
ಕೋವಿಡ್ ಹಿನ್ನೆಲೆ : ಊರ ಉಸಾಬರಿಯೇ ಬೇಡವೆಂದು ಆಕಾಶದಲ್ಲಿ ಮದುವೆಯಾದ ಜೋಡಿ: ಇದೀಗ ಸಂಕಷ್ಟಕ್ಕೆ ಸಿಲುಕಿದ ಲೋಹದ ಹಕ್ಕಿ ( video)
ಮದುರೈ: ಕೋರೋನಾ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಇದ್ದರೆ, ಕೆಲವೆಡೆ ಕಟ್ಟುನಿಟ್ಟಿನ ಕ್ರಮ. ಮದುವೆ ಸಹಿತ ಮತ್ತಿತರ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮಾಡಲು ಉದ್ದೇಶಿಸಿದವರಿಗೆ ಇತ್ತೀಚಿನ ಕಠಿನ ನಿಯಮಗಳು ನಿರಾಶೆ ತರಿಸಿದೆ.
ಆದರೆ ಇಂತಹ ಕಟ್ಟುನಿಟ್ಟಿನ ನಿಯಮಗಳ ಉಸಾಬರಿಯೇ ಬೇಡವೆಂದು ಮದುರೈಯ ಜೋಡಿಯೊಂದು ಆಕಾಶದಲ್ಲಿ ವಿವಾಹವಾಗಿದ್ದಾರೆ.
ಮೇ. 23ರಂದು ಮಧುರೈ ಯ ರಾಕೇಶ್ ಮತ್ತು ದಕ್ಷಿಣಾ ವಿವಾಹ ನಿಶ್ಚಿತವಾಗಿತ್ತು. ಈ ನಿಟ್ಟಿನಲ್ಲಿ ಆ ದಿನದಂದು ಸ್ಪೈಸ್ ಜೆಟ್ ವಿಮಾನವನ್ನು ಬುಕ್ ಮಾಡಿರುವ ಜೋಡಿ ಎರಡೂ ಕುಟುಂಬದವರನ್ನೊಳಗೊಂಡ ಸುಮಾರು 130ರಷ್ಟು ಜನ ವಿಮಾನದಲ್ಲಿ ಹಾರಾಟ ನಡೆಸಿದ್ದರು.
ಮಧುರೈಯಿಂದ ವಿಮಾನ ನಿಲ್ದಾಣದಿಂದ ಆಕಾಶಕ್ಕೆ ಹಾರಿದ ಈ ವಿಮಾನ ಅಲ್ಲಿನ ಮೀನಾಕ್ಷಿ ಅಮ್ಮನ್ ದೇವಸ್ಥಾನ ತಲುಪುತ್ತಿದ್ದಂತೆ ಜೋಡಿ ಶಾಸ್ರೋಕ್ತವಾಗಿ ತಾಳಿ ಕಟ್ಟಿ ವಿವಾಹವಾಗಿದ್ದರೆ. ವಿಮಾನದಲ್ಲಿ ಇದ್ದ ಕುಟುಂಬಸ್ಥರು ನೂತನ ಜೋಡಿಯನ್ನು ಹರಸಿದ್ದಾರೆ. ಕೇವಲ ಈ ಮದುವೆಗಾಗಿಯೆ ವಿಮಾನ ಆಕಾಶದಲ್ಲಿ ಎರಡು ಗಂಟೆಗಳ ಕಾಲ ಹಾರಾಟ ನಡೆಸಿ, ಮರಳಿ ಮದುರೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.
ಆದರೆ ಈ ಮದುವೆಯಲ್ಲಿ ಭಾಗಿಯಾದ ಹೆಚ್ಚಿನವರೂ ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರವನ್ನೂ ಕಾಪಾಡಿರಲಿಲ್ಲ.
ಇದೀಗ ನಾಗರಿಕ ವಿಮಾನಯಾನ ಅಥಾರಿಟಿಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಸೂಚಿಸಿದೆ.