-->

ಜೆಡಿಯು ಜೊತೆ ಸೈದ್ಧಾಂತಿಕ ಭಿನ್ನಾಭಿಪ್ರಾಯ: ಬಿಜೆಪಿ ಜೊತೆ ಸಖ್ಯ ಎಂದ ಚಿರಾಗ್ ಪಾಸ್ವಾನ್

ಜೆಡಿಯು ಜೊತೆ ಸೈದ್ಧಾಂತಿಕ ಭಿನ್ನಾಭಿಪ್ರಾಯ: ಬಿಜೆಪಿ ಜೊತೆ ಸಖ್ಯ ಎಂದ ಚಿರಾಗ್ ಪಾಸ್ವಾನ್ಬಿಹಾರದಲ್ಲಿ ನಿತೀಶ್ ಸಹವಾಸ ಬೇಡ ಎಂದ ಪಾಸ್ವಾನ್

ಬಿಜೆಪಿ ಜೊತೆ ಮಾತ್ರ ಮೈತ್ರಿಗೆ ಬದ್ಧತೆ ಪ್ರಕಟಿಸಿದ ಎಲ್ಜೆಪಿ


ಪಟ್ನಾ: ಬಿಹಾರ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಅಲ್ಲಿನ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಹೊಸ ವರಸೆ, ಹೇಳಿಕೆ ಮತ್ತು ರಾಜಕೀಯ ಬಲಾಬಲಗಳು ಹೊಸ ದಿಕ್ಕು ಪಡೆದುಕೊಳ್ಳುತ್ತಿದೆ.

ಪ್ರತಿಪಕ್ಷಗಳು ಒಟ್ಟು ಸೇರಿ ಚುನಾವಣೆಯನ್ನು ಒಗ್ಗಟ್ಟಲ್ಲಿ ಎದುರಿಸಲು ನಿರ್ಧರಿಸಿದ್ದು, ಸರ್ವಸಮ್ಮತ ರೀತಿಯಲ್ಲಿ ಸೀಟು ಹಂಚಿಕೆ ಮಾಡಿಕೊಂಡಿದೆ. ಈ ಮಧ್ಯೆ, ಆಡಳಿತಾರೂಢ ಎನ್ಡಿಎ ಮೈತ್ರಿಕೂಟದಲ್ಲಿ ದೊಡ್ಡ ಬಿರುಕು ಮೂಡಿರುವುದು ನಿಚ್ಚಳವಾಗಿದೆ. ಜೆಡಿಯು ಮತ್ತು ಎಲ್ಜೆಪಿ ನಡುವಿನ ಜಗಳ ಎನ್ಡಿಎ ಪಾಲಿಗೆ ಮುಳುವಾಗುವಂತೆ ತೋರುತ್ತಿದೆ. ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟದಿಂದ ಎಲ್ಜೆಪಿ ಹೊರಬರುವುದು ಬಹುತೇಕ ಖಚಿತವಾಗಿದೆ. ಚುನಾವಣೆಯಲ್ಲಿ ಜೆಡಿಯು ಜೊತೆ ತಾನು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಲೋಕ ಜನಶಕ್ತಿ ಪಕ್ಷ ಹೇಳಿದೆ. ನಿತೀಶ್ ಕುಮಾರ್ ನಾಯಕತ್ವದಲ್ಲಿ ಸ್ಪರ್ಧಿಸಲು ಲೋಕಜನಶಕ್ತಿ ಪಕ್ಷಕ್ಕೆ ಇಚ್ಛೆ ಇಲ್ಲ ಎಂದು ಆ ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಎನ್ಡಿಎ ಮೈತ್ರಿಕೂಟಕ್ಕೆ ಬದ್ಧವಾಗಿರುತ್ತೇವೆ. ಆದರೆ, ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಎಲ್ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಅವರ ನೇತೃತ್ವದಲ್ಲಿ ನಡೆದ ಎಲ್ಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಆದರೆ, ಸಿಎಂ ಹಾಗೂ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಬಿಜೆಪಿ ವರಿಷ್ಠರು ಈಗಾಗಲೇ ಪ್ರಕಟಿಸಿದ್ದಾರೆ.

ಈ ಸಂದರ್ಭದಲ್ಲಿ ಎಲ್ಜೆಪಿ ಬೇರೆಯೇ ದಾರಿ ಹಿಡಿದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.


ಮೂರು ದಿನಗಳ ಹಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಎಲ್ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರನ್ನ ಭೇಟಿ ಮಾಡಿ ಸೀಟು ಹಂಚಿಕೆ ವಿಚಾರ ಚರ್ಚಿಸಿದ್ದರು. ಆ ಸಂದರ್ಭದಲ್ಲಿ ಚಿರಾಗ್ ಪಾಸ್ವಾನ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಗ್ಗೆ ಇರುವ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೇ, 143 ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕೆಂಬ ಒತ್ತಡ ಪಕ್ಷದೊಳಗೆ ಏಳುತ್ತಿದೆ ಎಂಬ ಸಂಗತಿಯನ್ನೂ ಪಾಸ್ವಾನ್ ತಿಳಿಸಿದ್ದಾರೆ.

ಕಳೆದ ಬಾರಿ, ಅಂದರೆ, 2015ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಎನ್ಡಿಎಗೆ ವಿರುದ್ಧ ಸ್ಪರ್ಧಿಸಿ ಜಯಭೇರಿ ಭಾರಿಸಿತ್ತು. ಬಿಜೆಪಿ ಜೊತೆ ಇದ್ದ ಎಲ್ಜೆಪಿ 42 ಸ್ಥಾನಗಳ ಪೈಕಿ ಎರಡರಲ್ಲಿ ಮಾತ್ರ ಗೆಲ್ಲಲು ಶಕ್ಯವಾಗಿತ್ತು. ಅಲ್ಲಿಂದಲೇ, ಜೆಡಿಯು ಜೊತೆ ಎಲ್ಜೆಪಿ ಸಂಬಂಧ ಅಷ್ಟೊಂದು ಹಿತಕರವಾಗಿ ಇರಲಿಲ್ಲ.


ಈಗ ಬಿಹಾರದದಲ್ಲಿ ಎನ್ಡಿಎ ಮಿತ್ರಪಕ್ಷಗಳ ಮಧ್ಯೆ ಇರುವ ಭಿನ್ನಾಭಿಪ್ರಾಯಗಳ ಶಮನಕ್ಕೆ ಬಿಜೆಪಿ ಹೊಸ ಪ್ರಯತ್ನ ಆರಂಭಿಸಿದೆ. ಜೆ.ಪಿ. ನಡ್ಡಾ ಜೊತೆ ಅಮಿತ್ ಶಾ ಕೂಡ ರಣಾಂಗಣಕ್ಕೆ ಇಳಿದಿದ್ದಾರೆ. ಒಟ್ಟು ಬೆಳವಣಿಗೆಯನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಂತೆ ಇದೆ. ಬಿಹಾರ ವಿಧಾನಸಭಾ ಚುನಾವಣೆಗೆ ಎನ್ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಇನ್ನೊಂದೆಡೆ, ಬಿಹಾರದ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡಿವೆ. ಆರ್ಜೆಡಿ ನೇತೃತ್ವದಲ್ಲಿ ಕಾಂಗ್ರೆಸ್, ಎಡಪಕ್ಷಗಳು ಮಹಾಮೈತ್ರಿ ಮಾಡಿಕೊಂಡಿವೆ. ಲಾಲೂ ಪುತ್ರ ಆರ್ಜೆಡಿಯ ತೇಜಸ್ವಿ ಯಾದವ್ ಅವರನ್ನ ಸಿಎಂ ಅಭ್ಯರ್ಥಿಯನ್ನಾಗಿ ಬಿಂಬಿಸಲಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99