ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಇಲಾಖೆ ನೌಕರರ ಉದ್ಧಟತನ: ನೂರಾರು ವಕೀಲರಿಗೆ ಅನ್ಯಾಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಇಲಾಖೆಯ ನೌಕರರು ಎಷ್ಟು ಉದಾಸೀನತೆ ಮತ್ತು ಉದ್ಧಟತನ ತೋರಿದ್ದಾರೆ ಎಂಬುದಕ್ಕೆ ಇದೊಂದು ಪುಟ್ಟ ಉದಾಹರಣೆ. ಸದಾ ಹರಟೆಯಲ್ಲಿ ಕಾಲಕಳೆಯುವ ಇಲ್ಲಿನ ನೌಕರರು ತಮ್ಮ ಮೇಲಾಧಿಕಾರಿಗಳಿಗೆ ಕಳುಹಿಸಬೇಕಾಗಿರುವ ಫೈಲ್‌ಗಳನ್ನು ಇನ್ನೂ ಕಳಿಸದೆ ಉದ್ಧಟತನ ತೋರಿದ್ದಾರೆ.
ಕಳೆದ ವರ್ಷದ ಅಂತ್ಯದಲ್ಲಿ ಗೌರವ ಮಧ್ಯಸ್ಥಗಾರರ ನೇಮಕಕ್ಕೆ ಅರ್ಹ ನ್ಯಾಯವಾದಿಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಹಾಗಾಗಿ 300ಕ್ಕೂ ಅಧಿಕ ವಕೀಲರು ಈ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದರು. ಕೋವಿಡ್ ಉಪಟಳ ಆರಂಭವಾಗುವ ಮುನ್ನವೇ ಈ ಪ್ರಕ್ರಿಯೆ ನಡೆದಿತ್ತು. 2020ರ ಜನವರಿಯಲ್ಲಿ ಸೂಕ್ತ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಲು ಕೊನೇ ದಿನವಾಗಿತ್ತು. ಮತ್ತು ಸೂಕ್ತ ಪರಿಶೀಲನೆ ಬಳಿಕ ಈ ಅರ್ಜಿಗಳನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ಈ ಅರ್ಜಿಗಳನ್ನು ಕಳುಹಿಸಬೇಕಿತ್ತು.
ಆದರೆ, ಈ ಫೈಲುಗಳು ಇನ್ನೂ ಜನತಾ ಬಜಾರಿನಲ್ಲಿ ಇರುವ ಮಂಗಳೂರು ಕಚೇರಿಯಲ್ಲಿ ಧೂಳು ತಿನ್ನುತ್ತಿದೆ. ಯಾಕೆ ಹೀಗಾಯಿತು ಎಂದು ಕೇಳಿದರೆ ಇಲಾಖೆಯ ನೌಕರರಲ್ಲಿ ಇದಕ್ಕೆ ಯಾವುದೇ ಸ್ಪಷ್ಟ ಉತ್ತರವಿಲ್ಲ.
ಇನ್ನು, ಪಕ್ಕದ ಉಡುಪಿ ಜಿಲ್ಲೆಯ ಸಹಕಾರಿ ಇಲಾಖೆಯ ನೌಕರರು ಈ ಫೈಲುಗಳನ್ನು ಸೂಕ್ತ ಕಾಲಕ್ಕೆ ವಿಲೇವಾರಿ ಮಾಡಿರುವ ಕಾರಣದಿಂದ ಕಳೆದ ಆಗಸ್ಟ್‌ನಲ್ಲಿ ಮಧ್ಯಸ್ಥಗಾರರ ನೇಮಕವಾಗಿ ಸೂಕ್ತ ಆದೇಶ ಹೊರಬಿದ್ದಿದೆ. 315 ಮಂದಿ ವಕೀಲರನ್ನು ಗೌರವ ಮಧ್ಯಸ್ಥಗಾರರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಈ ಭಾಗ್ಯ ದಕ್ಷಿಣ ಕನ್ನಡದ ವಕೀಲರಿಗೆ ಸಿಕ್ಕಿಲ್ಲ.
ಇಲ್ಲಿನ ನೌಕರರ ಉಡಾಫೆ, ಕರ್ತವ್ಯ ನಿರ್ವಹಣೆಯಲ್ಲಿನ ಉದಾಸೀನತೆ ಇದಕ್ಕೆ ಕಾರಣ ಎಂಬುದು ಬೇರೆ ಹೇಳಬೇಕಿಲ್ಲ. ಇನ್ನಾದರೂ, "ಕರ್ತವ್ಯವೇ ದೇವರು" ಎಂಬ ಮಾತಿಗೆ ಸ್ವಲ್ಪ ಗೌರವನ್ನಾದರೂ ಸಿಗುವ ಹಾಗೆ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಇಲಾಖೆಯ ನೌಕರರು ಪ್ರಯತ್ನ ಪಡುತ್ತಾರೆ ಎಂಬ ನಿರೀಕ್ಷೆ ಕರಾವಳಿ ಜನತೆಯದ್ದು.