ರಾಗಿಣಿ ದ್ವಿವೇದಿ ವಿಡಿಯೋ ರಿಕ್ವೆಸ್ಟ್ ಕುಡ್ಲ ಪೊಲೀಸ್ ಸಮನ್ವಯದಲ್ಲಿ ಪ್ರತಿಧ್ವನಿ: 80 ಮಂಗಳಮುಖಿಯರಿಗೆ ದೊರೆಯಿತು ಆಹಾರ ಕಿಟ್ (Video)
Friday, May 28, 2021
ಮಂಗಳೂರು: ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಮಂಗಳಮುಖಿಯರ ನೆರವಿಗೆ ಸ್ಪಂದಿಸಬೇಕೆಂದು ನಟಿ ರಾಗಿಣಿ ದ್ವಿವೇದಿಯವರು ಇತ್ತೀಚಿಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಇಂದು ಮಂಗಳೂರು ಪೊಲೀಸರು ದಾನಿಯೋರ್ವರ ನೆರವಿನಿಂದ 80ಮಂದಿ ಮಂಗಳಮುಖಿಯರಿಗೆ ಆಹಾರ ಕಿಟ್ ವಿತರಿಸಿದ್ದಾರೆ.
ಮಂಗಳೂರು ಪೊಲೀಸರ 'ಕೋವಿಡ್ ಸಮನ್ವಯ' ಹೆಲ್ಪ್ ಲೈನ್ ನ ಸದಸ್ಯರಾಗಿರುವ ಆರ್ ಜೆ ಎರಲ್ ಅವರು ನಟಿ ರಾಗಿಣಿ ದ್ವಿವೇದಿಯವರ ಮನವಿಯ ಬಗ್ಗೆ ಮಂಗಳೂರು ಪೊಲೀಸರ ಗಮನ ಸೆಳೆದಿದ್ದರು. ಆದ್ದರಿಂದ ಈ ಬಗ್ಗೆ ದಾನಿಗಳ ಪತ್ತೆಗೆ ಮಂಗಳೂರು ಪೊಲೀಸ್ ಕಮಿಷನರ್ ಡಿಸಿಪಿ ಹರಿರಾಂ ಶಂಕರ್ ಹಾಗೂ ಸಿಸಿಬಿ ಪೊಲೀಸ್ ಇನ್ ಸ್ಪೆಕ್ಟರ್ ಮಹೇಶ್ ಕುಮಾರ್ ಅವರಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ವಿ.ಟಿ.ರೋಡ್ ನ ಅರುಣ್ ವಿಜಯೇಂದ್ರ ಭಟ್ ಅವರು 80 ಮಂದಿ ಮಂಗಳಮುಖಿಯರಿಗೆ ಆಹಾರ ಕಿಟ್ ಒದಗಿಸಿದ್ದಾರೆ.
ಖಾಸಗಿ ವ್ಯವಹಾರದಲ್ಲಿ ತೊಡಗಿಸಿರುವ ಅರುಣ್ ಹಾಗೂ ಕುಟುಂಬಸ್ಥರು ಮಂಗಳಮುಖಿಯರ ಸಂಕಷ್ಟಕ್ಕೆ ಕೈ ಜೋಡಿಸಿದ್ದು, 80ಮಂದಿಗೆ ಆಹಾರ ಕಿಟ್ ಒದಗಿಸಿದ್ದಾರೆ. ಈ ಕಿಟ್ ನಲ್ಲಿ 10 ಕೆಜಿ ಅಕ್ಕಿ, ಬೇಳೆ, ರವೆ, ಎಣ್ಣೆ, ಟೀಪುಡಿ, ಸಕ್ಕರೆ, ಕಡಲೆ ಹುರುಳಿ ಇತ್ಯಾದಿ ದಿನಸಿ ಸಾಮಾಗ್ರಿಗಳನ್ನು ನೀಡಿದ್ದಾರೆ. ಈ ಮೂಲಕ ತಿಂಗಳಿಗಾಗುವ ದಿನಸಿ ಸಾಮಾಗ್ರಿಗಳನ್ನು ಒದಗಿಸಿದ್ದಾರೆ. ಒಟ್ಟಿನಲ್ಲಿ ಮಂಗಳಮುಖಿಯರ ಸಂಕಷ್ಟಕ್ಕೆ ಸ್ಪಂದನೆ ನೀಡಿರುವ ಈ ಎಲ್ಲರ ಕಾರ್ಯ ಶ್ಲಾಘನೀಯ.