ಕೊರೋನಾ ಗೆದ್ದ ಗಾನಕೋಗಿಲೆ : ಎಸ್‌ಪಿಬಿಗೆ ನೆಗೆಟಿವ್ ರಿಪೋರ್ಟ್, ಅಭಿಮಾನಿಗಳು ನಿರಾಳ


ಚೆನ್ನೈ: ಹಲವು ದಿನಗಳ ಹೋರಾಟದ ಬಳಿಕ ಕೊನೆಗೂ ಗಾನಕೋಗಿಲೆ, ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಕೊರೊನಾ ವಿರುದ್ಧ ಜಯ ಸಾಧಿಸಿದ್ದಾರೆ. ಅವರ ಲ್ಯಾಬ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಖ್ಯಾತ ಚಿತ್ರ ಸಾಹಿತಿ ಕೆ ಕಲ್ಯಾಣ್ ತಿಳಿಸಿದ್ದಾರೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಸ್‍ಪಿಬಿ ಬಾಲ್ಯದ ಸ್ನೇಹಿತ ಓಬಯ್ಯ ಅವರ ಜೊತೆ ನಾನು ಮಾತನಾಡಿದೆ. ಜೊತೆಗೆ ಅವರ ಕುಟುಂಬ ಸದಸ್ಯರ ಜೊತೆಯೂ ಈ ಮಾಹಿತಿಯನ್ನು ಖಚಿತಪಡಿಸಿಕೊಂಡಿದ್ದು, ಹಿರಿಯ ಗಾಯಕ ಕೊರೋನಾ ಮುಕ್ತರಾಗಿದ್ದಾರೆ ಎಂದು ಹೇಳಿದರು.


ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್‍ಬಿಪಿಗೆ ಚಿಕಿತ್ಸೆ ನೀಡಿದ್ದವು. ಎಸ್‍ಪಿಬಿ ಅವರು ಕೊರೊನಾ ಗೆದ್ದು ಬರಲಿ ಎಂದು ವಿಶ್ವದೆಲ್ಲೆಡೆ ಪ್ರಾರ್ಥನೆಗಳು ನಡೆದಿತ್ತು. ಈಗ ಗುಣಮುಖರಾಗಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

ಬೆಳಗ್ಗೆಯಿಂದ ಎಸ್‌.ಪಿ.ಬಿ. ಅವರ ಆರೋಗ್ಯದಲ್ಲಿ ಬಹಳಷ್ಟು ಚೇತರಿಕೆ ಕಂಡು ಬಂದಿತ್ತು. ಈಗ ಎಸ್‍ಪಿಬಿಯವರ ಕೊರೊನಾ ವರದಿ ನೆಗೆಟಿವ್ ಬಂದಿದೆ. ಕಳೆದ 19 ದಿನಗಳಿಂದ ಎಸ್‍ಪಿಬಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತು. ಕೊರೊನಾ ಸೋಂಕಿನಿಂದ ಶ್ವಾಸಕೋಶಗಳು ತೀವ್ರವಾಗಿ ಹಾನಿಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ದೇಹದ ಒಳಗೆ ಕೆಲವೆಡೆ ರಕ್ತಸ್ರಾವ ಉಂಟಾಗಿತ್ತು. ಆದ್ದರಿಂದ ಎಕ್ಮೋ ಮೆಷಿನ್ ಅಳವಡಿಸಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದರು.

ಎಸ್‍ಪಿಬಿಯವರ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದು ಅವರು ಬೇಗ ಗುಣಮುಖರಾಗಲಿ ಎಂದು ಇಡೀ ದೇಶಾದ್ಯಂತ ಅವರ ಅಭಿಮಾನಿಗಳು ಪ್ರಾರ್ಥನೆ ಶುರು ಮಾಡಿದ್ದಾರೆ. ಜೊತೆಗೆ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಬೇಗ ಹುಷಾರಾಗಲಿ ಎಂದು ಬೇಗ ಗುಣಮುಖರಾಗಿ ಎಸ್‍ಪಿಬಿ ಸರ್ ಎಂದು ಗುರುವಾರ ಟ್ಟಿಟ್ಟರ್ ನಲ್ಲಿ ಟ್ರೆಂಡ್ ಮಾಡಲಾಗಿತ್ತು. ಸೆಲೆಬ್ರಿಟಿಗಳು ಸೇರಿದಂತೆ ಎಸ್‍ಪಿಬಿಯವರ ಸಾವಿರಾರು ಅಭಿಮಾನಿಗಳು ಟ್ವೀಟ್ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದರು.

ಎಸ್‍ಪಿಬಿ ಜೊತೆಗೆ ಅವರ ಪತ್ನಿ ಸಾವಿತ್ರಿಯವರಿಗೂ ಕೂಡ ಕೊರೊನಾ ಸೋಂಕು ಇರುವುದು ದೃಢವಾಗಿತ್ತು. ಅವರನ್ನು ಕೂಡ ಎಸ್‍ಪಿಬಿಯವರು ದಾಖಲಾಗಿರುವ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ.