ಪವರ್ ಟಿವಿ ಬಂದ್ ಪ್ರಕರಣ- ಹೀಗಂತಾರೆ ಹಿರಿಯ ಪತ್ರಕರ್ತ ದಿನೇಶ್ ಕುಮಾರ್
Tuesday, September 29, 2020
ದಿನೇಶ್ ಕುಮಾರ್
ಪವರ್ ಟಿವಿ ಬಂದ್ ಆಗಿದೆ. ಎಲ್ಲವೂ ಸಿನಿಮಾ ಮಾದರಿಯಲ್ಲಿ scripted. ಸಿಸಿಬಿ ಪೊಲೀಸರು ನ್ಯಾಯಾಲಯದಿಂದ ಸರ್ಚ್ ವಾರಂಟ್ ತಂದಿದ್ದಾರೆ. ಬೇಕೆಂದೇ ಸರ್ವರ್ ತೆಗೆದುಕೊಂಡುಹೋಗಿದ್ದಾರೆ. ನ್ಯಾಯಾಲಯ ಇಂಥದ್ದನ್ನು ಸೀಜ್ ಮಾಡಬಾರದು ಅಂತೇನೂ ಹೇಳಿರಲಿಲ್ಲವಲ್ಲ, ಸರ್ವರನ್ನೇ ಹೊತ್ತುಕೊಂಡು ಚಾನಲ್ ಆಫ್ ಏರ್ ಮಾಡಿಯೇ ಅಧಿಕಾರಿಗಳು ಅಲ್ಲಿಂದ ಹೊರಟಿದ್ದಾರೆ.
ರೆಹಮಾನ್ ಹಾಸನ್ ಕಣ್ಣೀರಿಡುತ್ತ ಲೈವ್ ನಲ್ಲಿ ಮಾತಾಡಿದ್ದನ್ನು ನೋಡಿದೆ. ರೆಹಮಾನ್ ಮತ್ತು ಅವರು ಬೀದಿಗೆ ಬಿದ್ದರೆಂದು ಹೇಳುತ್ತಿರುವ 250 ಸಿಬ್ಬಂದಿ ಅಧಿಕಾರಸ್ಥರ, ಪವರ್ ಬ್ರೋಕರ್ ಗಳ, ಕಾರ್ಪರೇಟ್ ಕುಳಗಳ ಆಟದ ಗೊಂಬೆಗಳು ಅಷ್ಟೆ. ಪವರ್ ಟೀವಿ ಅಂತಲ್ಲ, ಎಲ್ಲ ಚಾನಲ್ ಗಳಲ್ಲೂ ಹಾಗೆ. ಬಂಡವಾಳ ಹೂಡಿದವರು ಸೆಟ್ ಮಾಡುವ ಅಜೆಂಡಾಗೆ ಪತ್ರಕರ್ತರು ಕುಣಿಯಬೇಕು, ಅಷ್ಟೆ. ಮಿಕ್ಕಂತೆ ನಾವಾಡುವ ವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಸಂವಿಧಾನದ ನಾಲ್ಕನೇ ಸ್ಥಂಭ, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲವೂ ಮಣ್ಣಾಂಗಟ್ಟೆ. ಇವತ್ತು ಒಬ್ಬ ವ್ಯಕ್ತಿಯನ್ನು ತೋರಿಸಿ ಬೈದುಬಿಡಿ ಎಂದರೆ ಬೈಯಬೇಕು, ನಾಳೆ ಅದೇ ವ್ಯಕ್ತಿಯನ್ನು ಹೊಗಳಿ ಎಂದರೆ ಹೊಗಳಬೇಕು. ಯಾವ ಸ್ವಾತಂತ್ರ್ಯ ಇದೆ ನಿಮ್ಮ ಬಳಿ?
ಒಂದು ಥ್ರಿಲ್ಲರ್ ಸಿನಿಮಾಗೆ ಆಗುವಷ್ಟು ಸರಕು ಇಡೀ ಪ್ರಕರಣದಲ್ಲಿ ಇದೆ. ಪವರ್ ಟಿವಿ ಮಾಲೀಕ ರಾಕೇಶ್ ಶೆಟ್ಟಿ ಮತ್ತು ರಾಮಲಿಂಗಂ ಕನ್ಸ್ಟ್ರಕ್ಷನ್ ಮಾಲೀಕ ಚಂದ್ರಕಾಂತ್ ಸ್ನೇಹಿತರು. ಒಬ್ಬರಿಗೊಬ್ಬರು 'ಸಹಾಯ' ಮಾಡಿಕೊಂಡೇ ಬಂದಿದ್ದಾರೆ. ಚಂದ್ರಕಾಂತ್ ಕೊಟ್ಟ 'ಕೋಟಿಗಟ್ಟಲೆ ಕಮಿಷನ್ ವ್ಯವಹಾರ'ದ ಮಾಹಿತಿ ಹಿಡಿದು ರಾಕೇಶ್ ಶೆಟ್ಟಿ ನೇರವಾಗಿ ವಿಜಯೇಂದ್ರ ಬೆನ್ನು ಬಿದ್ದಿದ್ದಾರೆ. ಪವರ್ ಟೀವಿಯಲ್ಲಿ ವಿಜಯೇಂದ್ರ ವಿರುದ್ಧ ಒಂದಷ್ಟು ವರದಿಗಳು ಪ್ರಸಾರವಾಗಿವೆ. ವಿಜಯೇಂದ್ರ-ರಾಕೇಶ್ ನಡುವೆ ರಾಜೀಕಬೂಲಿ ಮಾಡಿಸಲು ಬ್ರೋಕರ್ ಸಂಬರ್ಗಿ ಯತ್ನಿಸಿದ್ದಾನೆ. ಅದು ಸಾಧ್ಯವೇ ಇದ್ದಾಗ ನೇರವಾಗಿ ಚಂದ್ರಕಾಂತನನ್ನೇ ಹಿಡಿದು ಅವನಿಂದಲೇ ರಾಕೇಶ್ ವಿರುದ್ಧ ದೂರು ಕೊಡಿಸಲಾಗಿದೆ. ಆಮೇಲೆ ರಾಕೇಶ್ ಮೇಲೆ, ಪವರ್ ಟೀವಿ ಮೇಲೆ ರೇಡು, ಆಫ್ ಏರ್ ಆದ ಚಾನಲ್, ರೆಹಮಾನ್ ಕಣ್ಣೀರು ಇತ್ಯಾದಿಗಳು. ಇದು ಒನ್ ಲೈನ್ ಸ್ಟೋರಿ.
ಇಡೀ ಘಟನೆ ಒಂದು ಕೆಟ್ಟ ನಿದರ್ಶನವನ್ನು ಹುಟ್ಟುಹಾಕಿದೆ. ನಿನ್ನೆ ನಡೆದ ಘಟನಾವಳಿಗಳು ಶಾ ಮಾದರಿ ಆಡಳಿತವನ್ನು ನೆನಪಿಸುತ್ತದೆ. ಕರ್ನಾಟಕದಲ್ಲಿ ಇಂಥವು ನಡೆದಿದ್ದು ವಿರಳ. ಪೊಲೀಸರನ್ನು ಇಷ್ಟು ನಿರ್ಲಜ್ಜೆಯಿಂದ ಬಳಸಿಕೊಳ್ಳುತ್ತಿರುವುದನ್ನು ಗಮನಿಸಿದರೆ ಇದು ಮುಂದಿನ ದಿನಗಳ ಅನಾಹುತಗಳ ಸಂಕೇತದಂತೆ ತೋರುತ್ತದೆ. ಒಂದನ್ನು ಮಾಡಿ ದಕ್ಕಿಸಿಕೊಂಡರೆ ಮಿಕ್ಕಿದ್ದೆಲ್ಲವೂ ಸಲೀಸಲ್ಲವೇ? ರಾಕೇಶ್ ಶೆಟ್ಟಿಯ ಮೇಲೆ ದೂರು ದಾಖಲಾಗುವುದಕ್ಕೆ ಮುನ್ನ ಹೆಚ್ಚುಕಡಿಮೆ ಅದೇ ಸೆಕ್ಷನ್ ಗಳ ಅಡಿಯಲ್ಲಿ ವಿಜಯೇಂದ್ರ ಮೇಲೂ ದೂರು ದಾಖಲಾಗಿತ್ತು. ಆದರೆ Crack Down ಆಗುತ್ತಿರುವುದು ರಾಕೇಶ್ ಶೆಟ್ಟಿ ಮೇಲೆ ಮಾತ್ರ. ಅಲ್ಲಿಗೆ ಎಲ್ಲವೂ ಸ್ಪಷ್ಟ.
ಪವರ್ ಟೀವಿ ಮೇಲಿನ ದಾಳಿಯ ಕುರಿತು ಮಿಕ್ಕ ಚಾನಲ್ ಗಳು ಯಾಕೆ ಮಾತಾಡುತ್ತಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಅವರು ಮಾತನಾಡೋದಿಲ್ಲ. ಯಾಕೆಂದರೆ ಅವರ ಮಾಲೀಕರು ಸೆಟ್ ಮಾಡುವ ಅಜೆಂಡಾದಲ್ಲಿ ಅದು ಬರುವುದಿಲ್ಲ. 'ನಿಮ್ಮನ್ನು ರಾಜಾಹುಲಿ ಅಂತ ಕರೆದಿದ್ದು ನಾವೇ, ನಮಗೇ ಹೀಗೆ ಮಾಡಿದಿರಲ್ಲ, 250 ಕುಟುಂಬಗಳನ್ನು ಬೀದಿಗೆ ತಂದಿರಲ್ಲ ಯಡಿಯೂರಪ್ಪನವರೇ' ಎಂದು ರೆಹಮಾನ್ ಅಳುತ್ತ ಮಾತನಾಡುತ್ತಿರುವುದನ್ನು ನೋಡಿ ನೋವಾಯಿತು. ಇತರ ಚಾನಲ್ ನವರು ನನ್ನ ಹಾಗೇ ಕಣ್ಣೀರಿಡುತ್ತ ಲೈವ್ ಮಾಡುವ ಕಾಲ ಬರಬಹುದು ಎಂದರು ಅವರು. ಹಾಗೇನೂ ಗಾಬರಿ ಆಗಬೇಕಿಲ್ಲ. ಆಳುವ ಪಕ್ಷಗಳ, ಕಾರ್ಪೊರೇಟ್ ಧಣಿಗಳ, ಅಧಿಕಾರಸ್ಥರ ಬೂಟು ನೆಕ್ಕುತ್ತಿರುವವರೆಗೆ ಎಲ್ಲರೂ ಸುರಕ್ಷಿತರು. ನೀವೇ 'ರಾಜಾಹುಲಿ' ಎಂದು, ಇನ್ನೊಂದು ದಿನ ನೀವೇ 'ಇದೆಂಥ ಇಲಿ' ಎಂದಿರೋ ಅಪಾಯ ತಪ್ಪಿದ್ದಲ್ಲ. ಇಷ್ಟೇ ಸತ್ಯ.