-->

ಕರಾವಳಿಯ ಕ್ರೈಂ ಡೈರಿ: ದಶಕದ ಹಿಂದೆಯೇ ಗಾಂಜಾ ನಶೆಯಲ್ಲಿಯ ಅಪರಾಧಗಳು

ಕರಾವಳಿಯ ಕ್ರೈಂ ಡೈರಿ: ದಶಕದ ಹಿಂದೆಯೇ ಗಾಂಜಾ ನಶೆಯಲ್ಲಿಯ ಅಪರಾಧಗಳು


ಬರಹ: ರವೀಶ್ ಸಿ.ಆರ್., ಹಿರಿಯ ಪೊಲೀಸ್ ಅಧಿಕಾರಿ

ಬಂಟ್ವಾಳ ಉಪ ವಿಭಾಗದಲ್ಲಿ ನಾನು ಡಿವೈಎಸ್ಪಿ ಆಗಿದ್ದ ಸಮಯವದು, ನಮ್ಮ ಬಂಟ್ವಾಳ ನಗರ ಠಾಣೆಯ ಪಿಎಸ್ಐ ಆಗಿದ್ದ ಒಂದು ದಿನ ಸಂಜೆ ಒಂದು ಫೊನ್ ಕಾಲ್ ಮಾಡಿ,

ಸಾರ್ ನಮಸ್ತೆ ಸಾರ್, ನಾನು ನಂದಕುಮಾರ್ ಸಾರ್ ಎಂದರು.

ನಮಸ್ಕಾರ, ಹೇಳಿ ನಂದ ಕುಮಾರ್ ಎಂದು ಪ್ರತ್ಯತ್ತರ ಕೊಟ್ಟಿದ್ದೆ,

ಸಾರ್ ಏನೂ ವಿಶೇಷ ಅಂತ ಏನಿಲ್ಲ ಸಾರ್ ಎಂದೇ ಮಾತನ್ನು ಪ್ರಾರಂಭಿಸಿದ್ದರು ಪಿಎಸ್ಐ ನಂದ ಕುಮಾರ್, ನಮ್ಮ ಇಲಾಖೆಯಲ್ಲಿ ನಮ್ಮ ಕಿರಿಯ ಅಧಿಕಾರಿಗಳು ಮಾತನಾಡುವಾಗ ಸಾರ್ ಏನೂ ಅಂತ ವಿಶೇಷವಿಲ್ಲ ಸಾರ್ ಎಂದರೆ ನೂರಕ್ಕೆ ನೂರು ಏನಾದರೂ ದೊಡ್ಡ ಮಟ್ಟಿನ ಅಪರಾಧ ಘಟಿಸಿಯೇ ಇರುತ್ತದೆ, ಇದು ಸರ್ವಕಾಲಕ್ಕೂ ಅನ್ವಯಿಸುವ ಸತ್ಯವೂ ಹೌದು. ಹೀಗೆ ಏನೂ ವಿಶೇಷವಿಲ್ಲ ಸಾರ್ ಎಂದು ಮಾತನ್ನು ಆರಂಭಿಸಿದ ನಂದಕುಮಾರ್ ಅವರು *ಸಾರ್ ಏನಿಲ್ಲ ಸಾರ್, ಇವತ್ತು ಸಂಜೆ ಕಲ್ಲಡ್ಕದ ಬಳಿಯ ನರಹರಿ ಪರ್ವತದ ಬಳಿ ಯಾರೋ ಮೂರು ಜನ ಹೆಣ್ಣು ಮಕ್ಕಳು ದೇವಾಲಯಕ್ಕೆ ಹೋಗಿ ಬರುವಾಗ, ಒಬ್ಬ ಅನ್ಯಮತೀಯ ವ್ಯಕ್ತಿಯೊಬ್ಬ ಅವರನ್ನು ಓಡಿಸಿಕೊಂಡು ಹೋಗಿ ಅವರಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿದ ಬಗ್ಗೆ ಅಲ್ಲಿಂದ ಫೋನ್ ಕಾಲ್ ಬಂದಿತ್ತು ಸಾರ್, ನಾನು ಹಾಗೂ ಸಿಬ್ಬಂಧಿಯವರು ಕೂಡಲೇ ಅಲ್ಲಿಗೆ ಹೋಗಿ ಆತನನ್ನು ಹಿಡಿದುಕೊಂಡು ಬಂದೆವು ಸಾರ್*, ಆತನು ಅನ್ಯಮತೀಯ ಯುವಕ ಸಾರ್, ನೋಡಿದರೆ ಗಾಂಜಾ ಸೇದಿ, ನಶೆ ಏರಿರುವಂತೆ ಕಾಣುತ್ತದೆ ಸಾರ್, ಸದ್ಯಕ್ಕೆ ಏನೂ ಸಮಸ್ಯೆ ಇಲ್ಲ ಸಾರ್ ಎಂದು ಪೋನಿನ ಮುಖಾಂತರ ನನಗೆ ವರದಿ ಒಪ್ಪಿಸಿದ್ದರು.

ಹೌದಾ ! ಛೇ, ಎಂತಹ ಮನಸ್ಥಿತಿಯ ಯುವಕರು ಇವರೆಲ್ಲಾ ! ಏನು ಗಾಂಜಾ ಸೇದಿದ್ದಾನೆಯೇ ? ಆಯ್ತು ಅವನ್ನ ಕರೆದುಕೊಂಡು ಬಂದು ಪ್ರಕರಣ ದಾಖಲಿಸಿಬಿಡಿ, ಹಾಗೆಯೇ ಆ ಕಲ್ಲಡ್ಕ ಹಾಗೂ ನರಹರಿ ಪರ್ವತದ ಕಡೆಯಲ್ಲಿ ಸರಿಯಾಗಿ‌ ರೌಂಡ್ಸ್ ಮಾಡಿ, ಈ ಘಟನೆಯಿಂದ ಬೇರೆ ಘಟನೆಗಳು ಜರುಗಬಾರದು, ಹಾಗೆಯೇ ನಾನೂ ಸಹ ಆ ಕಡೆ ರೌಂಡ್ಸ್ ಹೋಗ್ತೇನೆ, ಆ ಬಂಧಿತ ಯುವಕನಿಗೆ ಮೆಡಿಕಲ್ ಮಾಡಿಸಿಬಿಡಿ, ಅವನು ಗಾಂಜಾ ಸೇದಿದ್ದರೆ ಆ ಸೇವನೆಗೂ ಸೇರಿ ಕೇಸು ಹಾಕಿಬಿಡಿ ಎಂಬ ಕೆಲವು ಸಲಹೆ ಸೂಚನೆ ನೀಡಿ ನಾನೂ ಸಹ ಆ ಪರಿಸರದ ಕಡೆಗೆ ರೌಂಡ್ಸ್ ಹೊರಟು ಬಿಟ್ಟೆ. ಹೇಳಿದ ಹಾಗೆಯೇ ಬಂಟ್ವಾಳದ ಪಿಎಸ್ಐ ನಂದಕುಮಾರ್ ಅವರು ಪ್ರಕರಣ ದಾಖಲಿಸಿ ಆ ಯುವಕನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು, ಆತನಿಗೆ ನ್ಯಾಯಾಂಗ ಬಂಧನವೂ ಆಗಿತ್ತು.

ಒಮ್ಮೆ ಬಂಟ್ವಾಳದಲ್ಲಿ ನವರಾತ್ರಿಯ ಶಾರದಾ ಮಹೋತ್ಸವ ನಡೆಯುತ್ತಿತ್ತು. ಎಲ್ಲವೂ ಶಾಂತವಾಗಿಯೇ ಬಂಟ್ವಾಳದ ಮುಖ್ಯ ಪೇಟೆ, ರಸ್ತೆಗಳಲ್ಲಿ ಶಾರಾದ ಉತ್ಸವವು ಜರುಗುತ್ತಿತ್ತು. ಈ ಉತ್ಸವದ ನೇತೃತ್ವವನ್ನು ಆಗಿನ ಸಿಪಿಐ ಬಿಕೆ ಮಂಜಯ್ಯ ವಹಿಸಿದ್ದರು. ಎಲ್ಲವೂ ಶಾಂತರೀತಿಯಿಂದ ಮುಗಿಯಿತು ಎನ್ನುವಾಗ ಒಬ್ಬ ವ್ಯಕ್ತಿಯು ಒಂದು ಹರಿತವಾದ ಆಯುಧ ಹಿಡಿದುಕೊಂಡು ಜನರಲ್ಲಿ ಹೆದರಿಕೆ ಹುಟ್ಟಿಸುವ ರೀತಿ ಹಾವಭಾವ ಪ್ರದರ್ಶಿಸಿ ಒಂದಿಬ್ಬರಿಗೆ ಹೊಡೆದೂ ಬಿಟ್ಟ, ಆತನನ್ನು ಆಯುಧದೊಂದಿಗೆ ದಸ್ತಗಿರಿ ಮಾಡಿ ಠಾಣೆಗೆ ತಂದು ಕೇಸು ರಿಜಿಸ್ಟರ್ ಮಾಡಿಸಿ ಆತನನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಈ ಪ್ರಕರಣದಲ್ಲಿಯೂ ಆತನು ಗಾಂಜಾ ಸೇವಿಸಿಯೇ ಈ ರಂಪಾಟ ಮಾಡಿದ್ದು ಬಟ್ಟಾ ಬಯಲಾಗಿ ಹೋಗಿತ್ತು‌‌. ಈ ರಂಪಾಟ ಮಾಡಿದ ವ್ಯಕ್ತಿಯನ್ನು ಠಾಣೆಗೆ ತಂದಾಗ ಆತನು ನಶೆಯಲ್ಲಿ ತೇಲಾಡುತ್ತಾ ತಾನು ಮಾಡಿದ್ದನ್ನೇ ಸಮರ್ಥನೆ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯು ಮಾರನೇ ದಿನ ತಾನಗೇನೂ ಆಗಿಯೇ ಇಲ್ಲ, ತಾನೂ ಆ ರೀತಿ ನಡವಳಿಕೆ ನಡೆದುಕೊಂಡ ಬಗ್ಗೆ ಆತನೇ ನಾಚಿಕೆ ಪಟ್ಟುಕೊಳ್ಳುತ್ತಿದ್ದ‌. ಅವನು ನಾಚಿಕೆ ಪಟ್ಟುಕೊಳ್ಳುತ್ತಿದ್ದ ಹೊತ್ತಿಗೆ ನಶೆಯ ಲೋಕದಿಂದ ವಾಸ್ತವ ಲೋಕಕ್ಕೆ ಬಂದಿದ್ದ‌. ಆದರೆ ಆತನಿಗೆ ಕಾಲವು ಮಿಂಚಿ ಹೋಗಿತ್ತು.

ನಾವು ನಮ್ಮ ಉಪ ವಿಭಾಗದ ಅಧಿಕಾರಿಗಳ‌ ಮೀಟಿಂಗ್ ಕರೆದು ಈ ಎರಡು ಘಟನೆಗಳನ್ನೂ ಉದಾಹರಿಸಿ ಮಾತನಾಡಿದ್ದೆ. ಹೇಳಿ ಕೇಳಿ ಬಂಟ್ವಾಳ ಉಪ ವಿಭಾಗ ಎನ್ನುವುದೊಂದು ಮೊದಲೇ ಕೋಮು ಸಂಘರ್ಷಕ್ಕೆ ಹೆಸರುವಾಸಿ. ಒಂದು ಸಣ್ಣ ಘಟನೆ ಜರುಗಿದರೂ ಅಲ್ಲಿ ಕೋಮು ಸಂಘರ್ಷವೇರ್ಪಟ್ಟು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಇಂಥಹ ಸೂಕ್ಷ್ಮ ಪ್ರದೇಶದಲ್ಲಿ ಈ ಗಾಂಜಾ ನಶೆಯನ್ನು ತಹಬಂದಿಗೆ ತರಲೇಬೇಕೆಂದು ಅಧಿಕಾರಿಗಳಿಗೆ ಒತ್ತುಬಕೊಟ್ಟು ಕೆಲಸ ಮಾಡಬೇಕೆಂದೂ, ಈ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕೆಂದೂ ಅವರುಗೆ ನಾನು ಸೂಚನೆ ಕೊಟ್ಟಿದ್ದೆ‌ . ನಂತರ ನಮ್ಮ ಉಪ ವಿಭಾಗದಲ್ಲಿ ಗಾಂಜಾ ಮಾರಾಟ ಮಾಡುವವರೂ, ಉಪಯೋಗಿಸುವವರ ಮೇಲೆ ನಮ್ಮ ಪೊಲೀಸರು ಮರುಕೊಂಡು ಬಿದ್ದು ಹಲವಾರು ಪ್ರಕರಣ ದಾಖಲಿಸಿ ಪ್ರಗತಿ ತೋರಿಸಿದ್ದರು.

ಈ ನಡುವೆ ನಮ್ಮ ಬಂಟ್ವಾಳ ಪಿಎಸ್ಐ ನಂದ ಕುಮಾರ್ ಅವರಂತೂ ಈ ಗಾಂಜಾ ಪೂರೈಕೆಯ ಮೂಲಕ್ಕೆ ಕೈ ಹಾಕುವಂಥಹ ಕೆಲಸ ಮಾಡಿದ್ದರು, ತಮ್ಮದೇ ಆದಂತಹ ಒಂದು ನೆಟ್ವರ್ಕ್ ಬಳಸಿ ಗಾಂಜಾ ಪೂರೈಕೆಯನ್ನು ತಹಬಂದಿಗೆ ತರಲು ಪ್ರಯತ್ನಿಸಿ ಒಂದು ಮಟ್ಟಿಗೆ ಸಫಲರೂ ಆದರು. ಆಚೆ ಕೇರಳ ಗಡಿಯಿಂದ, ಈಚೆ ಆಂಧ್ರ ಪ್ರದೇಶದಿಂದ, ಮುಂದುವರೆದು ಮಹಾರಾಷ್ಠ್ರದಿಂದ ಪೂರೈಕೆ ಆಗುತ್ತಿದ್ದ ಗಾಂಜಾದ ಬುಡಕ್ಕೇ ಕೈ ಹಾಕಿಬಿಟ್ಟರು. ಮಹಾರಾಷ್ಠ್ರದ ಭೀಡ್ ನಿಂದ IKON FORD ಕಾರ್ ತುಂಬಾ ಗಾಂಜಾ ಪೊಟ್ಟಣಗಳನ್ನು 2 Kg ಪ್ಯಾಕೆಟ್ ಮಾಡಿಕೊಂಡು ಅದನ್ನು ಮಹಾರಾಷ್ಠ್ರ ದಿಂದಿಡಿದು ಕೇರಳದವರೆಗೂ ಪೂರೈಕೆ ಮಾಡುತ್ತಿದ್ದ 2 ಜನ‌ಖದೀಮರನ್ನು ದಸ್ತಗರಿ ಮಾಡಿ ಅವರಿಂದ 100 Kg ಗಾಂಜಾ, ಕಾರೆಲ್ಲವನ್ನೂ ವಶಪಡಿಸಿಕೊಂಡರು. ಇದೊಂದು ಬಹಳವೇ ಉತ್ತಮ ಕೆಲಸವಾಗಿತ್ತು. ಈಗಲೂ ಈ ಪ್ರಕರಣದ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿಯೇ ಇದ್ದಾರೆ.

ಮತ್ತೊಂದು ಪ್ರಕರಣದಲ್ಲಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ DCIB ನಿರೀಕ್ಷಕನಾದ *ಅಮಾನುಲ್ಲ ಹಾಗೂ ಅವನ ತಂಡದವರು*, ನಿಜಕ್ಕೂ ಅವರು ಸಹ ಗಾಂಜಾ ಬಗ್ಗೆ ಮಾಹಿತಿ ತಗೆದು ವಿಟ್ಲ, ಧರ್ಮಸ್ಥಳ ಠಾಣೆಗಳಲ್ಲೂ ಪ್ರಕರಣ ದಾಖಲಾಗುವಂತೆ ಮಾಡಿದರು, ಒಮ್ನೆ ನಾನೂ ಹಾಗೂ ಅಮಾನುಲ್ಲ ಅವರು ಸೇರಿ ಧರ್ಮ ಸ್ಥಳದಲ್ಲಿ 30 ಕೆಜಿ ಗಾಂಜಾವನ್ನು ತಮಿಳು ನಾಡಿನ 3 ವ್ಯಕ್ತಿಗಳಿಂದ ಅಮಾನತ್ತು ಮಾಡಿದ್ದೆವು. ಈ ಮೇಲ್ಕಂಡ ಎಲ್ಲಾ ಪ್ರಕರಣಗಳಲ್ಲಿಯೂ ಸಹ ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿದೆ ಎಂಬುದೇ ನಮ್ಮ ಹೆಚ್ಚುಗಾರಿಕೆ. ಇದಕ್ಕೆಲ್ಲ ನಮ್ಮ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವೂ ಸಹ ಇತ್ತು.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಷ್ಠೆಲ್ಲ ಉದಾಹರಣೆ ಸಹಿತವಾಗಿ ನಾನು ಏಕಾಗಿ ಹೇಳಿದೆನೆಂದರೆ ಒಬ್ಬ *ನಂದ ಕುಮಾರ್, ಒಬ್ಬ ಅಮಾನುಲ್ಲ ನಂಥಹ ಅಧಿಕಾರಿಗಳು ಇದ್ದಲ್ಲಿ‌ ಆ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಸಮಾಜ ಕಂಟಕ ಅಪರಾಧಗಳು ಜರುಗುವುದಿಲ್ಲ ಎಂಬ ನಂಬಿಕೆ ನನ್ನದು.* ಯಾವುದೋ ಸ್ನೇಹಿತರ ಒತ್ತಾಸೆಗೋ ಅಥವಾ ಕುತೂಹಲಕ್ಕೋ ನಶೆಯ ದಾಸರಾದವರಿಗೆ ತಿಳಿಹೇಳಿ ಅವರನ್ನು ಸರಿಯಾದ ಮಾರ್ಗಕ್ಕೆ ಕರೆತರುವ ಒಬ್ಬ ಗುರುವು ಅವರಿಬ್ಬರಲ್ಲಿಯೂ ಇದ್ದುದು ನನಗೆ ಕಂಡು ಬಂದಿತ್ತು‌. ಹಾಗೆಯೇ ಸಮಾಜದ ಕಳ್ಳಕಾಕರ ಮೂಲ ಬುಡಕ್ಕೇ ಕೈ ಹಾಕುವ ಚಾಕಚಕ್ಯತೆಯೂ ಅವರಲ್ಲಿತ್ತು. ಒಬ್ಬ ಅಧಿಕಾರಿಯು ಮನಸ್ಸು ಮಾಡಿದರೆ ಏನೆಲ್ಲಾ ಉತ್ತಮ ಕೆಲಸವನ್ನು ಮಾಡಬಹುದು ಎಂದು ಸಾಧಿಸಿ ತೋರಿಸಿದ ಅಧಿಕಾರಿಗಳು. ಹಾಗಾಗಿ ಒಬ್ಬ ಅಧಿಕಾರಿಯ ಇಚ್ಚಾ ಶಕ್ತಿಯು ಇದ್ದಲ್ಲಿ ಸಮಾಜ ಘಾತುಕರನ್ನು ಮಟ್ಟ ಹಾಕಬಹುದು ಎಂದು ಸಾಧಿಸಿ ತೋರಿಸಿದ್ದ ಅಧಿಕಾರಿಗಳು ಇವರು. ಒಟ್ಟಿನಲ್ಲಿ ನಶಾ ಮುಕ್ತವಾದ ಸಮಾಜ ನಿರ್ಮಾಣವಾಗಲೆಂಬ ಹೆಬ್ಬಯಕೆ ನಮ್ಮದು....

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99