-->

ಮರೆತು ಹೋದ ಮಾದರಿ ರಾಜಕಾರಣಿ ಪಿ.ಎಫ್. ರಾಡ್ರಿಗಸ್: ಸಂಭಾವಿತ ಜನನಾಯಕನ ಕಿರು ಪರಿಚಯ

ಮರೆತು ಹೋದ ಮಾದರಿ ರಾಜಕಾರಣಿ ಪಿ.ಎಫ್. ರಾಡ್ರಿಗಸ್: ಸಂಭಾವಿತ ಜನನಾಯಕನ ಕಿರು ಪರಿಚಯ

ಚುನಾಯಿತ ಜನಪ್ರತಿನಿಧಿಗಳಾಗಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸೇವೆ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲೆಯ ವಕೀಲರುಗಳ ಪರಿಚಯ ಮಾಲಿಕೆ
 ಶ್ರೀ ಪಿ.ಎಫ್.ರಾಡ್ರಿಗಸ್‌

ಮಂಗಳೂರು ವಿಧಾನಸಭಾ ಕ್ಷೇತ್ರದ ಸದಸ್ಯ ಹಾಗೂ  ಕರ್ನಾಟಕ ಸರ್ಕಾರದಲ್ಲಿ ವಸತಿ ಸಚಿವರಾಗಿ ಸೇವೆ ಸಲ್ಲಿಸಿದವರು.

ಶ್ರೀ ಪಿ.ಎಫ್.ರಾಡ್ರಿಗಸ್  ಇವರು ದಿನಾಂಕ  23.2.1924 ರ೦ದು ಮಂಗಳೂರಿನ ಪ್ರತಿಷ್ಠಿತ ರೋಮನ್ ಕ್ಯಾಥೊಲಿಕ್ ಕ್ರಿಶ್ಚಿಯನ್  ಕುಟುಂಬದಲ್ಲಿ ಜನಿಸಿದರು. ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದ ಇವರು ತಮ್ಮ ಬಿ.ಎ. ಪದವಿಯನ್ನು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ತಮ್ಮ   ಕಾನೂನು  ವ್ಯಾಸಂಗವನ್ನು ಮುಂಬಯಿಯಲ್ಲಿ ಮುಂದುವರಿಸಿದ ಇವರು  ಬಾ೦ಬೆ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು  ಸಂಪಾದಿಸಿದರು.

ವಕೀಲರಾಗಿ ನೋಂದಾಯಿಸಿಕೊಂಡ ಬಳಿಕ ಮಂಗಳೂರಿನಲ್ಲಿ ತಮ್ಮ ವಕೀಲ ವೃತ್ತಿಯನ್ನು ಕೈಗೊಂಡರು. ಮ೦ಗಳೂರಿನಲ್ಲಿ  ಅ೦ದಿನ ಕಾಲದಲ್ಲಿ  ಸಿವಿಲ್ ಮತ್ತು ಕ್ರಿಮಿನಲ್ ವಿಭಾಗದಲ್ಲಿ ಪ್ರಖ್ಯಾತ ವಕೀಲರಾಗಿದ್ದ ಕದ್ರಿ ಸೋಮಶೇಖರ್ ರಾವ್ ಅವರ ಬಳಿ   ಕಿರಿಯ ವಕೀಲರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಸಿವಿಲ್‌ ಪ್ರಕರಣಗಳಲ್ಲಿ ಹೆಚ್ಚಿನ ನೈಪುಣ್ಯತೆ ಪಡೆದರು.

ವಕೀಲ ವೃತ್ತಿಯ ಜೊತೆಗೆ ಸಾವ೯ಜನಿಕ ಕ್ಷೇತ್ರದಲ್ಲಿ ಕೂಡಾ ಸೇವೆಯನ್ನು ಸಲ್ಲಿಸಿದರು. ಆ ಕಾಲದಲ್ಲಿ ಮ೦ಗಳೂರಿನಲ್ಲಿ  ನಗರ ಸಭೆ ಅಸ್ತಿತ್ವದಲ್ಲಿತ್ತು.  ಮಂಗಳೂರು ನಗರಸಭಾ ಸದಸ್ಯರಾಗಿ ಶ್ರೀಯುತ ಪಿ.ಎಫ್. ರೊಡ್ರಿಗಸ್ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ.

ಶತಮಾನದ ಇತಿಹಾಸ ಹೊಂದಿರುವ ಮಂಗಳೂರಿನ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯದವರ ಪ್ರತಿಷ್ಠಿತ ಎಂಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

1953 ರಲ್ಲಿ  ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಕಾನೂನು ಕಾಲೇಜನ್ನು  ಉಡುಪಿಯಲ್ಲಿ ಕೀರ್ತಿಶೇಷ ಡಾ.ಟಿ.ಎಂ.ಎ.ಪೈ ಯವರು  ಸ್ಥಾಪಿಸಿದರು. 1974 ರಲ್ಲಿ ಮ೦ಗಳೂರಿನಲ್ಲಿ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಕಾನೂನು ಕಾಲೇಜು ಪ್ರಾರಂಭವಾಯಿತು.  1974 ರಿಂದ ತಮ್ಮ ಜೀವನದ ಕೊನೆಯ ದಿನಗಳ ವರೆಗೂ SDM ಕಾನೂನು ಕಾಲೇಜ್ ನಲ್ಲಿ  ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದರು.

1978 ರಲ್ಲಿ  ಕನಾ೯ಟಕ ರಾಜ್ಯ  ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮ೦ಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾದರು. ಶ್ರೀ ಡಿ.ದೇವರಾಜ ಅರಸು ಅವರ ಸಂಪುಟದಲ್ಲಿ ವಸತಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಚಿವರಾಗಿ ತಮ್ಮ ಅಧಿಕಾರಾವಧಿಯಲ್ಲಿ ಶ್ರೀ ಪಿ.ಎಫ್.ರಾಡ್ರಿಗಸ್  ಅವರು ಮ೦ಗಳೂರು ನಗರಕ್ಕೆ ನೀಡಿದ ಮಹತ್ವದ ಕೊಡುಗೆಗಳಲ್ಲಿ ಹ೦ಪನಕಟ್ಟೆಯಲ್ಲಿ  ತೀರಾ ಇಕ್ಕಟ್ಟಾದ ಜಾಗದಲ್ಲಿ ಇದ್ದ KSRTC ಬಸ್ ನಿಲ್ದಾಣವನ್ನು ಬಿಜೈಗೆ ಸ್ಥಳಾಂತರಿಸಿರುವದು ಮುಖ್ಯವಾದುದು.

ಜಿಲ್ಲಾ ನ್ಯಾಯಾಲಯ ಸಮುಚ್ಚಯದ ಬಳಿ ನೂತನ ನ್ಯಾಯಾಲಯ ಸ೦ಕೀಣ೯ (ಈಗ ಈ ಕಟ್ಟಡವನ್ನು ಎನೆಕ್ಸ್ ಬಿಲ್ಡಿಂಗ್ ಎಂದು ಕರೆಯಲಾಗುತ್ತದೆ)  ನಿಮಾ೯ಣ ಕಾರ್ಯ  ಇವರ ಅವಧಿಯಲ್ಲಿ ಪ್ರಾರಂಭವಾಯಿತು.  ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯದಲ್ಲಿ  ಕಾರ್ಯ ನಿವ೯ಹಿಸುತ್ತಿದ್ದ JMFC ನ್ಯಾಯಾಲಯಗಳನ್ನು   ಕೋರ್ಟ್ ಗುಡ್ಡದಲ್ಲಿ  ನೂತನವಾಗಿ ನಿಮಾ೯ಣವಾದ  ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.  ಕೋರ್ಟ್ ಗುಡ್ಡದಲ್ಲಿ ಅಭಿಯೋಗ ಇಲಾಖೆಯ ನೂತನ ಕಟ್ಟಡದ ಶಿಲಾನ್ಯಾಸ  ಕೂಡಾ ಇವರ ಅವಧಿಯಲ್ಲಿ ನಡೆಯಿತು. ಈಗ ಈ ಕಟ್ಟಡ  ಶಿಥಿಲವಾಗಿದೆ. ಪ್ರಸ್ತುತ  ಅಭಿಯೋಗ ಇಲಾಖೆಯ ಕಚೇರಿಗಳನ್ನು ಮತ್ತು ವಕೀಲರ ಸಂಘದ ಕಚೇರಿಯನ್ನು  ಜೆಎಂಎಫ್ಸಿ ನ್ಯಾಯಾಲಯವಿದ್ದ  ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. 
 ದಕ್ಷ ಹಾಗೂ ಪ್ರಾಮಾಣಿಕ ಸೇವೆಯನ್ನು ತಮ್ಮ ಅಧಿಕಾರಾವಧಿಯಲ್ಲಿ ನೀಡಿದ ಶ್ರೀ  ಪಿ.ಎಫ್. ರೊಡ್ರಿಗಸ್ ಅವರು ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು.

1983 ರಲ್ಲಿ ಎರಡನೇ ಬಾರಿಗೆ ಮ೦ಗಳೂರು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ  ಸ್ಪರ್ಧಿಸಿದರು. ಆಡಳಿತಾರೂಢ ಪಕ್ಷದ ವಿರುದ್ಧ ರಾಜ್ಯಾದ್ಯಂತ  ಬೀಸಿದ ಆಡಳಿತ ವಿರೋಧಿ ಅಲೆ ಮಂಗಳೂರಿನಲ್ಲಿ ಕೂಡಾ  ತನ್ನ ಪ್ರಭಾವವನ್ನು ಬೀರಿತು. ತತ್ಪರಿಣಾಮವಾಗಿ ಕಿರಿಯ ವಕೀಲರಾಗಿ ಮಂಗಳೂರಿನಲ್ಲಿ ಆಗ ತಾನೇ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದ  ಶ್ರೀ  ವಿ. ಧನಂಜಯ ಕುಮಾರ್ ಅವರು ಶ್ರೀ ಪಿ.ಎಫ್. ರೋಡ್ರಿಗಸ್ ಅವರ ವಿರುದ್ಧ ಜಯ ಗಳಿಸಿದರು.  1983 ರ ಬಳಿಕ ಶ್ರೀ ಪಿ.ಎಫ್. ರೊಡ್ರಿಗಸ್ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತರಾದರು. ತಮ್ಮ ವಕೀಲ ವೃತ್ತಿ ಮತ್ತು ಕಾನೂನು ಪ್ರಾಧ್ಯಾಪಕ ವೃತ್ತಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.

ಮೌಲ್ಯಾಧಾರಿತ ರಾಜಕಾರಣಿ ಎಂಬ ಖ್ಯಾತಿಯ ಜೊತೆಗೆ ತಮ್ಮ ವಕೀಲಿ  ವೃತ್ತಿ ಧರ್ಮ ಪಾಲನೆಗೂ ಮಹತ್ವ ನೀಡಿ ಉತ್ತಮ ವಕೀಲರೆ೦ಬ ಖ್ಯಾತಿಯನ್ನು ಸಂಪಾದಿಸಿದರು. 

72 ವರ್ಷಗಳ ಸಾಥ೯ಕ ಜೀವನ  ನಡೆಸಿದ ಶ್ರೀ ಪಿ.ಎಫ್. ರೊಡ್ರಿಗಸ್ ಅವರು ದಿನಾಂಕ 12.3.1996 ರಂದು ಮಂಗಳೂರಿನಲ್ಲಿ ನಿಧನರಾದರು

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99