
ಸಿಎಂ ಬಿ.ಎಸ್.ವೈ.- ಸಂತೋಷ್ ಮಾತುಕತೆ: ರಾಜಕೀಯ ವಿದ್ಯಮಾನದ ಮಹತ್ವದ ಚರ್ಚೆ
ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿ ಮಾಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನಡೆದ ಸುದೀರ್ಘ ಭೇಟಿಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನ ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ವ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಕೆಲ ದಿನಗಳ ಹಿಂದೆ, ಸಂತೋಷ್ ಅವರು ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಡಾ| ಕೆ. ಸುಧಾಕರ್ ಅವರನ್ನು ಪಕ್ಷದ ಕಚೇರಿಗೆ ಸಚಿವರಾದ ಕರೆಸಿಕೊಂಡು ಚರ್ಚೆ ನಡೆಸಿದ್ದರು. ಅದರ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಅವರನ್ನೂ ಭೇಟಿಯಾಗಿ ಸಮಾಲೋಚಿಸಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ರಾಜ್ಯ ಬಿಜೆಪಿ ಸರಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಂತೋಷ್ ಅವರು ಸಿಎಂ ಜತೆ ಶನಿವಾರ ಚರ್ಚಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳ ಜತೆಗೆ ಪಕ್ಷ ಸಂಘಟನೆಗೂ ಒತ್ತು ನೀಡುವ ಬಗ್ಗೆ ಉಭಯ ನಾಯಕರು ವಿಸ್ತೃತವಾಗಿ ಸಮಾಲೋಚಿಸಿದ್ದಾರೆ ಎನ್ನಲಾಗಿದೆ.
ಶನಿವಾರ ‘ಕಾವೇರಿ’ ನಿವಾಸಕ್ಕೆ ಆಗಮಿಸಿದ ಸಂತೋಷ್ ಮತ್ತು ರಾಜ್ಯ ಬಿಜೆಪಿ ಸಂಘಟನ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಅವರೊಂದಿಗೆ ಯಡಿಯೂರಪ್ಪ ಉಪಾಹಾರ ಸೇವಿಸಿದರು.
ಬಳಿಕ ಸುಮಾರು 25 ನಿಮಿಷಗಳ ಕಾಲ ಮೂವರೂ ಪ್ರತ್ಯೇಕವಾಗಿ ಚರ್ಚಿಸಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೂ ಮಾತನಾಡಿದ ಬಳಿಕ ಬಿ.ಎಲ್. ಸಂತೋಷ್ ಮತ್ತು ಅರುಣ್ ಕುಮಾರ್ ನಿರ್ಗಮಿಸಿದರು.
ಮುಂದಿನ ಆಡಳಿತ ವೈಖರಿ, ಪಕ್ಷ ಮತ್ತು ಸರಕಾರದ ಆದ್ಯತೆಗಳು, ಇತ್ತೀಚೆಗೆ ಪಕ್ಷಕ್ಕೆ ಸೇರಿದವರಿಗೆ ಸರಕಾರದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂಬ ಭಾವನೆ ಮೂಡದಂತೆ ಮುಂದುವರಿಯುವುದು. ಕೋವಿಡ್ 19, ಪ್ರವಾಹ ನಿಯಂತ್ರಣಕ್ಕೆ ಬರುತ್ತಿದ್ದಂತೆ ಜನಪರ ಯೋಜನೆಗಳ ಜಾರಿಗೆ ಒತ್ತು ನೀಡುವುದು, ಪಕ್ಷ ಸಂಘಟನೆಗಾಗಿ ದುಡಿದವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದು ಮೊದಲಾದವುಗಳ ಬಗ್ಗೆ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ.