-->

ಮುಸ್ಲಿಂ ಕಾನೂನು: ಪತ್ನಿಯ ಒಪ್ಪಿಗೆ ಇಲ್ಲದೆ ಪತಿ 2ನೇ ಮದುವೆಯಾದರೆ ಮೊದಲ ಪತ್ನಿ ವಿಚ್ಛೇದನ ಪಡೆಯಬಹುದೇ?

ಮುಸ್ಲಿಂ ಕಾನೂನು: ಪತ್ನಿಯ ಒಪ್ಪಿಗೆ ಇಲ್ಲದೆ ಪತಿ 2ನೇ ಮದುವೆಯಾದರೆ ಮೊದಲ ಪತ್ನಿ ವಿಚ್ಛೇದನ ಪಡೆಯಬಹುದೇ?


ಬೆಂಗಳೂರು: ವಿವಾಹಿತ ಮುಸ್ಲಿಂ ಮಹಿಳೆಯ ಇಚ್ಛೆಗೆ ವ್ಯತಿರಿಕ್ತವಾಗಿ ಎರಡನೇ ಮದುವೆಯಾಗುವ ಆಕೆಯ ಗಂಡನ ನಡೆ ಕ್ರೌರ್ಯ ಎಂದು ಕರ್ನಾಟಕ ಹೈಕೋರ್ಟ್‌ ವ್ಯಾಖ್ಯಾನಿಸಿದೆ. ಇಂತಹ ಕ್ರೌರ್ಯಕ್ಕೆ ಒಳಗಾದ ಮೊದಲ ಪತ್ನಿ ತನ್ನ ಗಂಡನಿಂದ ವಿಚ್ಛೇದನ ಪಡೆಯಲು ಅರ್ಹಳು ಎಂದು ಅದು ಆದೇಶಿಸಿದೆ.

ವಿಜಯಪುರ ಕೌಟುಂಬಿಕ ನ್ಯಾಯಾಲಯದ ಮೊದಲನೇ ಪತ್ನಿ ಜತೆಗಿನ ವಿವಾಹವನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯೂಸಫ್‌ ಪಟೇಲ್‌ ಎಂಬವರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಹಾಗೂ ನ್ಯಾಯಮೂರ್ತಿ ಪಿ.ಕೃಷ್ಣ ಭಟ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಂ ಕಾನೂನಿನ ಪ್ರಕಾರ ಎರಡನೇ ಮದುವೆ ಕಾನೂನು ಬಾಹಿರವಾಗದಿದ್ದರೂ ವಿವಾಹಿತ ಮುಸ್ಲಿಂ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಎರಡನೇ ಮದುವೆಯಾಗುವ ಆಕೆಯ ಗಂಡನ ನಡೆ ಕ್ರೌರ್ಯವಾಗಿದೆ. ಗಂಡ ತನ್ನ ಮೊದಲ ಹೆಂಡತಿಯ ಅನುಮತಿ ಯಾ ಒಪ್ಪಿಗೆ ಇಲ್ಲದೆ ಎರಡನೆ ಮದುವೆ ಮಾಡಿಕೊಂಡರೆ ಅದರ ಆಧಾರದ ಮೇಲೆ ಆಕೆ ಸುಲಭವಾಗಿ ವಿಚ್ಛೇದನ ಪಡೆಯಬಹುದು. ಇದಕ್ಕೆ ಗಂಡನ ಆಕ್ಷೇಪವನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ವಿಭಾಗೀಯ ನ್ಯಾಯಪೀಠ ಸ್ಪಷ್ಟಪಡಿಸಿದೆ.


ಗಂಡನಾದವನು ತನ್ನ ಹೆಂಡತಿಯ ಮೇಲೆ ನಡೆಸುವ ದೌರ್ಜನ್ಯವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಯಹೂದಿ ಎಂಬ ಧಾರ್ಮಿಕ ತಳಹದಿಯಲ್ಲಿ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಯಾವುದೇ ಮತ-ಪಂಥಕ್ಕೆ ಸೇರಿದ ಮಹಿಳೆ ಕ್ರೌರ್ಯಕ್ಕೆ ಒಳಗಾಗಿದ್ದಾಳೆ ಎಂದರೆ ಅದು ಕ್ರೌರ್ಯ ಮಾತ್ರವೇ ಆಗಿರುತ್ತದೆ ಹೊರತು ಬೇರೇನೂ ಅಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.

ಒಂದು ವೈವಾಹಿಕ ಜೀವನದಲ್ಲಿ ಕೌಟುಂಬಿಕ ದೌರ್ಜನ್ಯದ ಪರಿಭಾಷೆಯು ವ್ಯಾಖ್ಯಾನಕ್ಕೆ ಅತೀತವಾಗಿದೆ ಎಂದು ನ್ಯಾಯಪೀಠ ವಿಶ್ಲೇಷಿಸಿ ತೀರ್ಪಿ ನೀಡಿದ್ದು, ಅರ್ಜಿದಾರ ಯೂಸಫ್‌ ಪಟೇಲ್‌ ಅವರ ಮೇಲ್ಮನವಿಯನ್ನು ವಜಾಗೊಳಿಸಿದೆ.

ಪ್ರಕರಣದ ವಿವರ

ವಿಜಯಪುರ ಜಿಲ್ಲೆಯ ಯೂಸಫ್‌ ಪಟೇಲ್‌ ಅದೇ ನಗರದ ರಮ್ಜಾನ್‌ ಬಿ ಎಂಬವರನ್ನು 2014, ಜೂ.17ರಂದು ಮುಸ್ಲಿಂ ಷರಿಯತ್ ಕಾನೂನು ಪ್ರಕಾರ ಮದುವೆಯಾಗಿದ್ದರು. ಆದರೆ, ವಿವಾಹವಾಗಿ ಸಾಕಷ್ಟು ವರ್ಷ ಕಳೆದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದಾಗಿ ಯೂಸಫ್‌ ಪಟೇಲ್‌ ಎರಡನೇ ಮದುವೆಯಾಗಿದ್ದರು. ಇದಾದ ಬಳಿಕ, ತನ್ನ ಗಂಡನ ಮನೆಯವರು ಕಿರುಕುಳ ನೀಡುತ್ತಿರುವುದರಿಂದ ವಿಚ್ಛೇದನ ನೀಡಲು ಆದೇಶಿಸಬೇಕು ಎಂದು ಕೋರಿ ರಮ್ಜಾನ್‌ ಬಿ ವಿಜಯಪುರ ಕೌಟುಂಬಿಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

ಅವರು ಸಲ್ಲಿಸಿದ್ದ ಅರ್ಜಿಯನ್ನು 2018, ಏ.2ರಂದು ಪುರಸ್ಕರಿಸಿದ ನ್ಯಾಯಾಲಯ ವಿಚ್ಛೇದನ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಯೂಸುಫ್ ಹೈಕೋರ್ಟ್‌ ಮೊರೆ ಹೋಗಿದ್ದರು.


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99