
ಯುವಕನ ಮೊಬೈಲ್ ಕಿತ್ತೆಸೆದು ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ: ಡೀಸಿಗೆ ಸರಕಾರ ನೀಡಿದ ಶಿಕ್ಷೆ ಏನು?
ಸೂರಜ್‌ಪುರ: ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗೆ ಇಳಿದಿದ್ದಾನೆಂದು ಆರೋಪಿಸಿ ಇಲ್ಲಿನ ಜಿಲ್ಲಾಧಿಕಾರಿ ಯುವಕನೋರ್ವನ ಮೊಬೈಲ್ ಕಿತ್ತೆಸೆದದ್ದಲ್ಲದೇ ಅತನ ಕಪಾಳಕ್ಕೆ ಬಾರಿಸಿದ ಘಟನೆ ನಡೆದಿದೆ.
ಈ ಘಟನೆಯ ವೀಡಿಯೋ ಇದೀಗ ಎಲ್ಲಡೆ ವೈರಲ್ ಆಗಿದ್ದು, ಛತ್ತೀಸ್ಗಢ ಮುಖ್ಯಮಂತ್ರಿ ಭುಪೇಶ್ ಭಗೇಲ್ ಈ ಜಿಲ್ಲಾಧಿಕಾರಿಯನ್ನು ಹುದ್ದೆಯಿಂದ ವಜಾಗೊಳಿಸುವಂತೆ ಸೂಚಿಸಿದ್ದಾರೆ.
ಅಲ್ಲದೇ ಈ ಘಟನೆಯನ್ನು ಐಎಎಸ್ ಅಧಿಕಾರಿಗಳ ಒಕ್ಕೂಟವೂ ಖಂಡಿಸಿದೆ.
ಸೂರಜ್‌ಪುರ ನಗರದಲ್ಲಿ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ರೌಂಡ್ಸ್‌ನಲ್ಲಿದ್ದರು. ಈ ವೇಳೆ ಯುವಕನೋರ್ವ ಬೈಕ್‌ನಲ್ಲಿ ಬಂದಿದ್ದು, ಆತ ಅನಗತ್ಯವಾಗಿ ರಸ್ತೆಗೆ ಇಳಿದಿದ್ದಾನೆ ಎಂದು ಕಂಡುಬಂದಿತ್ತು. ಕೋಪಗೊಂಡ ಜಿಲ್ಲಾಧಿಕಾರಿ ಶರ್ಮಾ ಯುವಕನ ಮೊಬೈಲ್ ಕಿತ್ತು ನೆಲಕ್ಕೆ ಎಸೆದದ್ದಲ್ಲದೇ ಯುವಕನ ಕಪಾಳಕ್ಕೆ ಬಾರಿಸಿದ್ದಾರೆ.
ಬಳಿಕ ಅಲ್ಲಿದ್ದ ಸಿಬ್ಬಂದಿಗಳು ಕೂಡಾ ಯುವಕನಿಗೆ ಥಳಿಸಿದ್ದು, ಈ ಎಲ್ಲಾ ದೃಶ್ಯಗಳು ವೈರಲ್ ಆಗಿದ್ದವು. ಜಿಲ್ಲಾಧಿಕಾರಿ ಯ ಈ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಖುದ್ದು ಜಿಲ್ಲಾದಿಕಾರಿಯೇ ಸೆಲ್ಪಿ ವೀಡಿಯೋ ಮಾಡಿ ಬಿಡುಗಡೆಗೊಳಿಸಿದ್ದು, ಇದರಲ್ಲಿ ಯುವಕನಿಗೆ ಹೊಡೆದಿರುವ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಕ್ಷಮೆ ಕೇಳಿದ್ದಾರೆ. ಅಲ್ಲದೇ ಸೂರಜ್‌ಪುರ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಸ್ವತಃ ತನಗೆ ಮತ್ತು ಮನೆಯವರಿಗೂ ಕೋವಿಡ್ ಬಾಧಿಸಿತ್ತು ಎಂದಿದ್ದಾರೆ.