ಮಂಗಳೂರಿನಲ್ಲಿ ಟೋಯಿಂಗ್ ಮಾಡುವಾಗ ನಡೆಯಿತು ಎಡವಟ್ಟು: ಕಾರಿನೊಳಗೆ ಬಾಲಕನಿರುವಾಗಲೇ ಲಿಪ್ಟ್!
ಮಂಗಳೂರು: ನೋಪಾರ್ಕಿಂಗ್ ನಲ್ಲಿ ವಾಹನಗಳು ಇದ್ದ ಕೂಡಲೇ ಪೊಲೀಸರ ಟೋಯಿಂಗ್ ಗಾಡಿ ಎತ್ತಾಕಿಕೊಂಡು ಹೋಗುವುದನ್ನು ಗಮನಿಸಿದ್ದೇವೆ. ಮಂಗಳೂರಿನಲ್ಲಿ ಇಂದು ನಡೆದ ಘಟನೆಯೊಂದರಲ್ಲಿ ಕಾರಿನೊಳಗಡೆ ಬಾಲಕನಿರುವಾಗಲೇ ಟ್ರಾಫಿಕ್ ಪೋಲೀಸರು ಕಾರನ್ನು ಟೋಯಿಂಗ್ ಮಾಡಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ.
ಘಟನೆ ನಡೆದದ್ದು ಹೀಗೆ:
ಉಜಿರೆಯಿಂದ ಮಹಿಳೆಯೊಬ್ಬರು ಕಾರಿನಲ್ಲಿ ತನ್ನ ಇಬ್ಬರು ಪುತ್ರರೊಂದಿಗೆ ಮಂಗಳೂರಿಗೆ ಬಂದಿದ್ದರು. ಮಲ್ಲಿಕಟ್ಟೆಯಲ್ಲಿ ಮಳಿಗೆಯೊಂದರ ಮುಂದೆ ಕಾರನ್ನು ನಿಲ್ಲಿಸಿ ಓರ್ವ ಪುತ್ರನೊಂದಿಗೆ ಶಾಪಿಂಗ್ ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಕಾರಿನ ಡ್ರೈವರ್ ಕಾರಿನಲ್ಲಿ ಇದ್ದರು. ಸ್ವಲ್ಪ ಸಮಯದಲ್ಲಿ ಮಹಿಳೆ ಮೊಬೈಲ್ ಪೋನನ್ನು ಕಾರಿನ ಒಳಗಡೆ ಬಿಟ್ಟು ಹೋಗಿರುವುದು ಡ್ರೈವರ್ ಗಮನಕ್ಕೆ ಬಂದಿದೆ. ಅವರು ಮೊಬೈಲನ್ನು ಕೊಡಲೆಂದು ಮಳಿಗೆಗೆ ಹೋಗಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿಗೆ ಟೋಯಿಂಗ್ ವಾಹನ ಬಂದಿದೆ. ಕಾರು ನೋ ಪಾರ್ಕಿಂಗ್ ನಲ್ಲಿದ್ದ ಕಾರಣ ಎತ್ತಾಕಿಕೊಂಡು ಬಂದಿದ್ದಾರೆ. ಕಾರಿಗೆ ಟಿಂಟ್ ಗ್ಲಾಸ್ ಅಳವಡಿಸಿದ ಕಾರಣ ಬಾಲಕ ಒಳಗಿರುವುದು ಪೊಲೀಸರಿಗೆ ಗೊತ್ತಾಗಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಕಾರು ಡ್ರೈವರ್ ಮತ್ತು ಮಹಿಳೆ ಕಾರನ್ನು ಹುಡುಕಿಕೊಂಡು ಬಂದಾಗಲೇ ಬಾಲಕ ಕಾರಿನೊಳಗಿರುವುದು ಪೊಲೀಸರಿಗೆ ತಿಳಿದುಬಂದಿದೆ.
ಟೋಯಿಂಗ್ ಮಾಡುವಾಗ ಬಾಲಕ ನಿದ್ದೆ ಮಾಡಿದ್ದು ಅದೃಷ್ಟವಶಾತ್ ಟೋಯಿಂಗ್ ಮಾಡುವ ವೇಳೆ ಯಾವುದೇ ಅಪಾಯವಾಗಿಲ್ಲ.