ಜೆಡಿಎಸ್ ನಾಯಕ ರಮೇಶ್‌ಬಾಬು ಕಾಂಗ್ರೆಸ್‌ಗೆ, ಇನ್ನೂ ಹಲವರ ಅರ್ಜಿ: ಡಿಕೆಶಿ
60 ಮಂದಿ ಕಾಂಗ್ರೆಸ್‌ಗೆ ಮರಳಲು ಅರ್ಜಿ
ಬೆಂಗಳೂರು: ಕಳೆದ ವರ್ಷ ಕಾಂಗ್ರೆಸ್ ಬಿಟ್ಟು ಇತರ ಪಕ್ಷಕ್ಕೆ ಹೋಗಿರುವ 60 ಹಿರಿಯ ನಾಯಕರು ಮತ್ತೆ ಪಕ್ಷಕ್ಕೆ ಬರಲು ಅರ್ಜಿ ಹಾಕಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಜೆಡಿಎಸ್ ಮುಖಂಡ ರಮೇಶ್ ಬಾಬು ಅವರನ್ನು ಪಕ್ಷಕ್ಕೆ ಸೇರ್ಪಡೆಗೊಂಡರು. ಅವರನ್ನು ಬರ ಮಾಡಿ ಕೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್, ಪಕ್ಷಕ್ಕೆ ಮರಳಿ ಬರಲು ಹಲವಾರು ನಾಯಕರು ಮುಂದಾಗಿದ್ದಾರೆ. ಅವರನ್ನು ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಸಮಿತಿ ರಚನೆ ಮಾಡಿಲಾಗಿದೆ. ಎಲ್ಲ ರೀತಿಯಲ್ಲೂ ಪರಿಶೀಲಿಸಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಮೇಶ್ ಬಾಬು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆಂದು ಅರ್ಜಿ ಹಾಕಿದ್ದರು. ಸದ್ಯದಲ್ಲೇ ವಿಧಾನಪರಿಷತ್ ಚುನಾವಣೆ ಬರುವುದರಿಂದ ರಮೇಶ್ ಬಾಬು ಕಾಂಗ್ರೆಸ್ ಸೇರ್ಪಡೆಗೆ ನಾವು ಒಪ್ಪಿಕೊಂಡೆವು ಎಂದು ಶಿವಕುಮಾರ್ ಹೇಳಿದರು.
ಸೇರ್ಪಡೆ ಬಳಿಕ ರಮೇಶ್ ಬಾಬು ಮಾತನಾಡಿ, ಸಿದ್ದರಾಮಯ್ಯನವರು ಜನತಾದಳದ ರಾಜ್ಯಾಧ್ಯಕ್ಷರಾಗಿದ್ದಾಗ ನನ್ನನ್ನು ಪ್ರಧಾನ ಕಾರ್ಯದರ್ಶಿ ಮಾಡಿದ್ದರು. ಚಳವಳಿ ರೂಪದಲ್ಲಿರುವ ಕಾಂಗ್ರೆಸ್ ಗೆ ನಾನು ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಮೇಶ್ ಬಾಬು ಒಬ್ಬ ಸಂಘಟನಕಾರ. ನಾನು ಜೆಡಿಎಸ್‌ನಲ್ಲಿದ್ದಾಗ ಅವರು ಜೆಡಿಎಸ್ ಪಕ್ಷದಲ್ಲಿ ಇದ್ದರು. ಈಗ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಒಂದು ರೀತಿ ತಾಯಿ ಪಕ್ಷ ದೇವೇಗೌಡರು ಕಾಂಗ್ರೆಸ್ ಪಕ್ಷದಲ್ಲಿ ತಾಲೂಕು ಬೋರ್ಡ್ ಮೇಂಬರ್ ಆಗಿದ್ದವರು. ರಾಮಕೃಷ್ಣ ಹೆಗಡೆ ಕೂಡ ಕಾಂಗ್ರೆಸ್ ಪಕ್ಷದವರು ಎಂದು ಅವರು ಹೇಳಿದರು.