ಅಡಿಕೆ ವ್ಯಾಪಾರಿಗಳಿಂದ ಲಕ್ಷಾಂತರ ಲೂಟಿ ಆರೋಪ: ಇನ್ಸ್‌ಪೆಕ್ಟರ್ ಯೋಗೇಶ್ ಪರಾರಿ, ಸಸ್ಪೆಂಡ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಡಿಕೆ ವ್ಯಾಪಾರಿಗಳು ಮತ್ತು ಮಾರಾಟಗಾರರಿಂದ ಲಕ್ಷಾಂತರ ರೂ. ಹಣ ಲೂಟಿ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಯೋಗೇಶ್ ಅವರನ್ನು ಪೊಲೀಸ್ ಇಲಾಖೆಯಿಂದ ಸಸ್ಪೆಂಡ್ ಮಾಡಲಾಗಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಘಟನೆಯ ವಿವರ:
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಅಡಿಕೆ ವ್ಯಾಪಾರಿಗಳಿಂದ ಲಕ್ಷಾಂತರ ರೂ. ಹಣ ಲೂಟಿ ಮಾಡಿದ ಪ್ರಕರಣ ಪತ್ತೆಯಾಯಿತು. ಪ್ರಕರಣದ ಆರೋಪಿಗಳಾದ ಸಬ್ ಇನ್ಸ್‌ಪೆಕ್ಟರ್ ಹಾಗೂ ಗ್ಯಾಂಗ್ ಅನ್ನು ಪಶ್ಚಿಮ ವಿಭಾಗ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದರು. ಇದೀಗ ಮತ್ತೊಂದು ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಈ ಪ್ರಕರಣದಲ್ಲಿ ಎಸ್ ಜೆ ಪಾರ್ಕ್ ಇನ್ಸ್‌ಪೆಕ್ಟರ್ ಯೋಗೇಶ್ ಭಾಗಿಯಾಗಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.
ಈ ಬೆಚ್ಚಿಬೀಳಿಸುವ ಮಾಹಿತಿ ಹೊರಬೀಳುತ್ತಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಕ್ಷಣ ಆದೇಶ ಹೊರಡಿಸಿ ಇನ್ಸ್‌ಪೆಕ್ಟರ್ ಯೋಗೇಶ್ ಅವರನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ. ಜೊತೆಗೆ ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಲೆ ಬೀಸಲಾಗಿದೆ.
ತುಮಕೂರಿನ ತೆಂಗು ಅಡಿಕೆ ವ್ಯಾಪಾರಿ ಮೋಹನ್ ಎಂಬುವರು ಚಿಕ್ಕಪೇಟೆ ಬಳಿ ಇರುವ ಅಂಗಡಿಯೊಂದಕ್ಕೆ ಅಡಿಕೆ ಮಾರಾಟ ಮಾಡಲಾಗಿತ್ತು. ವ್ಯವಹಾರದ ಬಾಕಿ ಹಣ ತರುವಂತೆ ಕೆಲಸಗಾರರಿಗೆ ಸೂಚಿಸಿದ್ದರು. ಆಗಸ್ಟ್ 19 ರಂದು ಹಣ ಪಡೆದು ಸಿಟಿ ಮಾರ್ಕೆಟ್ ಬಳಿ ಕಾರಿನಲ್ಲಿ ಬರುತ್ತಿದ್ದ ವೇಳೆ ಎಸ್ .ಜೆ. ಪಾರ್ಕ್ ಸಬ್ ಇನ್ಸ್‌ಪೆಕ್ಟರ್ ಜೀವನ್ ಕುಮಾರ್ ಹಾಗೂ ಜ್ಞಾನ ಪ್ರಕಾಶ್ ತಮಡ ಅವರನ್ನು ಅಡ್ಡಗಟ್ಟಿ ಕಿಡ್ನಾಪ್ ಮಾಡಿ 26 ಲಕ್ಷ ರೂ. ಹಣ ದೋಚಿದ್ದರು ಎನ್ನಲಾಗಿದೆ.
ಈ ಕುರಿತು ಸಿ.ಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್, ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಇತರೆ ಆರೋಪಿಗಳನ್ನು ಬಂಧಿಸಿದರು. ನಂತರ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇನ್ಸ್‌ಪೆಕ್ಟರ್ ಯೋಗೇಶ್ ಕೂಡ ಪಾಲುದಾರರಾಗಿರುವ ವಿಚಾರ ಬಯಲಾಗಿದೆ. ಸದ್ಯಕ್ಕೆ ಇನ್ಸ್‌ಪೆಕ್ಟರ್ ತಲೆಮರೆಸಿಕೊಂಡಿದ್ದು, ಆರೋಪಿಗೆ ಶೋಧ ಮುಂದುವರೆದಿದೆ.