ಕರಾವಳಿಗೆ ಅನನ್ಯ ಕೊಡುಗೆ ನೀಡಿದ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ನಿವೃತ್ತಿ
ಹಿರಿಯ ಐ ಎ ಎಸ್ ಅಧಿಕಾರಿ ಎ ಬಿ ಇಬ್ರಾಹಿಂ ತಮ್ಮ ವೃತ್ತಿ ಜೀವನವನ್ನು ಯಶಸ್ವಿಯಾಗಿ ಮುಗಿಸಿ ಅಕ್ಟೋಬರ್ 29ರಂದು ನಿವೃತ್ತರಾಗಿದ್ದಾರೆ.
ತನ್ನ ಚಾಕಚಕ್ಯತೆ, ಸ್ನೇಹಪರ ನಡವಳಿಕೆ, ಬಡವರ, ದೀನ ದಲಿತರ ಕುರಿತು ಕಾಳಜಿ, ಜನಪರ, ದಕ್ಷ ಆಡಳಿತದಿಂದ ಎಲ್ಲರ ಮನಗೆದ್ದಿದ್ದರು, ಯಾವ ಮುಲಾಜಿಗೂ ಒಳಗಾಗದೆ ಆಧಿಕಾರಸ್ಥ ರಾಜಕಾರಣಿಗಳನ್ನು ನಿಭಾಯಿಸುವ ಇವರ ಜಾಣ್ಮೆ ಉಳಿದ ಅಧಿಕಾರಿಗಳಿಗೆ ಮಾದರಿ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಅವಧಿಯಲ್ಲಿ ಜನಸಾಮಾನ್ಯರ ಡಿಸಿ ಎಂದು ಜನಪ್ರಿಯರಾಗಿದ್ದರು.
ಸ್ವಾತಂತ್ರ್ಯಾ ನಂತರ ಯಾವ ಐಎಎಸ್ ಅಧಿಕಾರಿಗಳು ತಲುಪದಿದ್ದ ಕಗ್ಗತ್ತಲಿನ ಬಂಜಾರು ಮಲೆಗೆ ಭೇಟಿ ನೀಡಿ "ಡಿಸಿ ಕಟ್ಟೆ"ಯಲ್ಲಿ ಕೂತು ಆದಿವಾಸಿಗಳ ಸಮಸ್ಯೆ ಆಲಿಸಿದ್ದು ಸಹಿತ ಹಲವು ಘಟನೆಗಳು ಜನಮಾನಸದಲ್ಲಿ ಸದಾ ಹಸಿರಾಗಿರುವಂತದ್ದು. ಇವರ ಅವಧಿಯಲ್ಲಿ ಜಿಲ್ಲೆಯ ಎಸ್ ಪಿ ಆಗಿದ್ದ ಯುವ ಐಪಿಎಸ್ ಡಾ. ಶರಣಪ್ಪ ಅವರ ಜೊತೆ ಸೇರಿ ಯಾವ ಅಧಿಕಾರಸ್ಥರೂ ತಲುಪದಿದ್ದ ಜಿಲ್ಲೆಯ ಕುಗ್ರಾಮಗಳಿಗೆ ಭೇಟಿ ನೀಡಿ ಕಡೆಗಣಿಸಲ್ಪಟ್ಟಿದ್ದ ಜನಗಳ ಮುಖದಲ್ಲಿ ಮಂದಹಾಸ ಮೂಡಿಸಿದ್ದರು.
ಇಂತಹ ಕಾರ್ಯಗಳಲ್ಲಿ "ಐಪಿಎಸ್, ಐಎಎಸ್ ಗಳು ಹೀಗೆಯೆ ಇರಬೇಕು" ಎಂಬ ಕಟ್ಟುಪಾಡುಗಳನ್ನು ಮುರಿದು ಜನಪ್ರೀತಿಗಳಿಸಿದ್ದರು. ಯಾರೇ ಅಪರಿಚಿತ ಜನಸಾಮಾನ್ಯರು ತಮ್ಮ ಮೊಬೈಲ್ ಗೆ ಫೋನ್ ಮಾಡಿದರೆ ಕರೆಯನ್ನು ಸ್ವೀಕರಿಸುವ, ಮೀಟಿಂಗ್ ಗಳಲ್ಲಿ ಇದ್ದಾಗ ಸ್ವೀಕರಿಸಲಾಗದ ಕರೆಗಳಿಗೆ ಮರಳಿ ಕರೆ ಮಾಡಿ ಸಮಸ್ಯೆ ಆಲಿಸುವ ತಾಳ್ಮೆ ಯಾವುದೇ ಅಧಿಕಾರಿಗಳಿಗೂ ಅನುಕರಣೀಯ.
ಇಂತಹ ತನ್ನ ಬದ್ದತೆಯ ನಡವಳಿಕೆಯಿಂದ ಸೃಷ್ಟಿಯಾದ ಜನಪ್ರಿಯತೆ "ಇಬ್ರಾಹಿಂ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕಾರಣಕ್ಕೆ ಪ್ರವೇಶಿಸುತ್ತಾರೆ" ಎಂಬ ಪಿಸುಮಾತುಗಳು ಹುಟ್ಟಿ ಜಿಲ್ಲೆಯ ಕೆಲವು ಜನಪ್ರತಿನಿಧಿಗಳಿಗೆ ಇರುಸು ಮುರುಸು ಉಂಟಾಗಿತ್ತು.
mrpl, sez ವಿರುದ್ದ ಜೋಕಟ್ಟೆಯ ನಾಗರಿಕರ ಹೋರಾಟದ ಸಂದರ್ಭ ಕಂಪೆನಿಯ, ಪೆಟ್ರೋಲಿಯಂ ಸಚಿವಾಲಯದ ಎಲ್ಲಾ ಒತ್ತಡಗಳನ್ನು ಮೀರಿ ಜನರ ಪರವಾಗಿ ನಿಂತ ಅವರ ಜನರ ಪರವಾದ ಗಟ್ಟಿ ನಿಲುವನ್ನು ನಾವೆಂದಿಗೂ ಮರೆಯಲಾರೆವು.
ಪುತ್ತೂರು ದೇವಸ್ಥಾನದ ಜಾತ್ರೆಯ ಸಂದರ್ಭ ಜಿಲ್ಲಾಧಿಕಾರಿಯಾಗಿದ್ದ ತನ್ನನ್ನು ಮುಸ್ಲಿಂ ಧರ್ಮೀಯ ಎಂಬ ಕಾರಣಕ್ಕೆ ಸಂಘ ಪರಿವಾರ ಟಾರ್ಗೆಟ್ ಮಾಡಿದ್ದು ಅವರನ್ನು ಘಾಸಿಗೊಳಿಸಿತ್ತು. ಅವರ ಯಶಸ್ವಿ ವೃತ್ತಿ ಜೀವನದ ಮರೆಯಲಾಗದ ನೋವಿನ ಘಟನೆಯಾಗಿ ಬಹುಷ ಅವರ ಮನಸ್ಸಿನಲ್ಲಿ ಅದು ಉಳಿದಿರಬಹುದು.
ಎ ಬಿ ಇಬ್ರಾಹಿಂರಂತಹ ಐ ಎ ಎಸ್ ಅಧಿಕಾರಿಗಳು ಅಪರೂಪ. ಭ್ರಷ್ಟ, ಸಂವೇದನಾ ರಹಿತ ವ್ಯವಸ್ಥೆಯಲ್ಲಿ ಅವರು ಸಾಧ್ಯವಾದಷ್ಟು ಜನಪರವಾಗಿ ನಿಂತಿದ್ದಾರೆ. ಅವರ ಅನುಭವ, ಸೇವೆ ನಿವೃತ್ತಿಯ ನಂತರವು ಜನತೆಗೆ ದೊರಕಲಿ. ಅವರ ನಿವೃತ್ತ ಜೀವನ ಸುಖಮಯವಾಗಿರಲಿ. ಶುಭಾಶಯಗಳು ಇಬ್ರಾಹಿಂ ಸರ್.
ಬರಹ: ಮುನೀರ್ ಕಾಟಿಪಳ್ಳ (ಕೃಪೆ ಫೇಸ್‌ಬುಕ್)