-->

ನನಗೆ ಅಂಗಡಿ ಅನ್ನದ ಋಣವಿದೆ: ಅಗಲಿದ ಕೇಂದ್ರ ಸಚಿವರ ಬಗ್ಗೆ ದಿನೇಶ್ ಅಮೀನ್ ಮಟ್ಟು

ನನಗೆ ಅಂಗಡಿ ಅನ್ನದ ಋಣವಿದೆ: ಅಗಲಿದ ಕೇಂದ್ರ ಸಚಿವರ ಬಗ್ಗೆ ದಿನೇಶ್ ಅಮೀನ್ ಮಟ್ಟು


ಬರಹ;ದಿನೇಶ್ ಅಮೀನ್ ಮಟ್ಟು

ನನಗೆ ಸುರೇಶ್ ಅಂಗಡಿಯವರ ಅನ್ನದ ಋಣ ಸ್ವಲ್ಪ ಇದೆ, ಅವರ ದೆಹಲಿ ಮನೆಯಲ್ಲಿ ಹಲವಾರು ಬಾರಿ ಊಟ ಮಾಡಿದ್ದೇನೆ. ದೆಹಲಿಯಲ್ಲಿರುವ ಕೆಲವು ಸಂಸದರ ಬಂಗಲೆಗಳು ಅನ್ನ-ಆಶ್ರಯದ ತಾಣಗಳು. ಇಂತಹ ಸಂಸದರಲ್ಲಿ ಸುರೇಶ್ ಅಂಗಡಿಯವರೂ ಒಬ್ಬರು.

ಪಾಟೀಲ ಪುಟ್ಟಪ್ಪನವರು ದೆಹಲಿಗೆ ಬಂದರೆ ಅಂಗಡಿಯವರ ಮನೆಯಲ್ಲಿಯೇ ಬಿಡಾರ ಹೂಡುತ್ತಿದ್ದರು, ಯಾರಾದರೂ ಸ್ವಾಮಿಗಳೂ ಬಂದರೂ ಅಲ್ಲಿಯೇ ತಂಗುವವರು. ಅವರನ್ನು ಭೇಟಿ ಮಾಡಲು ಪತ್ರಕರ್ತರನ್ನೂ ಸುರೇಶ್ ಅಂಗಡಿಯವರು ಊಟದ ಹೊತ್ತಿಗೆ ಕರೆಸಿ ಆತಿಥ್ಯ ಮಾಡುತ್ತಿದ್ದರು. ಅಪ್ಪಟ ಉತ್ತರಕರ್ನಾಟಕದ ಲಿಂಗಾಯತರ ಮನೆ ಊಟ. ಅವರ ಮನೆಯ ಊಟದ ವಿಶೇಷತೆಯೆಂದರೆ ಬೆಳಗಾವಿ ಕರದಂಟು.

. ಅನಂತಕುಮಾರ್ ಅವರ ಅತಿಥಿ ಸೇವೆ ಬಗ್ಗೆ ಅವರ ಸಾವಿನ ವಾರ್ಷಿಕದ ದಿನ ಮೊನ್ನೆ ಪತ್ನಿ ತೇಜಸ್ವಿನಿಯವರು ಪತ್ರಿಕೆಯಲ್ಲಿ ಬರೆದಿದ್ದರು. ಅದನ್ನು ಓದುತ್ತಿದ್ದಾಗ ಅನಂತಕುಮಾರ್ ದೆಹಲಿ ಮನೆಯ ಆತಿಥ್ಯ ನೆನಪಾಗಿತ್ತು. ದೆಹಲಿ ಮನೆಯಲ್ಲಿ ತೇಜಸ್ವಿನಿಯವರನ್ನು ನಾನೆಂದು ನೋಡಿರಲಿಲ್ಲ. ಆದರೆ ಅಲ್ಲಿ ಕಾಳಿದಾಸ ಎಂಬ ಅಡುಗೆಯವನಿದ್ದ, ಅದ್ಭುತ ವೆಜಿಟೇರಿಯನ್ ಅಡಿಗೆ ಮಾಡುತ್ತಿದ್ದ. ಅತಿಥಿ ಉಪಚಾರವನ್ನು ಅನಂತಕುಮಾರ್ ಪ್ರೀತಿಯಿಂದ ಮಾಡುತ್ತಿದ್ದರು.

ತುಮಕೂರು ಸಂಸದ ಜಿ.ಎಸ್.ಬಸವರಾಜ್ ಮನೆ ಒಂದು ರೀತಿಯಲ್ಲಿ ಸಿದ್ದಗಂಗಾ ಮಠದ ಶಾಖೆ ಇದ್ದ ಹಾಗೆ. ಅಲ್ಲಿ ನಿತ್ಯ ದಾಸೋಹ ನಡೆಯುತ್ತಾ ಇರುತ್ತದೆ. ಅವರಿಗೆ ಒಬ್ಬರೇ ಕೂತು ಊಟ ಮಾಡಿ ಅಭ್ಯಾಸ ಇಲ್ಲ. ಅವರ ಬಂಗಲೆಯಲ್ಲಿ ಯಾವಾಗಲೂ ಕರ್ನಾಟಕದಿಂದ ಬಂದಿದ್ದ ಒಂದಷ್ಟು ಮಂದಿಯ ವಾಸ್ತವ್ಯ ಇದ್ದೇ ಇರುತ್ತಿತ್ತು.

10-15 ವರ್ಷಗಳ ಹಿಂದೆ ಮನುಷ್ಯ ಸಂಬಂಧಗಳ ಮೇಲೆ ಈಗಿನಂತೆ ರಾಜಕೀಯದ ನೆರಳು ಚಾಚಿರಲಿಲ್ಲ. ದೆಹಲಿಯಲ್ಲಿದ್ದ ಪತ್ರಕರ್ತರು,ರಾಜಕಾರಣಿಗಳು, ಅಧಿಕಾರಿಗಳದ್ದೆಲ್ಲ ಒಂದೇ ಪಕ್ಷವಾಗಿತ್ತು, ಅದು ಕರ್ನಾಟಕ ಪಕ್ಷ.

ಈಗ ಅಂತಹ ವಾತಾವರಣ ಇಲ್ಲ, ಎಲ್ಲವೂ ರಾಜಕೀಯಮಯ. ಇದರಿಂದಾಗಿ ನಾನು ಬೆಂಗಳೂರಿಗೆ ಹಿಂದಿರುಗಿದ ನಂತರ ಅನಂತಕುಮಾರ್ ಅವರನ್ನಾಗಲಿ, ಸುರೇಶ್ ಅಂಗಡಿಯವರನ್ನಾಗಲಿ ಭೇಟಿ ಮಾಡಲು ಸಾಧ್ಯವಾಗಲೇ ಇಲ್ಲ, ಅವರಿಬ್ಬರನ್ನು ಭೇಟಿ ಮಾಡಬೇಕೆಂದರೂ ಈಗ ಸಾಧ್ಯ ಇಲ್ಲ. ಹೋಗಿ ಬನ್ನಿ ಎಂದಷ್ಟೇ ಹೇಳಬಹುದು.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99