-->

ರವಿ ಬೆಳಗೆರೆಗೆ ಗುರುಕಾಣಿಕೆ!: ಮೃತ "ಗುರು" ಬಗ್ಗೆ ಖಾಸಾ ಬಾತ್ ಹಂಚಿಕೊಂಡ ಪತ್ರಕರ್ತ

ರವಿ ಬೆಳಗೆರೆಗೆ ಗುರುಕಾಣಿಕೆ!: ಮೃತ "ಗುರು" ಬಗ್ಗೆ ಖಾಸಾ ಬಾತ್ ಹಂಚಿಕೊಂಡ ಪತ್ರಕರ್ತಹೌದು.. ಈ ಪೋಸ್ಟ್ ಓದಿದ್ರೆ ನೀವು ಬೆಚ್ಚಿ ಬೀಳುತ್ತೀರಾ... ರವಿ ಬೆಳಗೆರೆ ಬಗ್ಗೆ ಅವರ ಹೆಚ್ಚಿನವರಿಗೆ ಗೊತ್ತು. ಆದರೆ, ಅವರ ಜೊತೆ ಸಾಕಷ್ಟು ವರ್ಷ ವೃತ್ತಿ ಜೀವನ ಹಂಚಿಕೊಂಡ ಶಿಷ್ಯ ಎನ್ನಿಸಿಕೊಂಡ ಹಿರಿಯ ಪತ್ರಕರ್ತ ರಹೀಂ ಉಜಿರೆ ರವಿ ಬೆಳಗೆರೆ ಬಗ್ಗೆ ತಮ್ಮ ಪೋಸ್ಟ್ ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಖಾಸಾ ಬಾತ್ ನಿಮಗಾಗಿ


ಇವತ್ತು ಬೆಳಿಗ್ಗೆ ರವಿ ಬೆಳಗೆರೆಯವರ ಸಾವಿನ ಸುದ್ದಿ ಓದಿ ಮನಸ್ಸು ಮುದುಡಿದೆ.ಅದರ ಜೊತೆಯಲ್ಲೇ ಹಲವು ನೆನಪುಗಳು ನನ್ನ ಮನಃಪಟಲದಲ್ಲಿ ಹಾದು ಹೋಗುತ್ತಲೇ ಇವೆ.ಈ ನೆನಪುಗಳನ್ನು ಅವರು ತಮ್ಮ ಖಾಸ್ ಬಾತ್ ಗಳಲ್ಲಿ ದಾಖಲಿಸಲೇ ಇಲ್ಲ.ಅವರ ಖಾಸ್ ಬಾತನ್ನು ನಾನು ಬರೆದರೆ ಅದು ಅಷ್ಟು ಚೆನ್ನಾಗಿರುವುದಿಲ್ಲ.ನನಗೆ ಪತ್ರಿಕೋದ್ಯಮದಲ್ಲಿ ಅವಕಾಶ ಕೊಟ್ಟ ಗುರು ಅವರು.ಓ ಮನಸೇ ಪತ್ರಿಕೆಯಲ್ಲಿ ಎರಡು ವರ್ಷ ಉಪಸಂಪಾದಕನಾಗಿ ಅವರ ಜೊತೆ ಕೆಲಸ ಮಾಡಿದೆ,ಪತ್ರಿಕೋದ್ಯಮದ ಎಬಿಸಿಡಿ ಕಲಿತೆ.ರವಿ ಬೆಳಗೆರೆ ಒಬ್ಬ ಉತ್ತಮ ಬರಹಗಾರ,ಕಾದಂಬರಿಕಾರ.

ಆದರೆ ಅವರೊಬ್ಬ ಅತ್ಯುತ್ತಮ ಪತ್ರಕರ್ತ ಎಂದು ಹೇಳಲು ನನ್ನ ಮನಸು ಒಪ್ಪುವುದಿಲ್ಲ.

ತಮ್ಮ ಬಗ್ಗೆ ಅವರು ಬರೆದುಕೊಂಡಷ್ಟು ಜಗತ್ತಿನ ಯಾವುದೇ ಪತ್ರಕರ್ತನೂ ಬರೆದಿರಲಿಕ್ಕಿಲ್ಲ: ಅಷ್ಟೊಂದು ಬರೆದರು.ತಮ್ಮನ್ನು ತಾವೇ ಬಾಸ್ ಎಂದು ಕರೆದುಕೊಂಡರು.ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು.ತಮ್ಮ ಅಸಂಖ್ಯ ತಪ್ಪುಗಳನ್ನು ಖಾಸ್ ಬಾತ್ ನಲ್ಲಿ ದಾಖಲಿಸಿ,ಅದಕ್ಕೆ ಪಾವಿತ್ರ್ಯತೆ ಕಲ್ಪಿಸುತ್ತಾ,ಬೆತ್ತಲಾದಷ್ಟೂ ಮನುಷ್ಯ ಮಾನವಂತನಾಗುತ್ತಾನೆ ಎಂದು ಅದನ್ನು ಸಮರ್ಥಿಸಿಕೊಂಡರು.

ಸತ್ತವರ ಬಗ್ಗೆ,ಸಿನೆಮಾ ನಟನಟಿಯರ ಬಗ್ಗೆ,ಗಂಡ ಹೆಂಡತಿಯ ಖಾಸಗಿ ಜೀವನದ ಬಗ್ಗೆ ರವಿ ಬೆಳಗೆರೆ ಬರೆಯುತ್ತಲೇ ಹೋದರು.ಇದನ್ನೇ ತನಿಖಾ ಪತ್ರಿಕೋದ್ಯಮ ಎಂದು ಕರೆದುಕೊಂಡರು.ಹಲವು ಸಂಸಾರವನ್ನು ತಮ್ಮ ಪತ್ರಿಕೆಯ ಮೂಲಕ ಒಡೆದರು.ಕಪೋಲಕಲ್ಪಿತ ವರದಿಗಳನ್ನು ಬರೆದು ಹಲವರಿಗೆ ನೋವು ಕೊಟ್ಟರು.ಇವೆಲ್ಲ ಪತ್ರಿಕೋದ್ಯಮದ ಭಾಗ ಎಂದು ನೀವು ಹೇಳುವುದಾದರೆ,ಅವರೊಬ್ಬ ಉತ್ತಮ ಪತ್ರಕರ್ತ ಎಂದು ನಾನು ಒಪ್ಪಿಕೊಳ್ಳಲು ಸಿದ್ಧ.

ಸತ್ತವರ ಬಗ್ಗೆ ಬರೆಯುವುದು ಲಂಕೇಶ್ ಅವರ ಕಾಯಿಲೆ ಎಂದು ಬೈಯುತ್ತಲೇ ರವಿ ಬೆಳಗೆರೆ ತಮ್ಮ ಪತ್ರಿಕೆಯಲ್ಲಿ ಸತ್ತ ಖ್ಯಾತನಾಮರ ಮರಣೋತ್ತರ ಮರ್ಯಾದೆ ಕಳೆದರು.ನಾನು ಖಂಡಿತ ರವಿ ಬೆಳೆಗೆಯವರ (ಗುರು) ಪರಂಪರೆಯನ್ನು ಮುಂದುವರೆಸಲಾರೆ.

ಇನ್ನು ಅವರ ಅಭಿಮಾನಿ ದೇವತೆಯರ ಬಗ್ಗೆ ಹೇಳಬೇಕು.ರಾಜ್ಯದ ಮೂಲೆಮೂಲೆಯಿಂದ ಬರುತ್ತಿದ್ದ ಅಮಾಯಕ ಅಭಿಮಾನಿ ದೇವತೆಯರನ್ನು,ಒಂದು ಭೇಟಿಗಾಗಿ ರಾತ್ರಿ ತನಕ ಕಾಯಿಸಿ,ಅಲ್ಲೇ ಉಳಿಯುವಂತೆ ಮಾಡುತ್ತಿದ್ದದ್ದು,ಸೀರಿಯಲ್ ನಟಿಯ ಖಾಸಗಿ ಜೀವನದ ಕುರಿತು ಪತ್ರಿಕೆಯ ಮುಖಪುಟದಲ್ಲಿ ಹಾಕಿ,ಆ ನಟಿ ಅಳುತ್ತಾ,ಸರ್ ,ಯಾಕೆ ಸರ್ ಈ ತರಹ ಏನೇನೋ ಬರೆದಿದ್ದೀರಿ ಎಂದು ಫೋನ್ ಮಾಡಿ ಕೇಳಿದಾಗ,can u come to my office? ಎಂದು ಆಕೆಯನ್ನು ಕರೆದು,ಬೆಡ್ ರೂಮಿನಂತಹ ಆಫೀಸಿನೊಳಗೆ ಅದೇ ದಿನ ಕಾಲು,ಮೈ ಕೈ ಒತ್ತಿಸಿಕೊಳ್ಳುತ್ತಿದ್ದ ಪತ್ರಿಕೋದ್ಯಮ!ಇದನ್ನು ಪತ್ರಿಕೋದ್ಯಮ ಎಂದು ಕರೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ.

ಇಂತಹ ಅನೇಕ ಖಾಸ್ ಬಾತ್ ಗಳನ್ನು ನೀವು ದಾಖಲಿಸಲೇ ಇಲ್ಲ ಗುರುಗಳೇ.ಇರಲಿ.ಸತ್ತವರ ಬಗ್ಗೆ ಕೆಟ್ಟದಾಗಿ ಬರೆಯುವ ಮೂಲಕ ಗುರು ಪರಂಪರೆ ಮುಂದುವರೆಸಲಾರೆ.ಆದರೆ ನಾನು ಓ ಮನಸೇಯಲ್ಲಿ ಕೆಲಸ ಬಿಟ್ಟ ಮರುವಾರವೇ ,ಅಂದರೆ ನನ್ನ‌ ಮದುವೆಗೆ ಮುನ್ನಾ ದಿನ ಮಾರುಕಟ್ಟೆಗೆ ಬಂದ ಸಂಚಿಕೆಯ ಖಾಸ್ ಬಾತ್ ನಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ಕಪೋಲಕಲ್ಪಿತ ಬರಹ ಹಾಕಿದ್ದಿರಲ್ವಾ? ಆವಾಗ ನಾನೆಷ್ಟು ನೊಂದಿದ್ದೆ ಗೊತ್ತಾ ಗುರುಗಳೇ? ಗಾಗಾಗಿ ಸಣ್ಣ ಗುರು ಕಾಣಿಕೆ ನಿಮಗೆ.ಹೋಗಿ ಬನ್ನಿ.ಓಂ ಶಾಂತಿ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99