
ಕೋರ್ಟ್ ಕಲಾಪ ಸೀಮಿತ ಕಾರ್ಯನಿರ್ವಹಣೆ ಮುಂದುವರಿಕೆ: ಹೈಕೋರ್ಟ್ ನೂತನ ಸೂಚನಾಪತ್ರ
ರಾಜ್ಯದ ನ್ಯಾಯಾಲಯಗಳ ಸೀಮಿತ ಕಾರ್ಯನಿರ್ವಹಣೆಯನ್ನು 29.11.2020 ರ ವರೆಗೆ ವಿಸ್ತರಿಸಿ ಮಾನ್ಯ ಕರ್ನಾಟಕ ಹೈಕೋರ್ಟ್ ದಿನಾಂಕ 29.9.2020 ರಂದು ಹೊರಡಿಸಿದ ಸೂಚನಾ ಪತ್ರದ ವಿವರಗಳು
ಮಾನ್ಯ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಮಹಾ ವಿಲೇಖನಾಧಿಕಾರಿಗಳು ದಿನಾಂಕ 29.9.2020 ರಂದು ಹೊರಡಿಸಿದ ಸೂಚನಾ ಪತ್ರದ ವಿವರಗಳು ಈ ಕೆಳಗಿನಂತಿವೆ.
ಯಾವುದೇ ದಾವೆ; ಮೇಲ್ಮನವಿ; ಅರ್ಜಿಗಳಿಗೆ ಸಂಬಂಧ ಪಟ್ಟಂತೆ ಕಾಲಮಿತಿ ಕಾಯ್ದೆಯಡಿ ನಿಗದಿಪಡಿಸಲಾದ ಅವಧಿಯು ನ್ಯಾಯಾಲಯದ ಮುಚ್ಚುಗಡೆ ಅವಧಿಯಲ್ಲಿ ಮುಕ್ತಾಯಗೊಂಡ ಸಂದರ್ಭದಲ್ಲಿ ನ್ಯಾಯಾಲಯವು ಪುನರ್ ಪ್ರಾರಂಭವಾದ ದಿನದಂದು ಸದರಿ ದಾವೆ; ಮೇಲ್ಮನವಿ ಅಥವಾ ಅರ್ಜಿಗಳನ್ನು ದಾಖಲು ಮಾಡತಕ್ಕ ದೆಂದು ಕಾಲಮಿತಿ ಅಧಿನಿಯಮ 1963 ರ ಸೆಕ್ಷನ್ 4 ರಡಿ ವಿಧಿಸಲಾಗಿದೆ.
ಕೋವಿಡ್ 19 ಮಹಾಮಾರಿಯು ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ದಿನಾಂಕ 26.3.2020 ರಿಂದ ರಾಜ್ಯದ ಹೈಕೋರ್ಟ್ ಒಳಗೊಂಡಂತೆ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಸೀಮಿತವಾಗಿ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ.
ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಪಟ್ಟ ಪಕ್ಷಗಾರರು ನ್ಯಾಯಾಲಯದ ಮುಚ್ಚುಗಡೆಯಿ೦ದ ಬಾಧಿತ ರಾಗಬಾರದು ಎಂಬ ಕಾರಣದಿಂದಾಗಿ ಕಾಲಮಿತಿ ಅಧಿನಿಯಮ 1963 - ಈ ಕಾಯ್ದೆಯ ಸೆಕ್ಷನ್ 4 ಅನ್ನು ಕಾಲ ಕಾಲಕ್ಕೆ ವಿಸ್ತರಿಸಲಾಗಿದ್ದು ರಾಜ್ಯಾದ್ಯಂತ ಎಲ್ಲಾ ನ್ಯಾಯಾಲಯಗಳು ಭಾಗಶಃ ಕಾರ್ಯನಿರ್ವಹಿಸುತ್ತಿವೆ.
ಕೋವಿಡ್ -19 ಸಾಂಕ್ರಾಮಿಕ ದಿಂದ ಉದ್ಭವಿಸಿದ ಆರೋಗ್ಯಕ್ಕೆ ಸಂಬಂಧಿಸಿದ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬಾರದೆ ಇರುವುದರಿಂದ ಮಾನ್ಯ ಹೈಕೋರ್ಟಿನ ಬೆಂಗಳೂರಿನ ಪ್ರಧಾನ ಪೀಠ; ಕಲಬುರ್ಗಿ ಮತ್ತು ಧಾರವಾಡದ ಪೀಠಗಳು ಒಳಗೊಂಡಂತೆ ಎಲ್ಲಾ ಜಿಲ್ಲಾ ನ್ಯಾಯಾಲಯಗಳು ಹಾಗೂ ಇತರ ವಿಚಾರಣಾ ನ್ಯಾಯಾಲಯಗಳು; ಕಾರ್ಮಿಕ ನ್ಯಾಯಾಲಯಗಳು; ಕೈಗಾರಿಕಾ ನ್ಯಾಯಮಂಡಳಿಗಳನ್ನು ದಿನಾಂಕ 29.11.2020 ರ ವರೆಗೆ ಕಾಲಮಿತಿ ಅಧಿನಿಯಮ 1963 ರ ನಿಯಮ 4 ರ ಉದ್ದೇಶಕ್ಕಾಗಿ ಮುಚ್ಚಲಾಗಿದೆ ಎಂದು ಪರಿಗಣಿಸತಕ್ಕದಾಗಿದೆ.
ದಿನಾಂಕ 29.11.2020 ರ ವರೆಗಿನ ವಿಸ್ತರಣಾ ಅವಧಿಯಲ್ಲಿ ನ್ಯಾಯಾಲಯಗಳ ಸೀಮಿತ ಕಾರ್ಯನಿರ್ವಹಣೆಯು ಈಗಾಗಲೇ ಜಾರಿಯಲ್ಲಿರುವ ಕಾಯ೯ ವಿಧಾನಗಳ ಮಾನದಂಡ (SOP) ಪ್ರಕಾರ ನಡೆಯಲಿದೆ ಎಂದು ಮಾನ್ಯ ಹೈಕೋರ್ಟ್ ನಿರ್ದಿಷ್ಟವಾಗಿ ಸ್ಪಷ್ಟೀಕರಿಸಿದೆ.
ಆದುದರಿಂದ ಕಾಲಮಿತಿ ಕಾಯಿದೆ 1963 ರ ನಿಯಮ 4 ರ ಉದ್ದೇಶಕ್ಕೆ ಮಾತ್ರ ನ್ಯಾಯಾಲಯಗಳ ಮುಚ್ಚುಗಡೆ ಅವಧಿಯನ್ನು ವಿಸ್ತರಿಸಲಾಗಿದ್ದು ಉಳಿದಂತೆ ನ್ಯಾಯಾಲಯದ ಸೀಮಿತ ಕಾರ್ಯ ನಿರ್ವಹಣೆಯು ಈಗಾಗಲೇ ಜಾರಿಯಲ್ಲಿರುವ ಅಧಿಸೂಚಿತ ಕಾರ್ಯವಿಧಾನಗಳ ಮಾನದಂಡ (SOP) ಪ್ರಕಾರ ಮುಂದುವರಿಯಲಿದೆ ಎಂದು ಮಾನ್ಯ ಹೈಕೋರ್ಟ್ ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ.
ಮಾಹಿತಿ ಹಂಚಿಕೊಂಡವರು: ಪ್ರಕಾಶ್ ನಾಯಕ್; ಶಿರಸ್ತೇದಾರರು; ಜುಡಿಶಿಯಲ್ ಸರ್ವೀಸ್ ಸೆಂಟರ್; ಮಂಗಳೂರು