EXCLUSIVE:ಲಾಕ್ ಡೌನ್ ಬಳಿಕ ಕೋರ್ಟ್ ಕಲಾಪ ಹಂತ ಹಂತವಾಗಿ ಆರಂಭ: ಹೈಕೋರ್ಟ್ ಮಾರ್ಗಸೂಚಿ ಸಮಗ್ರ ವಿವರ ಇಲ್ಲಿದೆ
ಮಾನ್ಯ ಕರ್ನಾಟಕ ಹೈಕೋರ್ಟ್ ದಿನಾಂಕ 18.9.2020 ರಂದು ಹೊರಡಿಸಿರುವ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ದಿನಾಂಕ 28.9.2020 ರಿಂದ ಅನ್ವಯವಾಗುವ ಪರಿಷ್ಕೃತ ಕಾರ್ಯವಿಧಾನ ಮಾನದಂಡಗಳ (SOP) ಮುಖ್ಯಾಂಶಗಳು
1) ರಾಜ್ಯದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಗಣನೀಯವಾಗಿ ಹಂತ ಹಂತವಾಗಿ ಪುನರಾರಂಭಗೊಳ್ಳಲಿವೆ
2) ರಾಜ್ಯದ ಎಲ್ಲಾ ನ್ಯಾಯಾಲಯಗಳ ನ್ಯಾಯಾಂಗಣದಲ್ಲಿನ ಸಾಕ್ಷಿ ವಿಚಾರಣಾ ಕಟಕಟೆ ಮತ್ತು ಆರೋಪಿಗಳು ನಿಲ್ಲುವ ಕಟಕಟೆಗಳನ್ನು ಸಾಕ್ಷಿಗಳ ವಿಚಾರಣೆ ನಡೆಸುವ ಪ್ರಯುಕ್ತ ಪುನರ್ ವಿನ್ಯಾಸಗೊಳಿಸಲಾಗುವುದು.
3) ನ್ಯಾಯಾಲಯಗಳ ಪ್ರತಿ ಕೆಲಸದ ದಿನಗಳ ಬೆಳಗಿನ ಅಧಿವೇಶನದಲ್ಲಿ ಭೌತಿಕವಾಗಿ ಐದು ಮಂದಿ ಸಾಕ್ಷಿದಾರರ ವಿಚಾರಣೆ ನಡೆಸಬಹುದಾಗಿದೆ.
4) ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಪಟ್ಟ ಪಕ್ಷಗಾರರಿಗೆ ನ್ಯಾಯಾಲಯದ ಸಂಕೀರ್ಣದೊಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದರೆ ಸಾಕ್ಷಿದಾರರು ಮತ್ತು ಜಾಮೀನು ಪಡೆದಿರುವ ಆರೋಪಿಗಳು ರಾಪಿಡ್ ಆ್ಯಂಟಿಜನ್ ಟೆಸ್ಟ್ ನ ನೆಗೆಟಿವ್ ವರದಿಯನ್ನು ಹಾಜರುಪಡಿಸಿ ತಮ್ಮ ಪ್ರಕರಣಗಳ ದಿನದಂದು ನ್ಯಾಯಾಲಯಕ್ಕೆ ಹಾಜರಾಗಲು ಅವಕಾಶ ನೀಡಲಾಗಿದೆ.
5) ನ್ಯಾಯಾಲಯ ಸಂಕೀರ್ಣದ ನಾಮಾಂಕಿತ ಸ್ಥಳಗಳಲ್ಲಿ ವಕೀಲರುಗಳ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಸ್ವತಃ ವಾಹನ ಚಾಲನೆ ಮಾಡುವ ವಕೀಲರಿಗೆ ಮಾತ್ರ ಅವಕಾಶವಿದೆ. ಮಾನ್ಯತೆ ಪಡೆದ ವಕೀಲರ ಸಂಘದವರು ಕಳುಹಿಸಿದ ಅರ್ಜಿಗಳನ್ನು ಪರಿಶೀಲಿಸಿ ನ್ಯಾಯಾಲಯದ ಆಡಳಿತವು ನೀಡಿದ ವಾಹನ ಪಾಸ್ ಅನ್ನು ವಕೀಲರು ಹಾಜರು ಪಡಿಸತಕ್ಕದ್ದು.
6) ವಕೀಲರ ಸಂಘದ ಸಮುಚ್ಚಯವು ನ್ಯಾಯಾಲಯದ ಎಲ್ಲಾ ಕೆಲಸದ ದಿನಗಳಲ್ಲಿ ಪೂರ್ವಾಹ್ನ 10.30 ರಿಂದ ಸಂಜೆ 4.00 ಗ೦ಟೆಯ ವರೆಗೆ ತೆರೆಯಲ್ಪಡಲಿದೆ. ಆದರೆ ಸಮುಚ್ಚಯವನ್ನು ತೆರೆಯುವ ಮೊದಲು ಸಮುಚ್ಚಯ ದೊಳಗೆ ಇರುವ ಶೇ ಐವತ್ತರಷ್ಟು ಆಸನಗಳನ್ನು ತೆರವುಗೊಳಿಸತಕ್ಕದ್ದು. ಇದರಿಂದ ವಕೀಲರ ಸಂಘದ ಸಮುಚ್ಚಯಗಳಿಗೆ ಕಿಕ್ಕಿರಿದ ಜನಸಂದಣಿ ಮತ್ತು ಹೆಚ್ಚಿನ ವಕೀಲರ ಒಟ್ಟುಗೂಡುವಿಕೆ ಯನ್ನು ನಿಯಂತ್ರಿಸಬಹುದಾಗಿದೆ. ಸದ್ಯಕ್ಕೆ ಜೆರಾಕ್ಸ್ ಆಪರೇಟರ್ಸ್; ನೋಟರಿ ಪಬ್ಲಿಕ್ ಮತ್ತು ಬೆರಳಚ್ಚುಗಾರರಿಗೆ ಅನುಮತಿ ನಿರಾಕರಿಸಲಾಗಿದೆ. ಹಾಗೆಯೇ ಸಮುಚ್ಚಯದೊಳಗೆ ಉಪಹಾರ ಗೃಹ (ಕ್ಯಾಂಟೀನ್) ತೆರೆಯಲು ಅನುಮತಿ ಇರುವುದಿಲ್ಲ.
7) ರಾಜ್ಯದ ನ್ಯಾಯಾಲಯಗಳು ಹಂತಹಂತವಾಗಿ ಈ ಕೆಳಗೆ ಕಾಣಿಸಿದ ರೀತಿಯಲ್ಲಿ ಪುನರಾರಂಭಗೊಳ್ಳಲಿವೆ
ಎ) ಕಾರ್ಯವಿಧಾನಗಳ ಮಾನದಂಡಗಳಲ್ಲಿ ನಮೂದಿಸಿದ ತಾಲ್ಲೂಕು ನ್ಯಾಯಾಲಯಗಳು ಮೇಲ್ಕಾಣಿಸಿದ ನಿಬಂಧನೆಗಳನ್ನು ಪಾಲಿಸಿ ದಿನಾಂಕ 28.9.2020 ರಿಂದ ಪುನರಾರಂಭಗೊಳ್ಳಲಿವೆ.
ಬಿ) ರಾಜ್ಯದ ಹದಿಮೂರು ಜಿಲ್ಲೆಗಳಲ್ಲಿನ ನ್ಯಾಯಾಲಯಗಳು ದಿನಾಂಕ 5.10.2020 ರಿಂದ ಪುನರಾರಂಭಗೊಳ್ಳಲಿವೆ. ಸದರಿ 13 ಜಿಲ್ಲೆಗಳ ಹೆಸರುಗಳನ್ನು ಈ ಕೆಳಗೆ ನಮೂದಿಸಲಾಗಿದೆ.
ದಾವಣಗೆರೆ; ಹಾವೇರಿ; ಚಿತ್ರದುರ್ಗ; ಚಿಕ್ಕಬಳ್ಳಾಪುರ; ರಾಯಚೂರು; ಬೀದರ್; ರಾಮನಗರ; ಉಡುಪಿ; ಗದಗ; ಕೊಡಗು- ಮಡಿಕೇರಿ; ಕೊಪ್ಪಳ; ಚಾಮರಾಜನಗರ ಮತ್ತು ಯಾದಗಿರಿ.
ಸಿ) ರಾಜ್ಯದ ಉಳಿದ ಜಿಲ್ಲೆಗಳಲ್ಲಿನ ನ್ಯಾಯಾಲಯಗಳು ದಿನಾಂಕ 12.10.2020 ರಿಂದ ಪುನರಾರಂಭಗೊಳ್ಳಲಿವೆ.