಕಾತಿಯಲ್ಲಿ ಅಕ್ರಮ ನಡೆದಿದೆ, ಸಂಸದ, ಶಾಸಕರು ರಾಜಿನಾಮೆ ನೀಡಲಿ : ಡಿವೈಎಫ್ಐ (Video)





ಮಂಗಳೂರು; Mrpl ನ 224 ಉದ್ಯೋಗದ ನೇಮಕಾತಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಿತ ಕನ್ನಡ ನಾಡಿಗೆ ಬಹುದೊಡ್ಡ ವಂಚನೆ ಎಸಗಲಾಗಿದೆ. ಉತ್ತರ ಪ್ರದೇಶ, ಬಿಹಾರದಿಂದಲೆ ಕನಿಷ್ಟ ನೂರು ಜನ ಅವಕಾಶ ಪಡೆದಿದ್ದು, ಒಟ್ಟು  ನೇಮಕಾತಿ ಪ್ರಕ್ರಿಯೆಯಲ್ಲೆ ಬಹುದೊಡ್ಡ ಅಕ್ರಮ ನಡೆದಿದೆ. ಇಡೀ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು, ಹಾಗೂ ಈ ಎಲ್ಲಾ ವೈಫಲ್ಯ, ವಂಚನೆಗಳಿಗೆ  ಅವಳಿ ಜಿಲ್ಲೆಗಳ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಹಾಗೂ ಶಾಸಕರುಗಳು ನೇರ ಕಾರಣರಾಗಿದ್ದು, ಇವರು ರಾಜಿನಾಮೆ ಸಲ್ಲಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.




2 ವರ್ಷಗಳ ಹಿಂದೆ Mrpl 224 ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದಾಗ ಡಿವೈಎಫ್ಐ ಪ್ರಬಲ ವಿರೋಧ ದಾಖಲಿಸಿತ್ತು.‌ ಸ್ಥಳೀಯರಿಗೆ 80 ಶೇಕಡಾ  ಸ್ಥಾನಗಳನ್ನು ಮೀಸಲಿಟ್ಟು ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ, ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಹಕ್ಕೊತ್ತಾಯ ಹಾಗೂ Mrpl ಮುಂಭಾಗ ಸಾಮೂಹಿಕ ಧರಣಿಯನ್ನೂ ನಡೆಸಲಾಗಿತ್ತು.‌ ಪ್ರತಿಭಟನೆಯ ಬಿಸಿಯಿಂದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ನಾಗಾಭರಣರು ಕಂಪೆನಿಗೆ ನೋಟೀಸು ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವಂತೆ, ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಕಂಪೆನಿ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿದಿತ್ತು. ಸಂಸದರಾದ ನಳಿನ್ ಕುಮಾರ್ ಕಟೀಲ್ ಸಹಿತ ಯಾವೊಬ್ಬ ಶಾಸಕರೂ ಆಗ ಧ್ವ‌ನಿಗೂಡಿಸಿರಲಿಲ್ಲ. ಈಗ ಕೊರೋನ, ಲಾಕ್ ಡೌ‌ನ್ ಗದ್ದಲಗಳ ಮಧ್ಯೆ ಕಂಪೆನಿ ತನ್ನ ಅಜೆಂಡಾ ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ದಕ್ಷಿಣ ಕನ್ನಡಕ್ಕೆ ಎರಡು, ಉಡುಪಿಗೆ ಎರಡು ಸಹಿತ ಇಡೀ ಕರ್ನಾಟಕಕ್ಕೆ ಕೇವಲ 13 ಸ್ಥಾನಗಳು ಮಾತ್ರ ದೊರಕಿದೆ.ಅದೇ ಸಂದರ್ಭ ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ಒಟ್ಟು ನೂರು ಸ್ಥಾನಗಳು ದೊರಕಿವೆ. ದಕ್ಷಿಣ ಭಾರತದ ಇತರ ರಾಜ್ಯಗಳ ಅಭ್ಯರ್ಥಿಗಳೂ ಅತಿ ಕಡಿಮೆ ಸಂಖ್ಯೆಯಲ್ಲಿ ಸ್ಥಾನ ಪಡೆದಿದ್ದಾರೆ. ಒಟ್ಟು ಉತ್ತರ ಭಾರತದ ರಾಜ್ಯಗಳ‌ ಅಭ್ಯರ್ಥಿಗಳನ್ನೇ ಗುರುತಿಸಿ ಆಯ್ಕೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳ ಹಲವಾರು ಪ್ರತಿಭಾವಂತ ಯುವಜನರು ಅತ್ಯುತ್ತಮವಾಗಿ ಪರೀಕ್ಷೆ ಎದುರಿಸಿದ್ದರೂ ಅವರನ್ನು ಹೀನಾಯವಾಗಿ ಹೊರದಬ್ಬಲಾಗಿದೆ. ಈಗ ಆಯ್ಕೆಯಾಗಿರುವ ಉತ್ತರ ಭಾರತದ ಅಭ್ಯರ್ಥಿಗಳ ಸಾಮರ್ಥ್ಯದ ಕುರಿತೂ ಹಲವು ಅನುಮಾನಗಳು ವ್ಯಕ್ತವಾಗಿದೆ. ಒಟ್ಟು ಇಡೀ ನೇಮಕಾತಿ ಪ್ರಕ್ತಿಯೆಯಲ್ಲಿ ಬಹುದೊಡ್ಡ ಭ್ರಷ್ಟಾಚಾರ, ಪಿತೂರಿ, ವಂಚನೆಯ ವಾಸನೆ ಹೊಡೆಯುತ್ತಿದೆ. ನೇಮಕಾತಿ ಅಧಿಕಾರಿ ಸಹಿತ ಕಂಪೆನಿಯ ಉನ್ನತ ಅಧಿಕಾರಿಗಳು, ಆಳುವ ಸರಕಾರದ ರಾಜಕಾರಣಿಗಳು ಹಗರಣದಲ್ಲಿ ಭಾಗಿಯಾಗಿರುವ ಅನುಮಾನ ದಟ್ಟವಾಗಿದೆ. ಈಗಿನ ನೇಮಕಾತಿಯನ್ನು ರದ್ದುಗೊಳಿಸಿ ಸ್ಥಳೀಯರಿಗೆ 80 ಶೇಕಡಾ ಮೀಸಲಿನೊಂದಿಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಹಾಗೂ ನಡೆದಿರುವ ನೇಮಕಾತಿ ಪ್ರಕ್ರಿಯೆಯ ಹಗರಣದ ಕುರಿತು ಉ‌ನ್ನತ ಮಟ್ಟದ ತ‌‌ನಿಖೆ ನಡೆಸುವಂತೆ ಡಿವೈಎಫ್ಐ ಒತ್ತಾಯಿಸುತ್ತದೆ. ಹಾಗೂ ಈ ಎಲ್ಲಾ ಅಕ್ರಮ, ಸ್ಥಳೀಯರಿಗೆ ಆಗಿರುವ ಅನ್ಯಾಯಗಳಿಗೆ ತುಳುನಾಡಿನ ಸಂಸದರು, ಶಾಸಕರು ನೇರ ಹೊಣೆಯಾಗಿದ್ದು ಅವರು ರಾಜಿನಾಮೆ ನೀಡಬೇಕು ಎಂದು ಡಿವೈಎಫ್ಐ ಆಗ್ರಹಿಸುತ್ತದೆ ಎಂದು ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ‌.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99