ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಬಿ.ಟಿ. ರಂಜನ್
ಪುತ್ತೂರಿನ ಪತ್ರಕರ್ತರಲ್ಲಿ ಅಗ್ರಪಂಕ್ತಿಯ ಹೆಸರುಗಳಲ್ಲಿ ಬಿ.ಟಿ. ರಂಜನ್ ಹೆಸರು ಮುಂಚೂಣಿಯಲ್ಲಿ ಇರುತ್ತದೆ. ಕಳೆದ 25 ವರ್ಷಗಳಿಂದ ಅವರು ಪತ್ರಿಕೋದ್ಯಮದಲ್ಲಿ ಜನಸೇವೆಯನ್ನು ಕಂಡವರು.
ನಾಡಿನ ಸಮಸ್ಯೆಗಳಿಂದ ಹಿಡಿದು ಅಭಿವೃದ್ಧಿ, ರಾಜಕಾರಣ, ಸಾಹಿತ್ಯ ಹೀಗೆ ಎಲ್ಲ ಕ್ಷೇತ್ರಗಳ ಡೊಂಕುಗಳನ್ನು ಅಕ್ಷರಕ್ಕಿಳಿಸಿ ಸಾಧನೆಗಳನ್ನು ಗುರುತಿಸಿ ಎಲ್ಲರಿಂದಲೂ ಭೇಷ್ ಅನಿಸಿಕೊಂಡರು.
ಪತ್ರಿಕೋದ್ಯಮಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ 2020ನೇ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯ ಬಗ್ಗೆ ಅವರ ಪ್ರತಿಕ್ರಿಯೆ ಹೀಗಿದೆ:
ಪುತ್ತೂರು ಸೀಮೆಯ ಒಡೆಯನಿಗೆ ಶರಣು
ಕಳೆದ 33 ವರ್ಷಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವ ನನ್ನ ಸೇವೆಯನ್ನು ಗುರುತಿಸಿ ಸರಕಾರ ಮತ್ತು ಸಮಾಜ ನನಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗುರುತಿಸಿದೆ. ಪತ್ರಿಕೋದ್ಯಮದಲ್ಲಿ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಯುವಂತೆ ಅನುಗ್ರಹಿಸಿದ ಪುತ್ತೂರು ಸೀಮೆಯ ಒಡೆಯ ಮಹಾಮಹಿಮ ಶ್ರೀ ಮಹಾಲಿಂಗೇಶ್ವರ ದೇವರಿಗೆ ನಾನು ತಲೆ ತಗ್ಗಿಸಿ ಶರಣಾಗಿದ್ದೇನೆ.
ನನ್ನ ಪತ್ರಿಕೋದ್ಯಮದ ಮರುಯಾನವನ್ನು ಆರಂಭಿಸಲು ನನಗೆ ಅವಕಾಶ ನೀಡಿದ `ಹೊಸ ದಿಗಂತ' ದಿನ ಪತ್ರಿಕೆಯ ನನ್ನ ಎಲ್ಲಾ ಗೌರವಾನ್ವಿತ ಸಹೋದ್ಯೋಗಿಗಳಿಗೆ ಹಾಗೂ ಪತ್ರಿಕಾ ಆಡಳಿತ ಮಂಡಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನಾನು ಕಳೆದ 25 ವರ್ಷಗಳಿಂದ ಸದಸ್ಯನಾಗಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಸಂದ ಗೌರವ ಇದು ಎಂದು ನಾನು ಅತ್ಯಂತ ಅಭಿಮಾನದಿಂದ ಹೇಳುತ್ತಿದ್ದೇನೆ.
ನನ್ನ ಪತ್ರಿಕೋದ್ಯಮ ಜೀವನವನ್ನು ಬಲ್ಲ ಎಲ್ಲಾ ಆತ್ಮೀಯ ಬಂಧುಗಳು, ನನ್ನ ಹಿತೈಷಿಗಳು ನನಗೆ ಅಭಿನಂದನೆಗಳನ್ನು ನೀಡಿ ಗೌರವಿಸಿದ್ದಾರೆ. ಇವರೆಲ್ಲರಿಗೂ ನಾನು ಚಿರಋಣಿ. ಪತ್ರಿಕೋದ್ಯಮದಲ್ಲಿ ನಿಜದ ನೇರಕ್ಕೆ ನಡೆದಿದ್ದೇನೆ. ಯಾವ ಟೀಕೆ ಟಿಪ್ಪಣಿಗಳಿಗೂ ಬಗ್ಗದೆ-ಜಗ್ಗದೆ ಸಮಾಜದ ಹಿತಕ್ಕಾಗಿ ಕೆಲಸ ಮಾಡಿದ್ದೇನೆ. ನನಗೆ ಶ್ರೀ ದೇವರ ಅನುಗ್ರಹ ಮತ್ತು ಸಮಾಜದ ಬೆಂಬಲ ನಿರಂತರ ಸಿಕ್ಕಿದೆ. ನಾನು ಪತ್ರಿಕೋದ್ಯಮದಲ್ಲಿ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡುವ ಪ್ರೇರಣೆಯನ್ನು ನನಗೆ ಕೊಡಮಾಡಿದ ಪ್ರಶಸ್ತಿ ನೀಡಿದೆ. ಎಲ್ಲರಿಗೂ ನಮಸ್ಕಾರ
ಇತೀ ಬಿ.ಟಿ. ರಂಜನ್