ಕ್ಲೋಸ್ ಆಗಿದ್ದ ಕೇಸನ್ನು ಮತ್ತೆ ಓಪನ್ ಮಾಡಿದ ಮಂಗಳೂರು ಪೊಲೀಸ್ ಕಮೀಷನರ್: ಗೋಲಿಬಾರ್ ಗೆ ದ್ವೇಷ ತೀರಿಸಲು ಹೋದವರು ಅಂದರ್! (Complete video)
Tuesday, January 19, 2021
ಇದು ಮಾಯಾಗ್ಯಾಂಗ್, ಮೈನರ್ ಟ್ರಿಕ್ಸ್ ಮತ್ತು ಆ ಒಂದು ಮಾತ್ರೆಯ ಕಥೆ
ಮಂಗಳೂರು;ಮಂಗಳೂರು ನಗರಕ್ಕೆ ಪೊಲೀಸ್ ಕಮೀಷನರ್ ಆಗಿ ಬಂದಿರುವ ಶಶಿಕುಮಾರ್ ತಮ್ಮ ಖಡಕ್ ನಿರ್ಧಾರಗಳಿಂದ ಜನರಲ್ಲಿ ಹೊಸ ಭರವಸೆ ಮೂಡಿಸುತ್ತಿದ್ದಾರೆ. ಡಿಸೆಂಬರ್ 16 ರಂದು ಪೊಲೀಸ್ ಸಿಬ್ಬಂದಿ ಗಣೇಶ್ ಕಾಮತ್ ಮೇಲೆ ನಡೆದ ತಲವಾರು ದಾಳಿ ಪ್ರಕರಣದ ಕೇಸ್ ಒಂದು ಹಂತಕ್ಕೆ ಕ್ಲೋಸ್ ಆಗಿತ್ತೆ ಎಂದು ಭಾವಿಸಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಬಂಧನವಾಗುವ ಮೂಲಕ ಪ್ರಕರಣ ಮುಕ್ತಾಯ ಕಂಡಿತ್ತು.
ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ಜನವರಿ 1 ರಂದು ಅಧಿಕಾರ ಸ್ವೀಕರಿಸಿದ ಶಶಿಕುಮಾರ್ ಅವರು ಈ ಪ್ರಕರಣದ ಕೇಸ್ ಅಧ್ಯಯನ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ಅವರ ಗಮನಕ್ಕೆ ಬಂದಿದೆ. ತನಿಖೆಯನ್ನು ಚುರುಕುಗೊಳಿಸಲು ಸೂಚಿಸಿದ ಅವರು ಇನ್ನೂ ಆರು ಮಂದಿಯ ಹೆಡೆಮುರಿ ಕಟ್ಟಿದ್ದಾರೆ.
2019 ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ಸಿಎಎ ವಿರುದ್ದ ನಡೆದ ಪ್ರತಿಭಟನೆ ವೇಳೆ ಗೋಲಿಬಾರ್ ಪ್ರಕರಣ ನಡೆದಿತ್ತು. ಇದರಲ್ಲಿ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದರು. ಸಾವನ್ನಪ್ಪಿದ ಓರ್ವ ವ್ಯಕ್ತಿಯ ಪರಿಚಯದ ಗ್ಯಾಂಗ್ ಈ ಘಟನೆಗೆ ಒಂದು ವರ್ಷವಾಗುವಾಗ ಗೋಲಿಬಾರ್ ಗೆ ಪೊಲೀಸರ ಮೇಲೆ ರಿವೆಂಜ್ ತೆಗೆದುಕೊಳ್ಳಲು ನಿರ್ಧರಿಸಿದೆ. ಅದರಂತೆ ಡಿಸೆಂಬರ್ 16 ರಂದು ಪೊಲೀಸ್ ಸಿಬ್ಬಂದಿಗೆ ಅಟ್ಯಾಕ್ ಮಾಡಲು ನಿರ್ಧರಿಸಿದೆ.
ಬಂಧಿತರ ವಿವರ
ಈ ಪ್ರಕರಣದಲ್ಲಿ ಓರ್ವ ಅಪ್ರಾಪ್ತ ಮತ್ತು ನವಾಜ್ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಅದಾದ ಬಳಿಕ ಪ್ರಕರಣ ಮುಕ್ತಾಯ ಕಂಡಿತು ಎಂದು ಭಾವಿಸಲಾಗಿತ್ತು. ಆದರೆ ಇದೀಗ ಈ ಕೆಳಗಿನ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಅದು ಮಾಯಾ ಗ್ಯಾಂಗ್, ಅಪ್ರಾಪ್ತನ ಬಳಕೆ!
ಈ ಆರೋಪಿಗಳು ಮಾಯಾ ಗ್ಯಾಂಗ್ ಎಂಬುದನ್ನು ಕಟ್ಟಿಕೊಂಡಿದ್ದರು. ಮಾಯಾ ಟೀಮ್, ಮಾಯಾ ಟ್ರೂಪ್ ಎಂದು ಕರೆಸಿಕೊಳ್ಳುತ್ತಿದ್ದ ಈ ಟೀಮ್ ಈ ಖತರ್ನಾಕ್ ಐಡಿಯಾವನ್ನು ಮಾಡಿದೆ. ಇನ್ನು ಅಟ್ಯಾಕ್ ಮಾಡುವ ವೇಳೆ ವಯಸ್ಕರು ಸಿಕ್ಕಿಬಿದ್ದರೆ ಸಮಸ್ಯೆಯಾಗಲಿದೆ ಎಂದು ತಮ್ಮ ಮಾಯಾ ಗ್ಯಾಂಗ್ ನಲ್ಲಿದ್ದ ಅಪ್ರಾಪ್ತ ಬಾಲಕನಿಗೆ ಪೊಲೀಸರ ಮೇಲೆ ಹಲ್ಲೆ ಮಾಡುವ ಜವಾಬ್ದಾರಿ ನೀಡಿದೆ.ಅದರಂತೆ ಬಾಲಕ ಪೊಲೀಸ್ ಸಿಬ್ಬಂದಿಗೆ ತಲವಾರಿನಿಂದ ಹಲ್ಲೆ ನಡೆಸಿದ್ದಾನೆ.
ನೈಟ್ರೋವಿಟ್ ಟ್ಯಾಬ್ಲೆಟ್;
ನೈಟ್ರೋವಿಟ್ ಟ್ಯಾಬ್ಲೆಟ್ ಮತ್ತೇರಿಸುವ ಟ್ಯಾಬ್ಲೆಟ್. ವೈದ್ಯರು ಕೆಲವೊಂದು ರೋಗಿಗಳಿಗೆ ಈ ಔಷಧಿಯನ್ನು ಬರೆದುಕೊಡುತ್ತಾರೆ. ಈ ಔಷಧಿಯನ್ನು ವೈದ್ಯರ ಪ್ರಿಸ್ಕ್ರಿಪ್ಸನ್ ಇಲ್ಲದೆ ಕೊಡುವಂತೆಯು ಇಲ್ಲ. ಆದರೆ ಇದೇ ಗ್ಯಾಂಗ್ ನ ಸದಸ್ಯ ಮುಹಮ್ಮದ್ ನವಾಜ್ ಮೆಡಿಕಲ್ ವೊಂದರಲ್ಲಿ ಉದ್ಯೋಗಿ. ಈತ ಈ ಟ್ಯಾಬ್ಲೆಟನ್ನು ಈ ಮಾಯಾ ಟೀಮ್ ನ ಆರೋಪಿಗಳಿಗೆ ಪೂರೈಸುತ್ತಿದ್ದ. ಅಷ್ಟು ಮಾತ್ರವಲ್ಲದೆ ತನ್ನಕೆಲ ಗ್ರಾಹಕರಿಗೆ ಪ್ರಿಸ್ಕ್ರಿಪ್ಸನ್ ಇಲ್ಲದೆ 600 ರೂಪಾಯಿಗೆ ಒಂದು ಸ್ಟ್ರಿಪ್ ಮಾತ್ರೆಯನ್ನು ನೀಡುತ್ತಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.