-->

ಮಂಗಳೂರು ರಸ್ತೆ ಹೆಸರು ಗೊಂದಲ: ಅಧಿಕೃತ ಹೆಸರು ಬಳಕೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ

ಮಂಗಳೂರು ರಸ್ತೆ ಹೆಸರು ಗೊಂದಲ: ಅಧಿಕೃತ ಹೆಸರು ಬಳಕೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ

ಮಂಗಳೂರು ನಗರದ ರಸ್ತೆಗಳು ಮತ್ತು ವೃತ್ತಗಳಿಗೆ ಸ೦ಬ೦ಧಪಟ್ಟ೦ತೆ  ಅಧಿಕೃತ ಹೆಸರುಗಳನ್ನು ಬಳಸುವಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿ

ಸಮಾಜಕ್ಕೆ ಉಪಯುಕ್ತವಾಗುವ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಸಮರ್ಪಣಾ ಭಾವದಿಂದ ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ನಮ್ಮ ಜಿಲ್ಲೆಯ ಮಹಾನುಭಾವರನ್ನು ಮುಂದಿನ ಪೀಳಿಗೆ ಸ್ಮರಿಸಬೇಕೆಂಬ ಉದಾತ್ತ  ಉದ್ದೇಶದಿಂದ ಮಂಗಳೂರು ನಗರದ ರಸ್ತೆಗಳಿಗೆ ಮತ್ತು ವೃತ್ತಗಳಿಗೆ  ಮಹಾನುಭಾವರ  ಹೆಸರುಗಳನ್ನಿಟ್ಟು ಗೌರವ ಸಲ್ಲಿಸಲಾಗಿದೆ.

 ಆದರೆ ಈ ಮಹಾನುಭಾವರ ಹೆಸರಿನಲ್ಲಿರುವ ಅಧಿಕೃತ  ರಸ್ತೆ ಅಥವಾ ವೃತ್ತಗಳ ಬಗ್ಗೆ ಸಾವ೯ಜನಿಕ ಸಾರಿಗೆ ವಾಹನಗಳಲ್ಲಿ  ಪಯಣಿಸುವ ಸ೦ದಭ೯ದಲ್ಲಿ ಸದರಿ  ಅಧಿಕೃತ ರಸ್ತೆ ಹಾಗೂ ವೃತ್ತಗಳ ಹೆಸರನ್ನು ಹೇಳಿದಲ್ಲಿ ಅ೦ತಹ ಹೆಸರಿನಲ್ಲಿರುವ ರಸ್ತೆ ಅಥವಾ ವೃತ್ತದ  ಪರಿಚಯ ತಮಗೆ ಇಲ್ಲವೆಂಬ ಉತ್ತರ ಬಸ್ ಸಿಬ್ಬಂದಿ ಮತ್ತು ಆಟೋ ಚಾಲಕರಿ೦ದ ದೊರಕುವುದು.

 ಹಾಗೆಯೇ ಸದರಿ ಹೆಸರುಗಳುಳ್ಳ ವೃತ್ತ ಮತ್ತು ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳು ಕೂಡ ಅಧಿಕೃತ ಹೆಸರುಗಳನ್ನು ಬಳಸದೆ ವಾಡಿಕೆಯಲ್ಲಿರುವ ಹೆಸರುಗಳನ್ನು ಬಳಸುವುದು ತೀರಾ ವಿಷಾದನೀಯ ಹಾಗೂ ವೇದನೆಯ ಸಂಗತಿಯಾಗಿದೆ. ಆದ್ದರಿಂದ  ಈ ಅಂಶವನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸುವ ಅನಿವಾರ್ಯತೆಯಿದೆ.  

 ಸಾರ್ವಜನಿಕ ಸಾರಿಗೆ ವಾಹನಗಳಾದ ಬಸ್ಸುಗಳಲ್ಲಿ ಆಟೊರಿಕ್ಷಾಗಳಲ್ಲಿ ಪ್ರಯಾಣಿಸಿದಾಗ ಅಧಿಕೃತ ಹೆಸರುಗಳನ್ನು ಕರೆಯಲಾಗುವುದಿಲ್ಲ. ಜಿಲ್ಲಾಡಳಿತವು ಈ ವಿಷಯದ ಬಗ್ಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ಜಾರಿ ಮಾಡಿ ಅಧಿಕೃತ ಹೆಸರುಗಳನ್ನು ಬಳಸುವಂತೆ ಸಾರ್ವಜನಿಕ ಸಾರಿಗೆ ವಾಹನಗಳ ಮಾಲಕರಿಗೆ ಮತ್ತು ಸಿಬ೦ದಿಯವರಿಗೆ ಹಾಗೂ ಅಟೋರಿಕ್ಷಾದ ಮಾಲಕರಿಗೆ/ಚಾಲಕರಿಗೆ ಸೂಕ್ತ ಆದೇಶ ಹೊರಡಿಸಬೇಕಾಗಿದೆ. 

 ಹಾಗೆಯೇ ಈ ವೃತ್ತಗಳು ಹಾಗೂ ರಸ್ತೆಗಳಲ್ಲಿ ಇರುವ ಅಂಗಡಿ ಮುಂಗಟ್ಟುಗಳು ಕೂಡ ಸದರಿ ಅಧಿಕೃತ ಹೆಸರುಗಳನ್ನೇ ತಮ್ಮ ನಾಮಫಲಕದಲ್ಲಿ  ಬಳಸುವಂತೆ ಅಂಗಡಿ ಮಾಲಕರಿಗೆ ಕೂಡ ಸೂಕ್ತ ನಿರ್ದೇಶನವನ್ನು ಹೊರಡಿಸಬೇಕಾಗಿದೆ. 

ಅಧಿಕೃತ ಹೆಸರುಗಳನ್ನು ಸಾರ್ವಜನಿಕರು ವ್ಯಾಪಕವಾಗಿ ಬಳಸುವಂತೆ ಮಾಡುವಲ್ಲಿ ಪತ್ರಿಕೆ ಮತ್ತು  ದೃಶ್ಯ ಮಾಧ್ಯಮಗಳ ಪಾತ್ರ ಕೂಡ ಮಹತ್ವದ್ದಾಗಿದೆ. ಮಾಧ್ಯಮಗಳು ವರದಿಯನ್ನು ಬಿತ್ತರಿಸುವಾಗ ಅಧಿಕೃತ ಹೆಸರುಗಳನ್ನು  ಬಳಸಿದ್ದಲ್ಲಿ ಸಾರ್ವಜನಿಕರು ಕೂಡಾ ಅದೇ ಹೆಸರನ್ನು ಬಳಸುವಂತಾಗುವುದು.
 
ಅಧಿಕೃತ ಹೆಸರುಗಳನ್ನು ಬಳಸದ ನಗರದ ರಸ್ತೆ ಮತ್ತು ವೃತ್ತಗಳನ್ನು ಈ ಕೆಳಗೆ ಕಾಣಿಸಲಾಗಿದೆ. ಸದರಿ ರಸ್ತೆ ಮತ್ತು ವೃತ್ತಗಳ ವಾಡಿಕೆಯ ಹೆಸರುಗಳನ್ನು ಅವರಣದಲ್ಲಿ ನಮೂದಿಸಲಾಗಿದೆ. 
 
*ನಗರದ ವೃತ್ತಗಳು*

1.ರಾಷ್ಟ್ರಕವಿ ಗೋವಿಂದ ಪೈ ವೃತ್ತ (ನವಭಾರತ್ ಸರ್ಕಲ್)

2. ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ( ಜ್ಯೋತಿ ಸರ್ಕಲ್ )

3. ಹ್ಯಾಮಿಲ್ಟನ್ ವೃತ್ತ  (ಸ್ಟೇಟ್ ಬ್ಯಾಂಕ್ ಸರ್ಕಲ್)

4. ಉಳ್ಳಾಲ ಶ್ರೀನಿವಾಸ ಮಲ್ಯ ವೃತ್ತ (ಪಡೀಲ್ ಜಂಕ್ಷನ್)

5. ಮಹಾವೀರ ವೃತ್ತ (ಪಂಪ್ವೆಲ್    ಸರ್ಕಲ್) 

*ನಗರದ ರಸ್ತೆಗಳು*

1. ಡಾ. ಕೆ. ಶಿವರಾಮ ಕಾರಂತ ರಸ್ತೆ (ಬಲ್ಮಠ ರಸ್ತೆ)

2.  ಕುದ್ಮುಲ್ ರಂಗರಾವ್ ರಸ್ತೆ (ಪಿ.ವಿ.ಎಸ್. ರಸ್ತೆ)

3 ಡಾ. ಯು.ಪಿ. ಮಲ್ಯ ರಸ್ತೆ (ಮೈದಾನ ರಸ್ತೆ) 

4.ಕಾಮ್ರೆಡ್‌ ಎ. ಶಾ೦ತಾರಾಮ ಪೈ ರಸ್ತೆ (ಭವಂತಿ ರಸ್ತೆ)

5. ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ (ಡೊ೦ಗರಕೇರಿ ರಸ್ತೆ)

6. ಸುಂದರರಾಮ ಶೆಟ್ಟಿ ರಸ್ತೆ (ಲೈಟ್ ಹೌಸ್ ಹಿಲ್‌  ರೋಡ್)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99