ಹೆಚ್ಚುತ್ತಿರುವ ಹೃದಯಾಘಾತದ ಸಾವು: ಕಾರಣ ಏನು ಗೊತ್ತೇ..?; ಒಂದು ಅವಲೋಕನ
Sunday, September 13, 2020
ಬರಹ: ರಾಜಾರಾಂ ತಲ್ಲೂರು, ವಿಶ್ಲೇಷಕರು ಮತ್ತು ಹಿರಿಯ ಪತ್ರಕರ್ತರು
(ಗಲ್ಫ್ ಕನ್ನಡಿಗ)ನೀವು ಗಮನಿಸಿದ್ದೀರಾ ಗೊತ್ತಿಲ್ಲ, ಕಳೆದ ನಾಲ್ಕು ತಿಂಗಳುಗಳಿಂದೀಚೆಗೆ ಕರಾವಳಿಯ ಉದ್ದಗಲಕ್ಕೂ “ಹೃದಯಾಘಾತ”ದ ಸಾವುಗಳದೇ ಸುದ್ದಿ.
(ಗಲ್ಫ್ ಕನ್ನಡಿಗ)ಬೇರೇನೂ ಬೇಡ - ಕರಾವಳಿಯ ಸಾವಿನ ಸುದ್ದಿಗಳನ್ನು ಹೊತ್ತುತರುವ ಪ್ರಸಿದ್ಧ ಪತ್ರಿಕೆಯ ಶೃದ್ಧಾಂಜಲಿ ಜಾಹೀರಾತು ಪುಟ ಮತ್ತು ಸಾವಿನ ಸುದ್ದಿಗಳ ಪುಟ ತೆರೆದು ನೋಡಿ. ಪ್ರತೀದಿನ, ಈ ಹಿಂದಿಗಿಂತ 3-4ಪಾಲು ಹೆಚ್ಚು ಸಾವಿನ ಸುದ್ದಿಗಳು ಕಾಣಿಸಿಕೊಳ್ಳುತ್ತಿವೆ. ಪತ್ರಿಕೆಗಳಲ್ಲಿ ಕಾಣಿಸದ ಸಾವುಗಳ ಸಂಖ್ಯೆಯು ಕಾಣಿಸಿಕೊಂಡದ್ದರ ಮೂರು ಪಾಲಿದೆ. ಕರಾವಳಿಯ ಬಹುತೇಕ ಯಾವುದೇ ಕುಟುಂಬವನ್ನು ಮಾತನಾಡಿಸಿ, ಅವರ ಕುಟುಂಬ-ಸಂಬಂಧಿಗಳೊಳಗೆ ಕಳೆದ ನಾಲ್ಕು ತಿಂಗಳಿನಲ್ಲಿ ಕಡಿಮೆಯೆಂದರೆ ಒಂದಾದರೂ “ಹೃದಯಾಘಾತ” ಸಾವಿನ ಸುದ್ದಿ ಇದ್ದೇ ಇದೆ.
(ಗಲ್ಫ್ ಕನ್ನಡಿಗ)ನಾನು ಮೊದಮೊದಲು, ಇದು ಆರ್ಥಿಕ-ಸಾಮಾಜಿಕ-ಮಾನಸಿಕ ಒತ್ತಡಗಳು, ಲಾಕ್ ಡೌನ್ ಕಾರಣದಿಂದಾಗಿ ಚಟುವಟಿಕೆಗಳ ಕೊರತೆಯ ಕಾರಣದಿಂದಾಗಿ ಆಗಿರುವ ಸಾವುಗಳು ಎಂದು ಊಹಿಸಿದ್ದೆ.
(ಗಲ್ಫ್ ಕನ್ನಡಿಗ)ಜೊತೆಗೆ, ಹಲವು ಕೊರೊನಾ ಸಂಬಂಧಿ ಸಾವುಗಳನ್ನೂ ಜನ “ಸಾಮಾಜಿಕ ಸ್ಟಿಗ್ಮಾ” ಕ್ಕೆ ಬೆದರಿ, ಅಲ್ಪಕಾಲದ ಅನಾರೋಗ್ಯ/ಹೃದಯಾಘಾತ ಎಂದು ದಾಖಲಿಸಿಕೊಂಡಿರಬಹುದು. ಸರ್ಕಾರಿ ಲೆಕ್ಕಾಚಾರದ ಪ್ರಕಾರವೇ, ನಿನ್ನೆ ಸಂಜೆಯ ಹೊತ್ತಿಗೆ ಉಡುಪಿಯಲ್ಲಿ ಆಗಿರುವ ಕೊರೊನಾ ಸಾವಿನ ಸಂಖ್ಯೆ:127; ಇದರಲ್ಲಿ ಬರೇ ಒಂದು ತಿಂಗಳಿನಿಂದೀಚೆ 75ಕ್ಕೂ ಮಿಕ್ಕಿ ಸಾವುಗಳಾಗಿವೆ. ಸರ್ಕಾರದ ಲೆಕ್ಕಕ್ಕೆ ಸಿಗದ ಕೊರೊನಾ ಸಾವಿನ ಪ್ರಕರಣಗಳೂ ಇರಬಹುದು. ಇದಲ್ಲದೇ ಆತ್ಮಹತ್ಯೆ ಪ್ರಕರಣಗಳೂ ಇಲ್ಲಿ ಕಳೆದ ಆರು ತಿಂಗಳಿಂದೀಚೆಗೆ ದೊಡ್ಡ ಸಂಖ್ಯೆಯಲ್ಲಿ ಸಂಭವಿಸಿವೆ.
(ಗಲ್ಫ್ ಕನ್ನಡಿಗ)ಈ ಎಲ್ಲ ಸಾವುಗಳ ನಡುವೆ ನನಗೆ ಕುತೂಹಲಕರ ಅನ್ನಿಸುತ್ತಿರುವುದು ಅತಿಯೆನ್ನಿಸುವ “ಹೃದಯಾಘಾತ” ದ ಸಾವುಗಳು. ಅದೂ 30-50ರ ಎಳೆಯ ಪ್ರಾಯವರ್ಗದವರೇ ಹಠಾತ್ತಾಗಿ ಒಂದೇ ಏಟಿಗೆ ಸಾಯುತ್ತಿರುವುದು. ಅವರಲ್ಲಿ ಹೆಚ್ಚಿನವರಿಗೆ ಹೃದಯದ ತೊಂದರೆಗಳ ಹಿನ್ನೆಲೆ ಇದ್ದಂತಿಲ್ಲ.
ಇದು ಸಂಶೋಧನೆಗೆ ಅರ್ಹ ಅಲ್ಲವೆ?
(ಗಲ್ಫ್ ಕನ್ನಡಿಗ)ಇಷ್ಟೊಂದು ಪ್ರಮಾಣದಲ್ಲಿ ಹೃದಯಾಘಾತ ಪ್ರಕರಣಗಳು ಇಲ್ಲಿ ಉಡುಪಿ /ಮಂಗಳೂರು ಜಿಲ್ಲೆಗಳಲ್ಲಿ ಕಾಣಿಸಿಕೊಳ್ಳುತ್ತಿರುವಾಗ, ವೈದ್ಯಕೀಯ ಸವಲತ್ತುಗಳ ನಿಟ್ಟಿನಲ್ಲಿ ಮುಂದುವರಿದಿರುವ ಈ ಜಿಲ್ಲೆಗಳ ವೈದ್ಯಕೀಯ ಕಾಲೇಜುಗಳು ಇದರ ಹಿನ್ನೆಲೆ-ಮುನ್ನೆಲೆ ಪರಿಶೀಲನೆಗೆ, ಸಂಶೋಧನೆಗೆ ಮುಂದಾಗುವುದು ಅಗತ್ಯ ಇದೆ.
(ಗಲ್ಫ್ ಕನ್ನಡಿಗ)ಇಲ್ಲಿಯ ತನಕ ಕರಾವಳಿ ಜಿಲ್ಲೆಗಳ ಈ ಹೃದಯಾಘಾತ ಪ್ರಕರಣಗಳಲ್ಲಿ ಅಟಾಪ್ಸಿಯೂ ಆದಂತಿಲ್ಲ. ಯಾಕೆಂದರೆ, ಇಲ್ಲಿ ಶವಗಳ ಬಗ್ಗೆಯೇ ಭಯ ಇರುವ ಕುರಿತು ಪ್ರತಿದಿನವೆಂಬಂತೆ ವರದಿಗಳನ್ನು ಕೇಳಿದ್ದೇವೆ.
(ಗಲ್ಫ್ ಕನ್ನಡಿಗ)ಕೊರೊನಾ ಸ್ವತಃ ಹೊಸ, ವಿಚಿತ್ರ ಲಕ್ಷಣಗಳಿರುವ ರೋಗವಾಗಿರುವುದರಿಂದ ಮತ್ತು ಹೃದಯ-ರಕ್ತನಾಳಗಳಿಗೆ ಅದು ಪ್ರಭಾವ ಬೀರುವುದು ಈಗಾಗಲೇ ಸಾಬೀತಾಗಿರುವುದರಿಂದ, ಈ ಜಿಲ್ಲೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ದೊಡ್ಡ ಪ್ರಮಾಣದ ಹೃದಯಾಘಾತಗಳ ಹಿಂದೆ ಕೊರೊನಾ ಪಾತ್ರೆ ಇದೆಯೆ ಎಂದು ಕಂಡುಕೊಳ್ಳುವುದು ಮಹತ್ವದ ಸಂಗತಿ ಎಂದು ನನಗನ್ನಿಸುತ್ತದೆ.
(ಗಲ್ಫ್ ಕನ್ನಡಿಗ)ಹಲವು ದೇಶಗಳಲ್ಲಿ ಈ ಬಗ್ಗೆ ಸಂಶೋಧನೆಗಳು ಭರದಿಂದ ನಡೆಯುತ್ತಿವೆ. ನಮ್ಮಲ್ಲಿ ವೈದ್ಯಕೀಯ ವ್ಯವಸ್ಥೆ ಸೀಮಿತವಾಗಿದ್ದರೂ, ಈ ಬಗ್ಗೆ ಗಮನ ಹರಿಸಲು ಇದು ಸಕಾಲ. ರಾಜ್ಯ ಸರ್ಕಾರ, ಜಿಲ್ಲಾಡಳಿತಗಳು ಮತ್ತು ಜಿಲ್ಲೆಯ ವೈದ್ಯಕೀಯ ವ್ಯವಸ್ಥೆ ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಕೋರಿಕೆ.
(ಗಲ್ಫ್ ಕನ್ನಡಿಗ)