ಬಾಲಿವುಡ್ ಗಟ್ಟಿಗಿತ್ತಿ: ರೆಬೆಲ್ ಸ್ಟಾರ್ ನಟಿ ಕಂಗನಾ ರಣಾವತ್
ಒಂದು ಕಡೆ ಪ್ರತಿಭಾವಂತ ನಟಿ, ಮತ್ತೊಂದು ಕಡೆ ಸರಕಾರವನ್ನೇ ಎದುರು ಹಾಕಿಕೊಳ್ಳುವ ದಿಟ್ಟತನ, ಇನ್ನೊಂದು ಕಡೆ ಬಾಲಿವುಡ್ಡಿನಲ್ಲಿ ದಶಕಗಳಿಂದ ತಲೆ ಎತ್ತಿರುವ ಸ್ವಜನ ಪಕ್ಷಪಾತದ ವಿರುದ್ಧ ಧ್ವನಿ ಎತ್ತುವ ದಿಟ್ಟತನ...... ಇವೆಲ್ಲವೂ ಸೇರಿದರೆ ಅದು ಕಂಗನಾ ಎಂದು ಯಾರು ಬೇಕಾದರೂ ಹೇಳಬಹುದು! ಹಿಮಾಚಲ ಪ್ರದೇಶದ ಒಂದು ಪುಟ್ಟ ನಗರದಿಂದ ಮುಂಬೈಗೆ ಬಂದು ಯಾವ ಗಾಡ್ ಫಾದರ್ ಇಲ್ಲದೆ ಗಟ್ಟಿಯಾಗಿ ನೆಲೆ ಊರಿದ್ದು ಮಾತ್ರವಲ್ಲ ತನ್ನ ಅಪಾರ ಪ್ರತಿಭೆಯನ್ನು ಒರೆಗೆ ಹಚ್ಚಿದ್ದು, ಸಾಲು ಸಾಲು ಯಶಸ್ವೀ ಸಿನೆಮಾಗಳನ್ನು ನೀಡಿದ್ದು ಆಕೆಯ ಹೆಚ್ಚುಗಾರಿಕೆ.
ಕಂಗನಾ ರಜಪೂತ ಕುಟುಂಬದ ಹಿನ್ನೆಲೆಯಿಂದ ಬಂದವಳು. ಅವಳ ಅಜ್ಜನ ಅಪ್ಪ MLA ಆಗಿದ್ದರು. ಅಜ್ಜ ಐಎಎಸ್ ಅಧಿಕಾರಿ. ತಂದೆ ಬಹಳ ದೊಡ್ಡ ಬಿಸಿನೆಸ್ ಮ್ಯಾಗ್ನೆಟ್. ತಾಯಿ ಟೀಚರ್. ಅರಮನೆಯಂತಹ ಮನೆ ಇತ್ತು. ಆಕೆ ಬಾಲ್ಯದಿಂದಲೂ ಮಹಾ ಜಗಳಗಂಟಿ. ಅಣ್ಣನಿಗೆ ಆಟಿಕೆಯ ಪಿಸ್ತೂಲ್ ಅಪ್ಪ ತಂದುಕೊಟ್ಟು ಅವಳಿಗೆ ಗೊಂಬೆ ತಂದುಕೊಟ್ಟಾಗ ಇಡೀ ದಿನ ಮನೆಯಲ್ಲಿ ಜಗಳವೇ ಜಗಳ. ನಾನು ಸಿನೆಮಾದಲ್ಲಿ ಅಭಿನಯಿಸಲು ಹೋಗುತ್ತೇನೆ ಎಂದು ಆಕೆ ಮನೆಯಲ್ಲಿ ಗಟ್ಟಿಯಾಗಿ ಹೇಳಿದಾಗ ಭೂಕಂಪವೆ ನಡೆಯಿತು. ಮಗಳು ಬಗ್ಗುವುದಿಲ್ಲ ಎಂದು ಅಪ್ಪನಿಗೆ ಗೊತ್ತಾಯಿತು. ಎಲ್ಲಿ ಬೇಕಾದರೂ ಹಾಳಾಗಿ ಹೋಗು ಎಂದರು ಅಪ್ಪ!
ಆಗ ದೆಹಲಿಗೆ ಬಂದು ಮಾಡೆಲಿಂಗ್ ಮಾಡುತ್ತ ಅಭಿನಯದ ಅವಕಾಶವನ್ನು ಕಾದು ಕುಳಿತಳು. ಆಗ ಬ್ರೆಡ್ ಮತ್ತು ಉಪ್ಪಿನಕಾಯಿ ತಿಂದು ದಿನ ಕಳೆದದ್ದು ಉಂಟು. 2006ರಲ್ಲೀ ಮಹೇಶ್ ಭಟ್ ನಿರ್ಮಾಣದ ಗ್ಯಾಂಗಸ್ಟರ್ ಫಿಲ್ಮಿಗೆ ಅವಳು ಆಯ್ಕೆ ಆದದ್ದು ಮಿರಾಕಲ್. ಚಿತ್ರಾಂಗದಾ ಸಿಂಗ್ ಎಂಬ ಜಂಬದ ಕೋಳಿ ಕೈ ಕೊಟ್ಟು ಹೋದಾಗ ಅದೇ ಅವಕಾಶವು ಕಂಗನಾಗೆ ದೊರೆತಿತ್ತು. ಆ ಫಿಲ್ಮ್ ಸೂಪರ್ ಹಿಟ್ ಆಯ್ತು. ಕಂಗನಾಕ್ಕೆ ಅತ್ಯುತ್ತಮ ಡೇಬ್ಯೂಟ್ ನಟಿ ಎಂಬ ಫಿಲ್ಮ್ ಫೇರ್ ಪ್ರಶಸ್ತಿ ದೊರೆಯಿತು. ಅಲ್ಲಿಂದ ಸಾಲಾಗಿ ತುಂಬಾ ಯಶಸ್ವಿ ಸಿನೆಮಾಗಳನ್ನು ನೀಡಿದ ಆಕೆ ಇಂದು ಹಿಂದೀ ಸಿನೆಮಾದ ಮೋಸ್ಟ್ ಸಕ್ಸೆಸಫುಲ್ ನಟಿ ಆಗಿ ಮೂಡಿ ಬಂದಿದ್ದಾಳೆ. ಇಂದು ಹಿಂದಿಯಲ್ಲಿ ಕೇವಲ ತನ್ನ ಪ್ರತಿಭೆಯಿಂದಲೆ ಒಂದು ಸಿನೆಮಾವನ್ನು ಗೆಲ್ಲಿಸುವ ತಾಕತ್ತು ಇರುವ ನಟಿ ಎಂದರೆ ಅದು ಕಂಗನಾ ಮಾತ್ರ! ಆಕೆ ಮಾಡಿದ ಪಾತ್ರಗಳೂ ತುಂಬಾ ವೈವಿಧ್ಯಮಯ ಆದವು. ಕಂಗನಾಗೆ ಮೂರು ಬಾರಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ( ಫ್ಯಾಶನ್, ಕ್ವೀನ್, ತನು ವೆಡ್ಸ್ ಮನು) ದೊರೆತಿವೆ. ನಾಲ್ಕು ಬಾರಿ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ದೊರೆತಿವೆ. ಆಕೆಯ ಆರು ಸಿನೆಮಾಗಳು 100 ಕೋಟಿ ಮೀರಿದ ಆದಾಯವನ್ನು ಗಳಿಸಿವೆ!
ವೋ ಲಮಹೆ ( ಒಂದು ಕಾಲದ ಸ್ಟಾರ್ ನಟಿ ಪರ್ವೀನ್ ಬಾಬಿ ಅವರ ಬಯೋಪಿಕ್), ರಂಗೂನ್ ( ಒಂದು ಕಾಲದ ಬಾಲಿವುಡ್ಡಿನ ಫೈಟ್ ವುಮನ್ ನಾಡಿಯ ಕಥೆ), ಕ್ವೀನ್ ( ತನ್ನದೇ ಬದುಕಿನ ಕಥೆ ಎಂದು ಆಕೆ ಹೇಳಿದ್ದಾಳೆ), ಮಣಿಕರ್ಣಿಕಾ ( ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕಥೆ) ಇವುಗಳು ಆಕೆಯ ಜೀವನದ ಲಾಂಡ್ ಮಾರ್ಕ್ ಸಿನೆಮಾಗಳು. ಲೈಫ್ ಇನ್ ಮೆಟ್ರೋ, ಕ್ರಿಶ್ 3, ಒನ್ಸ್
ಅಪೋನ್ ಏ ಟೈಮ್ ಇನ್ ಮುಂಬೈ ಇವುಗಳು ಆಕೆಯ ಅತೀ ಯಶಸ್ವೀ ಸಿನೆಮಾಗಳು.
ಆದರೆ ಇತ್ತೀಚೆಗೆ ಕಂಗನಾ ಸುದ್ದಿ ಆಗುತ್ತಿರುವುದು ತನ್ನ ದಿಟ್ಟ ಹೋರಾಟದ ಮನೋಭಾವದಿಂದ! ಒಬ್ಬಳು ಹೆಣ್ಣು ಮಗಳು ಸಮುದ್ರದ ಅಲೆಗಳ ವಿರುದ್ಧ ಈಜುವುದು ಸುಲಭ ಅಲ್ಲ! ಆದರೆ ಕಂಗನಾ ದೇಹದಲ್ಲಿ ಹರಿಯುತ್ತಿರುವ ರಜಪೂತರ ರಕ್ತ ಅವಳನ್ನು ರೆಬೆಲ್ ನಟಿ ಆಗಿ ಮಾಡಿದೆ. ಹಿಂದಿ ಸಿನೆಮಾ ರಂಗದಲ್ಲಿ ವ್ಯಾಪಿಸಿರುವ ಸ್ವಜನ ಪಕ್ಷಪಾತದ ವಿರುದ್ಧ ಮೊದಲು ಧ್ವನಿ ಎತ್ತಿದ್ದು ಇದೇ ಕಂಗನಾ! ಬಾಲಿವುಡ್ಡಿನಲ್ಲಿ ಗಟ್ಟಿಯಾಗಿ ಬೇರು ಬಿಟ್ಟಿರುವ ಸ್ಟಾರ್ ನಟರು ಬೇರೆಯವರನ್ನು ಬೆಳೆಯಲು ಬಿಡುವುದಿಲ್ಲ ಎಂದು ಆಕೆ ನೇರವಾಗಿ ಹೇಳಿದಳು. ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ನಡೆದಾಗ ' ಅದು ಆತ್ಮಹತ್ಯೆ ಅಲ್ಲ, ಕೊಲೆ! ಸರಿಯಾದ ವಿಚಾರಣೆ ನಡೆಯಬೇಕು' ಎಂದು ಗಟ್ಟಿ ದನಿಯಲ್ಲಿ ಆಕೆ ಹೇಳಿಕೆ ಕೊಟ್ಟಳು. ಸರಕಾರವು ಕೇಸನ್ನು ಮುಚ್ಚಿ ಹಾಕುವ ಗುಮಾನಿ ಮೂಡಿದಾಗ ಸರಕಾರವನ್ನು ಎದುರು ಹಾಕಿಕೊಂಡಳು! ಮಹಾರಾಷ್ಟ್ರದ ಸರಕಾರ ತನ್ನ ಮೇಲೆ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದಳು. ಮುಂಬೈ ಮಹಾನಗರ ಪಾಲಿಕೆ ಅವಳ ಚಿತ್ರ ನಿರ್ಮಾಣದ ಕಚೇರಿಯನ್ನು ಒಡೆದು ಹಾಕುವ ನೋಟಿಸ್ ಕೊಟ್ಟಾಗ 'ನನ್ನ ದಾಖಲೆಗಳು ಸರಿ ಇವೆ. ನಾನು ಯಾವ ಅಕ್ರಮವನ್ನು ಕೂಡ ಮಾಡಿಲ್ಲ!' ಎಂದು ಸಿಡಿದು ನಿಂತಿದ್ದಾಳೆ. ಅವಳಿಗೆ ಕೇಂದ್ರ ಸರ್ಕಾರವು Y ಪ್ಲಸ್ ಭದ್ರತೆ ನೀಡಲು ಮುಂದೆ ಬಂದಿದೆ. ಬೇರೆ ಯಾವ ನಟ, ನಟಿಯರು ತನ್ನ ಸಹಾಯಕ್ಕೆ ಬಾರದೆ ಹೋದರೂ ನಾನು ಹೋರಾಟ ಮಾಡಿಯೇ ಸಿದ್ಧ ಎಂದು ಆಕೆ ಗುಡುಗು ಮಿಂಚು ಹರಿಸಿದ್ದಾಳೆ!
ಭಾರತ ಸರಕಾರದಿಂದ ಈ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವ ಕಂಗನಾ ಈ ದಿಟ್ಟ ಹೋರಾಟದ ಮನೋಭಾವದಿಂದ ನಮಗೆ ಇಷ್ಟವಾಗಿ ಬಿಡುತ್ತಾಳೆ. ಜೈ ಹೋ ಕಂಗನಾ.
ಬರಹ - ರಾಜೇಂದ್ರ ಭಟ್ ಕೆ.