olx ನಲ್ಲಿ ಗ್ರೈಂಡರ್ ಮಾರಲು ಹೋದ ಮಂಗಳೂರಿನ ಮಹಿಳೆಗೆ 64 ಸಾವಿರ ಪಂಗನಾಮ!
ಮಂಗಳೂರು: olx ನಲ್ಲಿ ಗ್ರೈಂಡರ್ ಮಾರಲು ಹೋದ ಮಂಗಳೂರಿನ ಮಹಿಳೆಯೊಬ್ಬರಿಗೆ ವ್ಯಕ್ತಿಯೋರ್ವ 64 ಸಾವಿರ ರೂ ಪಂಗನಾಮ ಹಾಕಿದ ಘಟನೆ ನಡೆದಿದೆ.
ಮಂಗಳೂರಿನ ಮಹಿಳೆಯೊಬ್ಬರು ತಮ್ಮ ಹಳೆಯ ಗ್ರೈಂಡರನ್ನು ಮಾರಾಟ ಮಾಡಲು ಇಚ್ಚಿಸಿದ್ದರು. ಅದಕ್ಕಾಗಿ olx ನಲ್ಲಿ ಜಾಹೀರಾತು ಹಾಕಿದ್ದರು. ಈ ಜಾಹೀರಾತು ನೋಡಿದ ವ್ಯಕ್ತಿಯೋರ್ವ ಮಹಿಳೆಗೆ olx ನಲ್ಲಿಯೆ ಚಾಟ್ ಮಾಡಿ ಗ್ರೈಂಡರ್ ಖರೀದಿಸಲು ಇಚ್ಚಿಸುವುದಾಗಿ ತಿಳಿಸಿದ್ದ. ಬಳಿಕ ಮಹಿಳೆಯ ವಾಟ್ಸಪ್ ನಂಬರ್ ಪಡೆದು ಅದಕ್ಕೆ ಕ್ಯೂಆರ್ ಕೋಡ್ ಕಳುಹಿಸಿದ್ದ.
ಅದನ್ನು ಸ್ಕ್ಯಾನ್ ಮಾಡಿದರೆ ಹಣ ಕಳುಹಿಸುವುದಾಗಿ ತಿಳಿಸಿದ್ದ. ಅದರಂತೆ ಮಹಿಳೆ ಸ್ಕ್ಯಾನ್ ಮಾಡಿದ್ದು ಕೂಡಲೇ ಮಹಿಳೆಯ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಮಹಿಳೆಯ ಕೆನರಾ ಬ್ಯಾಂಕ್ ಖಾತೆಯಿಂದ ರೂ 3800 ಮತ್ತು ಐಸಿಐಸಿಐ ಬ್ಯಾಂಕ್ ಖಾತೆಯಿಂದ ರೂ 60850 ಹಣವನ್ನು ವರ್ಗಾವಣೆ ಮಾಡಿದ್ದಾನೆ. ಗ್ರೈಂಡರ್ ನ ಹಣ ಬರುವುದೆಂದು ಕಾದಿದ್ದ ಮಹಿಳೆ 64650 ರೂ ಕಳೆದುಕೊಂಡಿದ್ದು ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ