ಸಾಗರಮಾಲ ಯೋಜನೆ ಕೈಬಿಡುವಂತೆ ಒತ್ತಾಯ: ಮೀನುಗಾರರ ಪತ್ರ ಚಳವಳಿ ಆರಂಭಕಾರವಾರ - ಸಾಗರಮಾಲಾ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಮೀನುಗಾರರು ಪತ್ರ ಚಳುವಳಿ ಪ್ರಾರಂಭಿಸಿದ್ದಾರೆ. ನಗರದ ಮುಖ್ಯ ಅಂಚೆ ಕಛೇರಿ ಬಳಿ ಜಮಾಯಿಸಿದ ಸುಮಾರು ಐವತ್ತಕ್ಕೂ ಅಧಿಕ ಮೀನುಗಾರರು ಪ್ರಧಾನಿಗೆ ಪತ್ರವನ್ನ ಬರೆದಿದ್ದು ಸಾಗರಮಾಲಾ ಯೋಜನೆಯಡಿ ಇಲ್ಲಿನ ವಾಣಿಜ್ಯ ಬಂದರಿನ ವಿಸ್ತರಣೆ ಮಾಡಲಾಗುತ್ತಿದೆ. ಆದರೆ ಈ ಯೋಜನೆಯಿಂದಾಗಿ ಮೀನುಗಾರರು ಮೀನುಗಾರಿಕೆ ನಡೆಸಲು ಅಡ್ಡಿಯಾಗಲಿದೆ. ಈ ನಿಟ್ಟಿನಲ್ಲಿ ಮೀನುಗಾರರ ಸಮಸ್ಯೆ ಕುರಿತು ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆಯಲು ಕಾರವಾರದಿಂದ ಇಂಗ್ಲೀಷ್ ಹಾಗೂ ಕನ್ನಡ ಭಾಷೆಯ ಒಟ್ಟೂ ಒಂದು ಸಾವಿರ ಪತ್ರಗಳನ್ನ ಪೋಸ್ಟ್ ಮೂಲಕ ಪ್ರಧಾನಿ ಕಛೇರಿಗೆ ಕಳುಹಿಸಿಕೊಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಸಾಗರಮಾಲಾ ಯೋಜನೆಯನ್ನ ಜಾರಿಗೊಳಿಸದಂತೆ ಈ ಮೂಲಕ ಪ್ರಧಾನಿಗೆ ಮನವಿ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಕರಾವಳಿಯ ಪ್ರತಿ ತಾಲ್ಲೂಕಿನಿಂದಲೂ ಪ್ರಧಾನಿಗೆ ಪತ್ರಗಳನ್ನ ಕಳುಹಿಸಿಕೊಡಲು ನಿರ್ಧರಿಸಲಾಗಿದೆ.