ಮಂಗಳೂರಿನ ಸೀನಿಯರ್ ಸುಪರಿಡೆಂಟ್ ಆಫ್ ಪೋಸ್ಟ್ ಎಂದು ಬಿಂಬಿಸಿ ಗೋವಾ ಯುವತಿಯನ್ನು ಮದುವೆಯಾಗಲು ಹೋದವ- ಕೊನೆಗೆ ಆದದ್ದು...
ಮಂಗಳೂರು: ಮಂಗಳೂರಿನ ಅಂಚೆ ವಿಭಾಗದಲ್ಲಿ ಸೀನಿಯರ್ ಸುಪರಿಡೆಂಟ್ ಎಂದು ನಂಬಿಸಿ ಯುವಕನೊಬ್ಬ ಗೋವಾದ ಯುವತಿಯನ್ನು ಮದುವೆಯಾಗಲು ಯತ್ನಿಸಿ ಇದೀಗ ಜೈಲುಪಾಲಾಗಿದ್ದಾನೆ.
ಮಂಗಳೂರು ವಿಭಾಗದ ಹಿರಿಯ ಅಂಚೆ ಅಧಿಕ್ಷಕ ಶ್ರೀಹರ್ಷ ಅವರು ನೀಡಿದ ದೂರಿನ ಮೇರೆಗೆ ಪರಮೇಶ್ವರಪ್ಪ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕುರುಬನಹಳ್ಳಿ ಗ್ರಾಮದ ರಂಗಪ್ಪ ಎಂಬವರ ಪುತ್ರ ಪರಮೇಶ್ವರಪ್ಪ ಯಾನೆ ಪರಂ ಈ ಕೃತ್ಯ ಎಸಗಿದಾತ. ಈತ ಗೋವಾದ ಹನುಮಪ್ಪ ಗಿರಿಯಪ್ಪ ಬಿಸಳ್ಳಿ ಎಂಬವರ ಮಗಳನ್ನು ಮದುವೆಯಾಗಲು ತಯಾರಿ ನಡೆಸಿದ್ದ.
ಈತ ತನಗೆ ರಾಜ್ಯೋತ್ಸವ ಮತ್ತು ಮೇಘದೂತ ಪ್ರಶಸ್ತಿ ಬಂದಿದೆ ಎಂದು ಪಿಕ್ಸ್ ಆರ್ಟ್ ಬಳಸಿ ಟಿವಿ 9 ಮತ್ತು ಆಜ್ ತಕ್ ಮಾಧ್ಯಮದಲ್ಲಿ ಸುದ್ದಿ ಬಂದಂತೆ ತಿರುಚಿದ ದೃಶ್ಯಾವಳಿಯನ್ನು ಇವರ ಮಗಳಿಗೆ ಕಳುಹಿಸಿ ತನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುವಂತೆ ಮಾಡಿದ್ದ. ಮಗಳಿಗೆ ನೆಂಟಸ್ತಿಕೆ ಬಂದ ಹಿನ್ನೆಲೆಯಲ್ಲಿ ಗೋವಾದ ಹನುಮಪ್ಪ ಗಿರಿಯಪ್ಪ ಬಿಸಳ್ಳಿಯವರು ಮಂಗಳೂರಿನಲ್ಲಿ ವಿಚಾರಿಸಿದ್ದಾರೆ. ಅಂತಹ ವ್ಯಕ್ತಿ ಇಲ್ಲವೆಂದು ಆಗ ತಿಳಿದುಬಂದಿದೆ. ಈ ಬಗ್ಗೆ ಮಂಗಳೂರು ಹಿರಿಯ ಅಂಚೆ ಅಧಿಕ್ಷಕ ಶ್ರೀ ಹರ್ಷ ಅವರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಈತನ ಬಂಧನದ ಬಳಿಕ ಈತ ಈ ಹಿಂದೆ ಮಾಡಿರುವ ಹಲವು ವಂಚನೆ ಪ್ರಕರಣಗಳು ಬಯಲಾಗಿದೆ. ಈತ ಇಪ್ಪತ್ತು ನಕಲಿ ಫೇಸ್ ಬುಕ್ ಖಾತೆಯನ್ನು ಹೊಂದಿದ್ದು ಇದರ ಮೂಲಕ ವಂಚನೆ ಮಾಡುತ್ತಿದ್ದ.
ಪೂಜಾ ಸಿ ಎನ್ ಎಂಬ ಫೇಸ್ ಬುಕ್ ಖಾತೆಯಿಂದ ತಾನು ಅಂಚೆ ಅಧಿಕಾರಿ ಎಂದು ಬಿಂಬಿಸಿ ಅಂಚೆ ಇಲಾಖೆಯಲ್ಲಿ ಗ್ರೇಡ್ ೧, ಗ್ರೇಡ್ ೨ ಹುದ್ದೆ ಖಾಲಿ ಇರುವುದಾಗಿ ತಿಳಿಸಿ ಇಬ್ಬರಿಂದ ಆರು ಲಕ್ಷ ರೂಪಾಯಿ ಪಡೆದು ವಂಚಿಸಿದ್ದನು. ಈ ರೀತಿ ಅನೇಕ ವಂಚನೆ ಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಈತನಿಂದ ಒಂದು ಲ್ಯಾಪ್ ಟಾಪ್, ಐದು ಮೊಬೈಲ್ ಪೋನ್, ಅಂಚೆ ಇಲಾಖೆಯ ನಕಲಿ ಗುರುತಿನ ಚೀಟಿ, ಐಸಿಐಸಿಐ ಬ್ಯಾಂಕಿನ ಡೆಬಿಟ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ