-->

ಗರಿಗರಿ ನೋಟು ಕೊಡಿ, ವಿಶೇಷ ಲೇಖನ ಹಾಕ್ತೀವಿ: ದಂಧೆಗಿಳಿದ ಪತ್ರಿಕೆಯೊಂದರ ವೃತ್ತಾಂತ

ಗರಿಗರಿ ನೋಟು ಕೊಡಿ, ವಿಶೇಷ ಲೇಖನ ಹಾಕ್ತೀವಿ: ದಂಧೆಗಿಳಿದ ಪತ್ರಿಕೆಯೊಂದರ ವೃತ್ತಾಂತ

ಲೇಖನ: ಪದ್ಮನಾಭ ಸಿಬಂತಿ, ಪತ್ರಿಕೋದ್ಯಮ ಉಪನ್ಯಾಸಕರು

ಕೆಲವು ತಿಂಗಳ ಹಿಂದೆ ಒಬ್ಬರು ಮಹಿಳೆ ತಾನು "ಜರ್ನಲಿಸ್ಟ್' ಎಂದೂ, 'ಪ್ರತಿಭಾ ದರ್ಶನ' ಎಂಬ ಪತ್ರಿಕೆಯ "ರಿಪೋರ್ಟರ್" ಎಂದೂ ಪರಿಚಯಿಸಿಕೊಂಡು Arathi ಗೆ ಫೋನ್ ಮಾಡಿದರಂತೆ.
ತಾನು ಅನೇಕ ಕಲಾವಿದರನ್ನು ಸಂದರ್ಶನ ಮಾಡಿ ಲೇಖನ ಬರೆಯುತ್ತಿರುವುದಾಗಿಯೂ, ನಿಮ್ಮನ್ನು ಸಂದರ್ಶಿಸಬೇಕೆಂಬ ಉದ್ದೇಶ ಇರುವುದಾಗಿಯೂ ಹೇಳಿಕೊಂಡರಂತೆ.
"ನನ್ನ ಬಗ್ಗೆ ಲೇಖನ ಬರೆಯುವುದಕ್ಕೇನುಂಟು?" ಎಂದು ಇವಳು ನಗಾಡಿದಳು. "ಇಲ್ಲ ನಿಮ್ಮನ್ನು ಸಂದರ್ಶನ ಮಾಡಲೇಬೇಕು. ಕಾಲೇಜಿಗೆ ಬರಬಹುದೇ?" ಎಂದು ಆಕೆ ಮತ್ತೆ ಕೇಳಿದರು.
ಆಕೆ ಒತ್ತಾಯಿಸಿದ ಮೇಲೆ, "ಸರಿ ಮಾತಾಡುವುದಕ್ಕೇನು ಅಡ್ಡಿ? ಬನ್ನಿ" ಅಂತ ಇವಳು ಹೇಳಿದಳು. ಅಂತೂ ಒಂದು ದಿನ ಆಕೆ ಬಂದು ಮಾತನಾಡಿಸಿ, ತನಗೆ ಇಂತಿಂತಹ ಗಣ್ಯರ ಸಂಪರ್ಕ ಇರುವುದಾಗಿಯೂ, ಅವರೆಲ್ಲರನ್ನೂ ಸಂದರ್ಶಿಸಿ ಲೇಖನ ಬರೆದಿರುವುದಾಗಿಯೂ ಹೇಳಿ, ತಾನು ಬಿಡುವಿರದ ಪತ್ರಕರ್ತೆ ಎಂದೆಲ್ಲ ಬಣ್ಣಿಸಿ ಹೋಗಿ ಆಯಿತು.
ಆಮೇಲೊಂದು ದಿನ ನಮ್ಮದೇ ಯಕ್ಷಗಾನ ಪ್ರದರ್ಶನವಿದ್ದ ಜಾಗಕ್ಕೆ ಆಕೆ ಖುದ್ದು ಹಾಜರಾಗಿ "ನೀವು ಒಂದು ವರ್ಷದ ಚಂದಾ ಕೊಡುತ್ತೇನೆ ಎಂದಿದ್ದಿರಿ" ಅಂತ ನೆನಪಿಸಿ ಐದುನೂರು ರೂಪಾಯಿ ತೆಗೆದುಕೊಂಡು ಹೋಗಿದ್ದೂ ಆಯಿತು.
ಸ್ವಲ್ಪ ಸಮಯದ ಬಳಿಕ ಆಕೆಯಿಂದ ಮತ್ತೆ ಫೋನು. ನಿಮ್ಮ ಬಗ್ಗೆ ಲೇಖನ ಬರೆದಿದ್ದೇನೆ, ಒಮ್ಮೆ ಓದಿ ಏನಾದರೂ ತಿದ್ದುಪಡಿ ಇದ್ದರೆ ಹೇಳಿ ಅಂತ. "ನಾನು ಯಾವುದೋ ತುರ್ತು ಕೆಲಸದಲ್ಲಿದ್ದೇನೆ. ವಿಶ್ವವಿದ್ಯಾನಿಲಯದಲ್ಲಿ ತನ್ನ ಮನೆಯವರಿದ್ದಾರೆ. ಅವರನ್ನು ಭೇಟಿಯಾಗಿ" ಅಂತ ಹೇಳಿ ಇವಳು ನನ್ನ ನಂಬರ್ ಕೊಟ್ಟಿದ್ದಳು.
ಆಕೆ ನೇರವಾಗಿ ನನ್ನ ವಿಭಾಗಕ್ಕೆ ಬಂದು ಉಸ್ಸಪ್ಪ ಅಂತ ಕುಳಿತರು. ತಾನು ವಿಪರೀತ ಓಡಾಟದಲ್ಲಿರುವುದಾಗಿ ಹೇಳಿ, ಮುಂದೆ ತಾನು ಮಾತಾಡಿಸಬೇಕಿರುವ ವ್ಯಕ್ತಿಗಳ ಪಟ್ಟಿಯನ್ನು ಬಿಡಿಸಿ, ಒಂದು ಡಿಟಿಪಿ ಮಾಡಿದ ಪುಟವನ್ನು ನನ್ನ ಮುಂದಿಟ್ಟರು. 
ಲೇಖನದ ಮೇಲೆ ಕಣ್ಣು ಹಾಯಿಸುತ್ತಲೇ ಕಣ್ಣುಕತ್ತಲೆ ಬಂದಂತಾಗಿ ಅರ್ಧ ಲೀಟರ್ ನೀರು ಕುಡಿಯುವ ಸರದಿ ನನ್ನದಾಗಿತ್ತು. ಪ್ರತೀ ವಾಕ್ಯದಲ್ಲೂ ಐದಾರು ತಪ್ಪುಗಳಿದ್ದವು. ಒಂದು ವಾಕ್ಯಕ್ಕೂ ಇನ್ನೊಂದು ವಾಕ್ಯಕ್ಕೂ ದೇವರಾಣೆ ಸಂಬಂಧವಿರಲಿಲ್ಲ.
ಪಾಪ, ಅಂಥ ಹಿರಿಯ ಜರ್ನಲಿಸ್ಟಿಗೆ ನಾನು "ನೀವು ಯಾವ ಸೀಮೆಯ ಜರ್ನಲಿಸ್ಟು ಮೇಡಮು" ಎಂದು ಕೇಳಿದರೆ ಎಲ್ಲಿ ಬೇಜಾರಾಗಬಹುದೋ ಎಂದು ಆತಂಕಪಟ್ಟು ಏನೂ ಹೇಳದೆ ಸಾಧ್ಯವಾದಷ್ಟು ಲೇಖನವೆಂಬಂಥ ಆ ಬರೆಹವನ್ನು ತಿದ್ದಿ ವಾಪಸ್ ಕೊಟ್ಟೆ.
"ಈ ಟೈಪ್ ಮಾಡುವವರದ್ದೇ ಭಾರಿ ಸಮಸ್ಯೆ ಸಾರ್. ನನಗೆ ಹೇಳಿಹೇಳಿ ಸಾಕಾಯ್ತು" ಎಂದು ಅಡ್ಡಡ್ಡ ತಲೆಯಾಡಿಸಿದ ಆಕೆ, "ಇನ್ನು ಏನಂದ್ರೆ ಸಾರ್... ಈ ಲೇಖನ ಪ್ರಕಟಿಸುವ ಖರ್ಚು ಅಂತ ಮೂರು ಸಾವಿರ ಕೊಟ್ಟು ಬಿಡಿ..." ಅಂತ ನೇರವಾಗಿ ವಿಷಯಕ್ಕೆ ಬಂದರು.
ನಾನು ಹೌಹಾರಿ ಸರಿಯಾಗಿ ಕೇಳಿಸಿಕೊಳ್ಳಲಿಲ್ಲವೇನೋ ಎಂಬ ಹಾಗೆ ಮತ್ತೆ ಆಕೆಯ ಮುಖ ನೋಡಿದೆ. "ಐದು ಸಾವಿರ ಹತ್ತು ಸಾವಿರ ಎಲ್ಲ ಚಾರ್ಜು ಮಾಡ್ತೀವಿ. ನೀವು ಮೂರು ಸಾವಿರ ಕೊಟ್ಟರೆ ಸಾಕು" ಅಂದರು.
ನಾನು ಜೋರಾಗಿ ನಕ್ಕು, "ಅಯ್ಯೋ ದುಡ್ಡೆಲ್ಲ ಕೊಟ್ಟು ನಮ್ಮ ಬಗ್ಗೆ ಲೇಖನ ಪ್ರಕಟಿಸಿಕೊಳ್ಳುವ ಪ್ರಮೇಯವೇನೂ ಸದ್ಯಕ್ಕಿಲ್ಲ ಮೇಡಂ. ದಯಮಾಡಿ ಆ ಲೇಖನ ಪ್ರಕಟಿಸಬೇಡಿ" ಅಂತ ಹೇಳಿದೆ.
ಆಕೆ ಪತ್ರಿಕೋದ್ಯಮ ಇವತ್ತು ಎಷ್ಟು ಕಷ್ಟದಲ್ಲಿದೆಯೆಂದೂ, ಒಂದು ಪತ್ರಿಕೆ ಮುದ್ರಣವಾಗುವುದರ ಹಿಂದೆ ಎಷ್ಟು ಶ್ರಮ ಇದೆಯೆಂದೂ ನನಗೆ ವಿವರಿಸಿ, "ನಿಮ್ಮಂಥವರು ಪತ್ರಿಕೆಗಳನ್ನು ಸಪೋರ್ಟ್ ಮಾಡಬೇಕು ಸಾರ್" ಎಂದರು.
"ಮೇಡಂ, ನೀವೀಗ ಬಂದಿರುವುದು ಪತ್ರಿಕೋದ್ಯಮ ವಿಭಾಗಕ್ಕೆ. ನಾನು ಕನಿಷ್ಟ ಇಪ್ಪತ್ತು ವರ್ಷಗಳಿಂದ ಪತ್ರಿಕೆಗಳನ್ನು ಬಲ್ಲೆ. ಐದು ವರ್ಷ ಸ್ಟೂಡೆಂಟ್ ಆಗಿ, ಐದು ವರ್ಷ ವೃತ್ತಿಪರನಾಗಿ, ಆಮೇಲೆ ಹತ್ತು ವರ್ಷ ಅದೇ ವಿಷಯದ ಮೇಸ್ಟ್ರಾಗಿ ಪತ್ರಿಕೆಗಳನ್ನು ನೋಡಿದ್ದೇನೆ. ಪತ್ರಿಕೆಗಳು ಕಷ್ಟದಲ್ಲಿವೆ ಅಂತಲೂ ಗೊತ್ತು. ಅದಕ್ಕೆ ಚಂದಾ ತಗೊಳ್ಳಿ, ಜಾಹೀರಾತು ತಗೊಳ್ಳಿ. ಲೇಖನ ಬರೆದು ಆಮೇಲೆ ದುಡ್ಡು ಕೊಡಿ ಅಂತ ಕೇಳೋದು ಚೆನ್ನಾಗಿರಲ್ಲ" ಎಂದು ನನ್ನ ಸಮಸ್ತ ತಾಳ್ಮೆಯನ್ನು ಒಟ್ಟುಮಾಡಿ ಹೇಳಿದೆ.
ಆಕೆ ನನ್ನ ಬಳಿ ಅರ್ಧ ಗಂಟೆ ವಾದ ಮಾಡಿದರು. ತನ್ನ ವಿಧಾನದ ಬಗ್ಗೆ ಆಕೆಯಲ್ಲಿ ಎಳ್ಳಷ್ಟೂ ಸಂಕೋಚ ಇರಲಿಲ್ಲ. ಆಕೆ ನೂರಕ್ಕೆ ನೂರು ಆತ್ಮವಿಶ್ವಾಸದಿಂದ ಮಾತಾಡುತ್ತಿದ್ದುದು ನೋಡಿ ನಾನೇ ತಪ್ಪು ಮಾತಾಡುತ್ತಿದ್ದೇನಾ ಅಂತ ಅನುಮಾನವೂ ಶುರು ಆಯಿತು. ಈಕೆಯಲ್ಲಿ ಮಾತಾಡುವುದು ಕಾಲಹರಣವೆಂದು ಭಾವಿಸಿ, "ನೋಡಿ, ಈ ದುಡ್ಡುಕೊಟ್ಟು ಲೇಖನ ಬರೆಸಿಕೊಳ್ಳುವ ದುರ್ದು ಇವಳಿಗಂತೂ ಇಲ್ಲ. ನಿಮ್ಮನ್ನು ಅವಳು ಕೇಳಿಯೂ ಇಲ್ಲ. ದಯಮಾಡಿ ಆ ಲೇಖನ ಪ್ರಕಟಿಸಬೇಡಿ. ನಾಳೆ ನಿಮ್ಮ ಪತ್ರಿಕೆ ಓದಿದವರು ನಮ್ಮನ್ನು ಕೂಡ ಆಡಿಕೊಳ್ಳುವುದು ಬೇಡ. ನೀವು ದಯಮಾಡಿ ಹೊರಡಿ. ನನಗೆ ಕ್ಲಾಸಿದೆ" ಎಂದು ಸ್ವಲ್ಪ ಜೋರಾಗಿಯೇ ಮಾತಾಡಿ ಕಳಿಸಿದೆ.
ಆಮೇಲೆ ಇವಳಲ್ಲಿ ವಿಚಾರ ಹೇಳಿದಾಗ ಇವಳೂ ಬೇಸ್ತು.
ಇದೆಲ್ಲ ಆಗಿ ಕೆಲವು ತಿಂಗಳೇ ಕಳೆದವು. ಕೊರೋನಕ್ಕೂ ಮೊದಲಿನ ಘಟನೆ. ಇವತ್ತು ಮತ್ತೆ ಫೋನಂತೆ. "ಮೇಡಂ, ನಿಮ್ಮ ಬಗ್ಗೆ ಲೇಖನ ಪ್ರಕಟಿಸಿದ್ದೇವೆ. ಆ ಪತ್ರಿಕೆ ನಿಮಗೆ ಕೊಡೋದಿದೆ. ಎಲ್ಲಿ ಸಿಗ್ತೀರಿ?"
"ಲೇಖನ ಹಾಕಬೇಡಿ ಎಂದಾಗಿದೆ ಅಲ್ವ?"
"ಹಾಕಿದ್ದೀವಿ ಮೇಡಂ. ನಿಮಗೆ ಪತ್ರಿಕೆ ಕೊಡಬೇಕು."
"ನಮಗೀಗ ರಜೆ. ಆಚೆ ಬರುವುದಕ್ಕೆ ವ್ಯವಸ್ಥೆ ಇಲ್ಲ."
"ನಿಮ್ಮ ಮನೆ ಎಲ್ಲಿ ಬರುತ್ತೆ ಹೇಳಿ. ನಾನೇ ಬರ್ತೀನಿ."
"ಅಯ್ಯೋ ಅಷ್ಟು ಕಷ್ಟ ಯಾಕೆ? ಹಾಗೂ ಕೊಡಬೇಕೆಂದಿದ್ದರೆ ಪೋಸ್ಟ್ ಮಾಡಿ. ನಮ್ಮ ಮನೆಯವ್ರ ವಿಳಾಸಕ್ಕೆ ಕಳಿಸಿ ಸಾಕು."
"ಅಯ್ಯೋ ಅವರು ಬೇಡಪ್ಪಾ. ಮನೆ ಅಡ್ರೆಸ್ ಹೇಳಿ ಬರ್ತೀನಿ. ದುಡ್ಡೂ ತಗೋಬೇಕಲ್ಲ?"
ಈಗ ಮತ್ತೆ ಹೌಹಾರುವ ಸರದಿ ಇವಳದ್ದು. "ಅದನ್ನು ಅವತ್ತೇ ಅವರು ಹೇಳಿದ್ದಾರಂತೆ ಅಲ್ವ? ಮತ್ತೇನು ದುಡ್ಡಿನ ಮಾತು?"
"ಅವರೇನೋ ಹೇಳಿದ್ದಾರೆ. ನೀವೂ ಹಂಗೇನಾ? ಲೇಖನ ಬಂದ ಮೇಲೆ ನೀವು ಹಿಂಗೆ ಮಾತಾಡಿದ್ರೆ ಹೆಂಗೆ?" ಆಕೆಯ ಧ್ವನಿಯಲ್ಲಿ ಸಾಲಕೊಟ್ಟವರ ಗತ್ತು.
"ಅಯ್ಯೋ ನಾನೇನು ನಿಮ್ಮನ್ನು ಕರೆದು ಲೇಖನ ಬರೀರಿ ಅಂದೆನಾ? ನೀವೇ ಇಷ್ಟೆಲ್ಲ ಮಾಡಿ ಈಗ ದುಡ್ಡು ಕೊಡಿ ಎಂದರೆ ಹೇಗೆ?" ಇವಳಿಗೆ ಸುಸ್ತು.
ಆಕೆ ಮತ್ತೆ ಯಥಾಪ್ರಕಾರ ಪತ್ರಿಕೋದ್ಯಮ ಎಂಬುದು ಎಷ್ಟು ಕಷ್ಟದ ಕೆಲಸ ಎಂದೂ, ತಾವು ಕೇಳುತ್ತಿರುವ ಚಾರ್ಜು ಜುಜುಬಿ ಎಂದೂ, ದುಡ್ಡು ಕೇಳುವುದು ತನ್ನ ಹಕ್ಕೆಂದೂ, ಕೊಡುವುದು ನಿಮ್ಮ ಕರ್ತವ್ಯ ಎಂದೂ ಅರ್ಧ ಗಂಟೆ ಉಚಿತ ಶಿಬಿರ ನಡೆಸಿದ್ದೂ ಆಯಿತು. ಅಂತೂ ಆಕೆಯಿಂದ ಬಚಾವಾಗುವುದಕ್ಕೆ ಇವಳು ಇನ್ನೊಂದು ಜನ್ಮ ಎತ್ತುವುದೊಂದು ಬಾಕಿ.
****
ಇದೆಲ್ಲ ಹೇಳಿಕೊಳ್ಳಬೇಕಾದ ಸಂಗತಿ ಏನಲ್ಲ. 
ಮುಖ್ಯ ವಾಹಿನಿಯ ಪತ್ರಿಕೆ/ ಚಾನೆಲುಗಳೇ ತಾವಾಗಿಯೇ ಮೇಲೆ ಬಿದ್ದು ಗಣ್ಯರೆಂಬ ವ್ಯಕ್ತಿಗಳ ಸಂದರ್ಶನ ಮಾಡಿ, ಎಲ್ಲೂ ಜಾಹೀರಾತು ಎಂದು ನಮೂದಿಸದೆ ಅವರ ಸಂಸ್ಥೆ ಸಾಧನೆಗಳ ಬಗ್ಗೆ ಪುಟಗಟ್ಟಲೆ ಲೇಖನ ಪ್ರಕಟಿಸಿ/ ಗಂಟೆಗಟ್ಟಲೆ ಎಪಿಸೋಡ್ ಮಾಡಿ, ಕೊನೆಗೆ ಹಾಡುಹಗಲೇ ಅವರ ಮುಂದೆ "ಇಷ್ಟು ಲಕ್ಷ ಆಯಿತು" ಎಂದು ರಸೀದಿ ಇಡುವ ಪರಿಪಾಠ ಆರಂಭಿಸಿರುವ ಮೇಲೆ ಇದೆಲ್ಲ ದೊಡ್ಡ ವಿಷಯ ಅಲ್ಲ.
ಆದರೆ ನಮ್ಮ ಬಳಿ ಇರುವ ಈ ಪತ್ರಿಕೆಯ ಒಂದು ಪ್ರತಿಯಲ್ಲಿ (ಆಕೆ‌‌ ಮೊದಲು‌‌ ಭೇಟಿ ಆದಾಗ ಕೊಟ್ಟದ್ದು) ಅನೇಕ ಪುಣ್ಯಾತ್ಮರ ಬಗ್ಗೆ ಲೇಖನಗಳಿವೆ. ಅವರಿಗೂ ಇಂತಹ ಬೇಡಿಕೆ ಹೋಗಿದೆಯೋ ಗೊತ್ತಿಲ್ಲ. ಈ ಪತ್ರಿಕೆಗೆ ಕನಿಷ್ಟ ಒಂದು ಕಿಲೋಮೀಟರ್ ಉದ್ದದ ಸಂಪಾದಕೀಯ ಮಂಡಲಿ ಇದೆ. ಅದರಲ್ಲಿ ಅನೇಕ ಗಣ್ಯರ ಹೆಸರುಗಳೂ ಇವೆ. ಅವರಿಗೆಲ್ಲ ಇದು ಗೊತ್ತಿದೆಯೋ ಗೊತ್ತಿಲ್ಲ.
ನಾಳೆ ಎಲ್ಲಾದರೂ ನಿಮ್ಮ ಕಣ್ಣಿಗೆ ಈ ಪತ್ರಿಕೆ ಬಿದ್ದು "ಓ! ಮೂರು ಸಾವಿರದ ಪಾರ್ಟಿ" ಎಂದು ನಮ್ಮಂಥ ಬಡಪಾಯಿಗಳನ್ನು ಅಭಿನಂದಿಸುವ ಚಾನ್ಸಿದೆ ಎಂದು ಹೆದರಿ ಸದರಿ ಇತಿವೃತ್ತವನ್ನು ಅರುಹಿದೆ ಅಷ್ಟೇ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99