
ಎರಡು ಬಾರಿ ಆತ್ಮಹತ್ಯೆ ಯತ್ನ ವಿಫಲ; ಕೊನೆಗೂ ದೇಹತ್ಯಾಗ ಮಾಡಿದ ನಟಿ ಜಯಶ್ರೀ ರಾಮಯ್ಯ
ಬೆಂಗಳೂರು:ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಬಿಗ್ ಬಾಸ್ ಪ್ರವೇಶಿಸಿದ್ದ ನಟಿ ಜಯಶ್ರೀ ರಾಮಯ್ಯ ಬೆಂಗಳೂರಿನ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ಜಯಶ್ರೀ ರಾಮಯ್ಯ ಈ ಹಿಂದೆ ಎರಡು ಬಾರಿ ಆತ್ಮಹತ್ಯೆ ಗೆ ಯತ್ನಿಸಿ ವಿಫಲರಾಗಿದ್ದರು. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯಶ್ರೀ ರಾಮಯ್ಯ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಉಪ್ಪು ಹುಳಿ ಖಾರ ಮತ್ತಿತರ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಇವರು, ಮಾಡೆಲ್ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಗಮನಸೆಳೆದಿದ್ದರು.
ನಟಿ ಜಯಶ್ರೀ ರಾಮಯ್ಯ ಈ ಹಿಂದೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಸೋದರ ಮಾವ ಕತ್ರಿಗುಪ್ಪೆಯ ಅಜ್ಜಿ ಮನೆಯಲ್ಲಿ ದೈಹಿಕವಾಗಿ ಥಳಿಸಿದ್ದಲ್ಲದೆ ಮಾನಸಿಕವಾಗಿ ಕಿರುಕುಳ ನೀಡಿ,ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಜಯಶ್ರೀ ನಿನ್ನೆ ರಾತ್ರಿ ಊಟವಾದ ಬಳಿಕ ಕೋಣೆ ಸೇರಿದ್ದು ನಂತರ ಹೊರಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಅನುಮಾನದಿಂದ ಬಾಗಿಲು ಮುರಿದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.