
ಹಂಪನಕಟ್ಟೆ ಹೆಸರು ಬರಲು ಕಾರಣವಾದ ಅಪ್ಪಣ್ಣನ ಬಾವಿ ಪತ್ತೆ! video
(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರು ನಗರ ಎಂದ ಕೂಡಲೇ ಪಕ್ಕನೆ ನೆನಪಿಗೆ ಬರುವುದು ಹಂಪನಕಟ್ಟೆ. ಹಂಪನಕಟ್ಟೆಗೆ ಹೆಸರು ಬಂದದ್ದು ಅಪ್ಪಣ್ಣ ಎಂಬ ವ್ಯಕ್ತಿಯಿಂದ.
ಶತಮಾನಕ್ಕೂ ಹಿಂದೆ ಇಲ್ಲಿ ಇದ್ದ ಅಪ್ಪಣ್ಣ ಎಂಬವರು ದೂರದೂರಿನಿಂದ ಬರುತ್ತಿದ್ದವರಿಗೆ ಇಲ್ಲಿಯೆ ಇದ್ದ ಅಶ್ವತ್ಥಕಟ್ಟೆಯಲ್ಲಿ ಕುಳಿತುಕೊಂಡು ನೀರು ಬೆಲ್ಲ ಕೊಡುತ್ತಿದ್ದರಂತೆ. ಅವರ ಹೆಸರನ್ನು ಸೂಚಿಸಿಕೊಂಡು ಅಪ್ಪಣ್ಣನ ಕಟ್ಟೆ ಎಂದು ಜನಜನಿತವಾಗಿ ಕೊನೆಗೆ ಅದು ಹಂಪನಕಟ್ಟೆಯಾಗಿದೆ. ಇದೇ ಹಂಪನಕಟ್ಟೆಯಲ್ಲೀಗ ಬಾವಿಯೊಂದು ಪತ್ತೆಯಾಗಿದೆ. ಈ ಬಾವಿ ಅಪ್ಪಣ್ಣನ ಬಾವಿ ಎಂದು ಪ್ರಸಿದ್ದವಾಗಿತ್ತೆಂದು ಹೇಳಲಾಗುತ್ತಿದೆ.
(ಗಲ್ಪ್ ಕನ್ನಡಿಗ)ಹಂಪನಕಟ್ಟೆಯ ಸಿಗ್ನಲ್ ನ ರಿಕ್ಷಾ ಪಾರ್ಕ್ ಬಳಿ ಪತ್ತೆಯಾದ ಈ ಬಾವಿ ಈಗಲೂ ಸುಸ್ಥಿತಿಯಲ್ಲಿದೆ. ಸುತ್ತಲೂ ಕೆಂಪುಕಲ್ಲುಗಳಿಂದ ಕಟ್ಟಿರುವ ಈ ಬಾವಿಯನ್ನು ಅಭಿವೃದ್ದಿಯ ಹೆಸರಿನಲ್ಲಿ ಸ್ಲ್ಯಾಬ್ ಹಾಕಿ ಮುಚ್ಚಲಾಗಿತ್ತು. ಈಗಿನ ತಲೆಮಾರಿಗೆ ಇಲ್ಲೊಂದು ಬಾವಿ ಇತ್ತೆಂಬುದೆ ಗೊತ್ತಿರಲಿಲ್ಲ. ಇದೀಗ ಸ್ಮಾರ್ಟ್ ಸಿಟಿ ಯೋಜನೆಯಡಿ ನೆಯುತ್ತಿರುವ ಕಾಮಗಾರಿ ವೇಳೆ ಕಾಂಕ್ರೀಟ್ ಸ್ಲ್ಯಾಬ್ ಕಂಡುಬಂದಿದ್ದು ಈ ಸ್ಲ್ಯಾಬ್ ಮೇಲೆತ್ತಿ ನೋಡಿದಾಗ ಆಳದ ಬಾವಿ ಇರುವುದು ಪತ್ತೆಯಾಗಿದೆ. ಈ ಬಾವಿ ಇದೀಗ ಎಲ್ಲರ ಕುತೂಹಲದ ಕೇಂದ್ರವಾಗಿದೆ.